ಗಂಗೊಳ್ಳಿ: ನಿನಾದ ಸಂಸ್ಥೆಯ 13ನೇ ವಾರ್ಷಿಕೋತ್ಸವ

ಕುಂದಾಪ್ರ ಡಾಟ್ ಕಂ ಸುದ್ದಿ
ಗಂಗೊಳ್ಳಿ : ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ  ನಿನಾದ ಸಂಸ್ಥೆಯ 13ನೇ ವಾರ್ಷಿಕೋತ್ಸವ ಜರುಗಿತು.

ಸಮಾರಂಭವನ್ನು ಉದ್ದೇಶಿಸಿ ಕೊಕ್ಕರ್ಣೆಯ ಉದ್ಯಮಿ ಎಚ್.ಹರೀಶ ಶ್ಯಾನುಭಾಗ್ ಮಾತನಾಡಿ ದೇಶ ವಿದೇಶಗಳಲ್ಲಿ ನೆಲೆಸಿರುವ ಗೌಡ ಸಾರಸ್ವತ ಸಮಾಜಬಾಂಧವರು ತಮ್ಮದೇ ಆದ ಉದ್ಯಮ, ಉದ್ಯೋಗ ನಡೆಸಿ ಸಮಾಜದಲ್ಲಿ ಉತ್ತಮ ಹೆಸರು ಮಾಡಿದ್ದಾರೆ. ಸಮಾಜದ ಪ್ರತಿಯೊಬ್ಬರು ಮುಖ್ಯವಾಹಿನಿಗೆ ಬರಬೇಕು ಮತ್ತು ಅವರು ಅಭಿವೃದ್ಧಿ ಹೊಂದಬೇಕು ಎಂಬ ಸದುದ್ದೇಶ ಸಮಾಜದ ಪ್ರತಿಯೊಬ್ಬರಲ್ಲೂ ಮೂಡಬೇಕು. ಕಾಲೆಳೆಯುವ ಪ್ರವೃತಿಯನ್ನು ಬಿಟ್ಟು ಸಮಾಜದ ಅಭಿವೃದ್ಧಿಗೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಹೇಳಿದರು.

ನಿನಾದ ಸಂಸ್ಥೆಯು ಕಳೆದ 13 ವರ್ಷಗಳಿಂದ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುತ್ತಾ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಬೆಳೆಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಉತ್ತಮ ಚಟುವಟಿಕೆ ಕಾರ್ಯಕ್ರಮಗಳನ್ನು ಸಮಾಜಕ್ಕೆ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಪ್ರತಿನಿಧಿ ಜಿ.ವೆಂಕಟೇಶ ನಾಯಕ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿದ್ದ ಐರಬೈಲು ಉದ್ಯಮಿ ಜಿ.ರತ್ನಾಕರ ನಾಯಕ್ ಶುಭ ಹಾರೈಸಿದರು. ಇದೇ ಸಂದರ್ಭ ಸಮಾಜದ ಹಿರಿಯರಾದ ಮಣೂರು ಭಾಸ್ಕರ ಪೈ ಮುಳ್ಳಿಕಟ್ಟೆ ಇವರನ್ನು ಗೌರವಿಸಲಾಯಿತು. 2016-17ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ರಾಧಿಕಾ ಎಂ.ಪೈ ಅವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಶೇ.90ಕ್ಕೂ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಎಂ.ಮುಕುಂದ ಪೈ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಿ.ಪ್ರಕಾಶ ಪಡಿಯಾರ್ ಅವರು ಜ್ಞಾನಗಂಗಾ ಕಾರ್ಯಕ್ರಮದ ಮತ್ತು ಜಿ.ಸುದರ್ಶನ ಆಚಾರ್ಯ ಸಂಸ್ಥೆಯ ವರದಿ ವಾಚಿಸಿದರು. ಎಂ.ಗುರುದೀಪಕ ಕಾಮತ್ ಮತ್ತು ಜಿ.ರೋಹಿದಾಸ ನಾಯಕ್ ಸನ್ಮಾನಿತರನ್ನು ಪರಿಚಯಿಸಿದರು. ಜಿ.ಸುದರ್ಶನ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಎನ್.ಗಜಾನನ ನಾಯಕ್ ವಂದಿಸಿದರು. ಕಾರ್ಯಕ್ರಮದ ಬಳಿಕ ನಿಧಿ ಶೆಣೈ ಬೆಂಗಳೂರು ಇವರಿಂದ ಭಜನಾ ಕಾರ್ಯಕ್ರಮ ಜರಗಿತು.

 

Leave a Reply

Your email address will not be published. Required fields are marked *

19 + seven =