ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಗಂಗೊಳ್ಳಿ ಶಾಖೆ ಆಶ್ರಯದಲ್ಲಿ ನಬಾರ್ಡ್ ಸಹಯೋಗದೊಂದಿಗೆ ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ ನಿವೃತ್ತ ಉಪ ಮಹಾಪ್ರಬಂಧಕ ಕೃಷ್ಣ ಬಿಲ್ಲವ ಒಂದು ಶತಮಾನದಷ್ಟು ಸುದೀರ್ಘ ಇತಿಹಾಸವನ್ನು ಹೊಂದಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಹಕಾರ ಕ್ಷೇತ್ರಕ್ಕೆ ಆದರ್ಶವಾಗಿದೆ. ವಿವಿಧ ಯೋಜನೆ ಹಾಗೂ ಸವಲತ್ತುಗಳನ್ನು ಗ್ರಾಹಕರಿಗೆ ನೀಡುತ್ತಾ, ಗ್ರಾಹಕ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್ ರೈತಾಪಿ ವರ್ಗದ ಮತ್ತು ಗ್ರಾಹಕರ ಸೇವೆಯಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದೆ. ಸಹಕಾರ ಕ್ಷೇತ್ರದ ಮೂಲಕ ಆಧುನಿಕ ಬ್ಯಾಂಕಿಂಗ್ ಸೇವೆಯನ್ನು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ನೀಡುತ್ತಿರುವ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಡಾ.ಎಂ.ಎನ್.ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ಬಲಿಷ್ಠವಾಗಿ ಬೆಳೆಯುತ್ತಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯ ಬಿ.ರಾಘವೇಂದ್ರ ಪೈ ಶುಭಾಶಂಸನೆಗೈದರು. ಸಂಪನ್ಮೂಲ ವ್ಯಕ್ತಿಯಾಗಿದ್ದ ಮರವಂತೆ-ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಸಿಇಒ ಸುರೇಶ ಅಳ್ವೆಗದ್ದೆ ಮಾಹಿತಿ ನೀಡಿದರು. ಗ್ರಾಹಕರು ಹಾಗೂ ಬ್ಯಾಂಕಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಗಣೇಶ್ ಭಟ್ ಸ್ವಾಗತಿಸಿದರು. ಶಾಖಾ ವ್ಯವಸ್ಥಾಪಕ ರಾಘವೇಂದ್ರ ಎಂ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಕ್ರಂ ತಗ್ಗರ್ಸೆ ಕಾರ್ಯಕ್ರಮ ನಿರ್ವಹಿಸಿದರು. ಸುಧೀಂದ್ರ ವಂದಿಸಿದರು.