ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಅತ್ಯುನ್ನತ ಶಿಕ್ಷಣ ಇಂದಿನ ಜೀವನದ ಪ್ರಮುಖ ಘಟ್ಟವಾಗಿದೆ. ಉತ್ತಮ ಶಿಕ್ಷಣವು ಉತ್ತಮ ಉದ್ಯೋಗವನ್ನು ನೀಡುವುದಲ್ಲದೆ ಸಮಾಜದಲ್ಲಿ ಗೌರವವನ್ನು ತಂದು ಕೊಡುತ್ತದೆ. ಗೌಡ ಸಾರಸ್ವತ ಸಮಾಜಕ್ಕೆ ಸರಕಾರದಿಂದ ಯಾವುದೇ ಮೀಸಲಾತಿ, ಸರಕಾರಿ ಸೌಲಭ್ಯಗಳು ದೊರೆಯದಿರುವುದರಿಂದ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಉತ್ತಮ ಅಂಕಗಳಿಸುವತ್ತ ಗಮನಹರಿಸಬೇಕು. ಇಂದು ನೀಡಿದ ಸಹಾಯವನ್ನು ಎಂದಿಗೂ ಮರೆಯದೆ, ಇದನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಉನ್ನತ ಸ್ಥಾನಕ್ಕೇರಲು ಪ್ರಯತ್ನಿಸಬೇಕು ಎಂದು ಗಂಗೊಳ್ಳಿಯ ಶ್ರೀ ಅಂಬಿಕಾ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಜಿ.ಅನಂತಕೃಷ್ಣ ಭಟ್ ಹೇಳಿದರು.
ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾನಿಧಿ ಸಂಸ್ಥೆಯಿಂದ ಸ.ವಿ. ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಜರಗಿದ ವಿದ್ಯಾರ್ಥಿವೇತನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಎಸ್ಬಿ ಸಮುದಾಯದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿದ ದಾನಿಗಳಾದ ವೈ.ರತ್ನಾ ಉಮಾಕಾಂತ ಶೆಣೈ ಅವರು, ಸಮಾಜದ ಯಾವುದೇ ವಿದ್ಯಾರ್ಥಿ ಹಣದ ಅಡಚಣೆಯಿಂದ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಬಾರದು. ಗಂಗೊಳ್ಳಿಯಂತಹ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಸಮಾಜಮುಖಿ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದ್ದು ವಿದ್ಯಾನಿಧಿ ಸಂಸ್ಥೆಗೆ ನೀಡಿದ ದೇಣಿಗೆ ಸದುಪಯೋಗವಾಗುತ್ತಿರುವುದು ಪ್ರಶಂಸನೀಯ ಎಂದರು.
ಗಂಗೊಳ್ಳಿಯ ಜಿಎಸ್ವಿಎಸ್ ಅಸೋಸಿಯೇಶನ್ನ ಕಾರ್ಯದರ್ಶಿ ಎಚ್.ಗಣೇಶ ಕಾಮತ್ ಶುಭಾಸಂಸನೆಗೈದರು. ಸಂಸ್ಥೆಯ ಸದಸ್ಯರಾದ ಜಿ.ಗೋವಿಂದ್ರಾಯ ಆಚಾರ್ಯ, ಕೆ.ಗೋಪಾಲಕೃಷ್ಣ ನಾಯಕ್, ಕೆ.ಕೃಷ್ಣ ಭಟ್, ಎಂ.ಜಿ.ರಾಘವೇಂದ್ರ ಭಂಡಾರ್ಕಾರ್, ಬಿ.ರಾಘವೇಂದ್ರ ಪೈ, ಕೆ.ವಾಸುದೇವ ನಾಯಕ್, ಜಿ.ವೆಂಕಟೇಶ ಶೆಣೈ, ಎಚ್.ಸುನೀಲ ನಾಯಕ್, ಖಜಾಂಚಿ ಎನ್.ಅಶ್ವಿನ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು. ಗಂಗೊಳ್ಳಿಯಿಂದ ಮರವಂತೆ ವರೆಗಿನ ಜಿಎಸ್ಬಿ ಸಮಾಜದ ಒಟ್ಟು ೨೪ ಅರ್ಹ ವಿದ್ಯಾರ್ಥಿಗಳಿಗೆ ಸುಮಾರು ೮೧ ಸಾವಿರ ರೂ.ಗಳ ವಿದ್ಯಾರ್ಥಿವೇತನ ವಿತರಿಸಲಾಯಿತು.
ವಿದ್ಯಾನಿಧಿ ಸಂಸ್ಥೆಯ ಅಧ್ಯಕ್ಷ ಎನ್.ಸದಾಶಿವ ನಾಯಕ್ ಸ್ವಾಗತಿಸಿದರು. ಸಂಸ್ಥೆಯ ಸ್ಥಾಪಕ ಸದಸ್ಯ ಡಾ.ಕಾಶೀನಾಥ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಕೆ.ರಾಮನಾಥ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಎಂ.ಅನಂತ ಪೈ ವಂದಿಸಿದರು.