ಕುಂದಾಪ್ರ ಡಾಟ್ ಕಾಂ ಸುದ್ದಿ,
ಗಂಗೊಳ್ಳಿ: ಇಲ್ಲಿನ ಟೌನ್ ಸೌಹಾರ್ದ ಸಹಕಾರಿಯ ಪ್ರಧಾನ ಕಛೇರಿಯಲ್ಲಿ ಮಂಗಳವಾರ ಸಹಕಾರಿ ಸಂಸ್ಥಾಪಕರ ಸ್ಮರಣೀಯ ದಿನೋತ್ಸವ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹಕಾರಿಯ ಅಧ್ಯಕ್ಷ ಗಣೇಶ ಕಾಮತ್ ಒಂದು ಕಾಲದಲ್ಲಿ ಬಂದರಿನ ಪಟ್ಟಣವಾಗಿ, ಬೇರೆ ದೇಶಗಳೊಂದಿಗೆ ವ್ಯವಹಾರ ನಡೆಸುತ್ತಿದ್ದ ಗಂಗೊಳ್ಳಿಯಲ್ಲಿ ಫಲಾಪೇಕ್ಷೆ ಇಲ್ಲದೆ ಆರಂಭಿಸಿದ್ದ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯು ಇಂದು ಅವರ ಕನಸಿನಂತೆ ಪರಿಸರದ ಜನರ ಆರ್ಥಿಕತೆಯ ಜೀವಸೆಲೆಯಾಗಿ ಎದ್ದುನಿಂತಿದೆ. ಗ್ರಾಹಕರ ಸೇವೆಗೆ ಪ್ರಥಮ ಆದ್ಯತೆ ಎಂಬ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಕಾರಿಯು ಸದೃಢವಾಗಿ ಬೆಳೆದು ನಿಂತು ಇತರ ಸಹಕಾರಿ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.
ಸಹಕಾರಿಯ ಉಪಾಧ್ಯಕ್ಷ ಜಿ. ವಿಶ್ವನಾಥ ಆಚಾರ್ಯ ಶುಭ ಹಾರೈಸಿದರು. ಕರೋನಾ ವಾರಿಯರ‍್ಸ್‌ಗಳಾಗಿ ಸೇವೆ ಸಲ್ಲಿಸಿದ ಗಂಗೊಳ್ಳಿ ಅಂಚೆ ಕಛೇರಿಯ ಪೋಸ್ಟ್‌ಮ್ಯಾನ್‌ಗಳಾದ ಎಂ.ಬಾಬಣ್ಣ ಬಳೆಗಾರ್ ಮತ್ತು ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು. ಸಹಕಾರಿಯ ನಿರ್ದೇಶಕರಾದ ಜಿ.ವೆಂಕಟೇಶ ನಾಯಕ್, ಉದಯಶಂಕರ ರಾವ್, ಮಹಾಬಲ ಪೂಜಾರಿ, ನಾರಾಯಣ ಪೂಜಾರಿ, ವತ್ಸಲಾ ಎಸ್.ಕಾಮತ್, ಮಾಲಾ ಕೆ.ನಾಯಕ್, ಆನಂದ ಜಿ. ಉಪಸ್ಥಿತರಿದ್ದರು.
ನಿರ್ದೇಶಕ ಬಿ.ರಾಘವೇಂದ್ರ ಪೈ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಾಹಕ ಗಣೇಶ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕ ಜಿ.ವೆಂಕಟೇಶ ಶೆಣೈ ವಂದಿಸಿದರು.