ಗಂಗೊಳ್ಳಿ: ಮೀನುಗಾರಿಕೆ ಸ್ವ ಉದ್ಯೋಗ ತರಬೇತಿ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಕರೋನಾದಿಂದ ಬಹಳ ಸಂಕಷ್ಟ ಎದುರಾಗಿದ್ದು, ದೇಶದ ಅಭಿವೃದ್ಧಿಗೆ ಬಹಳ ದೊಡ್ಡ ಹೊಡೆತ ಬಿದ್ದಿದೆ. ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶಕ್ಕೆ ಕೊರೊನಾದಿಂದ ಬಹಳ ದೊಡ್ಡ ಅನಾಹುತಗಳಾಗಿಲ್ಲ. ನಮ್ಮ ದೇಶದಲ್ಲಿ ತಯಾರಾದ ಉತ್ಪನ್ನಗಳನ್ನು ಬೇರೆ ದೇಶಗಳಿಗೆ ನೀಡುವಷ್ಟು ನಮ್ಮ ದೇಶ ಸಮರ್ಥವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆತ್ಮನಿರ್ಭರ್ ಕಾರ್ಯಕ್ರಮದ ಮೂಲಕ ಜನರಿಗೆ ಸ್ವಾವಲಂಬಿ ಜೀವನ ನಡೆಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಎಲ್ಲರೂ ಸ್ವಾವಲಂಬಿಗಳಾಗಲು, ಆರ್ಥಿಕವಾಗಿ ಸಬಲರಾಗಲು ಆತ್ಮನಿರ್ಭರ್ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕುಂದಾಪುರ ತಾಲೂಕು ಸಂಘ ಚಾಲಕ ಗುರುರಾಜ್ ರಾವ್ ಕೋಟೇಶ್ವರ ಹೇಳಿದರು.

ಗ್ರಾಮವಿಕಾಸ ಸಮಿತಿ ಗಂಗೊಳ್ಳಿ ಮತ್ತು ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘ ಇವರ ಆಶ್ರಯದಲ್ಲಿ ಗಂಗೊಳ್ಳಿಯ ಶ್ರೀ ವೀರೇಶ ಮಾಂಗಲ್ಯ ಮಂದಿರದಲ್ಲಿ ಆಯೋಜಿಸಲಾಗಿದ್ದ ಮೀನುಗಾರಿಕೆ ಸ್ವ ಉದ್ಯೋಗ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆತ್ಮನಿರ್ಭರ್ ಭಾರತ್ ಆಶಯದಂತೆ ಕೋವಿಡ್-೧೯ ನಿಂದಾಗಿ ಪರ ಊರುಗಳಲ್ಲಿ ಉದ್ಯೋಗ ಕಳೆದುಕೊಂಡು ಊರಿಗೆ ಬಂದ ಉದ್ಯೋಗಾಕಾಂಕ್ಷಿಗಳು ಮತ್ತು ಆಸಕ್ತರು ಮೀನುಗಾರಿಕೆ, ಒಳನಾಡು ಹಾಗೂ ಕರಾವಳಿ ಮೀನುಗಾರಿಕೆ ಮತ್ತು ಮತ್ಸ್ಯೋದ್ಯಮದಲ್ಲಿ ಅವಕಾಶಗಳ ಬಗ್ಗೆ ಮಾಹಿತಿ ಪಡೆದುಕೊಂಡು ಸ್ವ ಉದ್ಯೋಗ ಕೈಗೊಳ್ಳಬಹುದು ಎಂದು ಅವರು ಹೇಳಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಮಂಗಳೂರು ಮೀನುಗಾರಿಕೆ ಇಲಾಖೆಯ ದಿಲೀಪ್ ಕುಮಾರ್ ಮತ್ತು ಕುಂದಾಪುರ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಸುಮಲತಾ ಆರೂರ್ ಅವರು ಮೀನುಗಾರಿಕೆ, ಒಳನಾಡು ಹಾಗೂ ಕರಾವಳಿ ಮೀನುಗಾರಿಕೆ ಮತ್ತು ಮತ್ಸ್ಯೋದ್ಯಮದಲ್ಲಿ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು. ಕುಂದಾಪುರ ತಾಲೂಕು ಸಹ ಕಾರ್ಯವಾಹ ಪ್ರಕಾಶ ಗಂಗೊಳ್ಳಿ, ತಾಲೂಕು ಸೇವಾ ಪ್ರಮುಖ್ ಶ್ರೀಧರ ಗಂಗೊಳ್ಳಿ, ತಾಲೂಕು ಉದ್ಯೋಗಿ ಪ್ರಮುಖ್ ರಾಜೇಶ ಉಪ್ಪಿನಕುದ್ರು ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಘಟನಾ ಪ್ರಮುಖ್ ರಾಜೇಶ್ ಕಾವೇರಿ ಕುಂದಾಪುರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಉಪ್ಪುಂದ ಸ್ವಯಂಸೇವಕ ಗುರುರಾಜ್ ಗಂಟಿಹೊಳೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗಂಗೊಳ್ಳಿ ಗ್ರಾಮ ವಿಕಾಸ ಸಮಿತಿ ಪ್ರಮುಖ್ ಶ್ರೀನಿವಾಸ ಎಂ. ವಂದಿಸಿದರು. ಕುಂದಾಪುರ ಹಾಗೂ ಬೈಂದೂರು ತಾಲೂಕು ವ್ಯಾಪ್ತಿಯ ಸುಮಾರು ೭೮ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

14 − five =