ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಗೋ ಹತ್ಯೆಯನ್ನು ವಿರೋಧಿಸಿ ನಡೆದ ಬೃಹತ್ ಪಾದಯಾತ್ರೆಯ ಬಳಿಕ ಅನ್ಯಕೋಮಿನ ಒಂದು ವರ್ಗ ಗಂಗೊಳ್ಳಿ ಮೀನು ಖರೀದಿಗೆ ಬಹಿಷ್ಕಾರ ಹಾಕಿರುವುದನ್ನು ಖಂಡಿಸಿ, ಮೀನುಗಾರ ಮಹಿಳೆಯರಿಗೆ ನೈತಿಕ ಬೆಂಬಲ ನೀಡಲು ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳದ ಕುಂದಾಪುರ ಪ್ರಖಂಡ ಮುಂದಾಗಿದೆ.
ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳದ ಕುಂದಾಪುರ ಪ್ರಖಂಡದ ಪ್ರಮುಖರು ಹಾಗೂ ನಂದಗೋಕುಲ ಗೇರುಬೀಜ ಕಾರ್ಖಾನೆಯ ನೌಕರರು, ಗಂಗೊಳ್ಳಿ ಮೀನು ಮಾರುಕಟ್ಟೆಯಲ್ಲಿ ಮಂಗಳವಾರ ಮೀನು ಖರೀದಿಸಿ ಮಹಿಳಾ ಮೀನುಗಾರರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು. ಮುಂದಿನ ದಿನಗಳಲ್ಲಿ ಬೇರೆ ಬೇರೆ ಗ್ರಾಮದ ಹಿಂದು ಸಮಾಜದವರು ಗಂಗೊಳ್ಳಿಗೆ ಬಂದು ಮೀನು ಖರೀದಿಸುವ ಕಾರ್ಯ ಮಾಡಲಿದ್ದಾರೆ. ಯಾವುದೇ ಕಾರಣಕ್ಕೂ ಮಹಿಳಾ ಮೀನುಗಾರರು ಎದೆಗುಂದಬಾರದು ಎಂದು ಮಹಿಳೆಯರಲ್ಲಿ ವಿಶ್ವಾಸ ತುಂಬಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವ ಹಿಂದು ಪರಿಷತ್‌ನ ಕೇಂದ್ರಿಯ ವಿಶ್ವಸ್ಥ ಮಂಡಳಿ ಸದಸ್ಯ ಪ್ರೇಮಾನಂದ ಶೆಟ್ಟಿ, ಗಂಗೊಳ್ಳಿಯಲ್ಲಿ ನಡೆದಿರುವ ವಿದ್ಯಮಾನದ ಬಳಿಕ ಅನ್ಯಕೋಮಿನವರು ಗಂಗೊಳ್ಳಿ ಮೀನು ಮಾರುಕಟ್ಟೆಯಲ್ಲಿ ಮೀನು ಖರೀದಿಗೆ ಬಹಿಷ್ಕಾರ ಹಾಕಿರುವುದು ಖಂಡನೀಯ. ಗಂಗೊಳ್ಳಿ ಮೀನು ಮಾರುಕಟ್ಟೆಯಲ್ಲಿ ಹೊಟ್ಟೆಪಾಡಿಗೆ, ದೈನಂದಿನ ಜೀವನ ನಡೆಸಲು ಮೀನು ಮಾರಾಟ ಮಾಡುತ್ತಿರುವ ಮೀನುಗಾರರಿಂದ ಒಂದೇ ಸಮನೆ ಮೀನು ಖರೀದಿಗೆ ಬಹಿಷ್ಕಾರ ಹಾಕುವ ಮೂಲಕ ಅವರ ಆತ್ಮಸ್ಥೈರ್ಯ ಕುಗ್ಗಿಸುವ ಪ್ರಯತ್ನ ನಡೆಸಲಾಗುತ್ತಿದೆ. ಅನ್ಯಕೋಮಿನವರ ಆರ್ಥಿಕ ಬಹಿಷ್ಕಾರದ ಪ್ರಯತ್ನವನ್ನು ಧಿಕ್ಕರಿಸುವ ನಿಟ್ಟಿನಲ್ಲಿ, ಮಹಿಳಾ ಮೀನುಗಾರರಲ್ಲಿ ಆತ್ಮಸ್ಥೈರ್ಯ ತುಂಬುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ. ಯಾರೇ ಬಹಿಷ್ಕಾರ ಹಾಕಿದರೂ, ಯಾರೇ ದಾಳಿ ಮಾಡಿದರೂ ಕೂಡ ನಾವು ನಿರಂತರವಾಗಿ ಮಹಿಳ ಮೀನುಗಾರರಿಗೆ ಸಹಕಾರ ನೀಡುತ್ತೇವೆ. ನಿಮ್ಮೊಟ್ಟಿಗೆ ಬದುಕುತ್ತೇವೆ ಎಲ್ಲಾ ರೀತಿಯಲ್ಲಿ ಶಕ್ತಿಯನ್ನು ನೀಡುತ್ತೇವೆ ಎಂದು ಅವರು ಹೇಳಿದರು.
ಸಾವಿರಾರು ವರ್ಷಗಳಿಂದ ಇದೇ ರೀತಿಯಲ್ಲಿ ಬಹಿಷ್ಕಾರ ಹಾಕುತ್ತಾ ಇಡೀ ದೇಶಾದ್ಯಂತ ವ್ಯವಸ್ಥಿತ ಷಡ್ಯಂತ್ರ ನಡೆಸಲಾಗಿದೆ. ಹಿಂದುಗಳನ್ನು ರಾಷ್ಟ್ರದಿಂದ ಬೇರ್ಪಡಿಸುವ ಭಾಗವಾಗಿ ಷಡ್ಯಂತ್ರ ನಡೆದಿದೆ. ಈ ಷಡ್ಯಂತ್ರ ಇನ್ನು ಮುಂದೆ ಯಶಸ್ವಿಯಾಗುವುದಿಲ್ಲ. ಸಮಸ್ತ ಹಿಂದು ಜನಾಂಗ ಎಚ್ಚೆತ್ತುಕೊಂಡಿದೆ. ಈ ದೇಶದ ಯಾವುದೇ ಮೂಲೆಯಲ್ಲಿ ಹಿಂದು ಸಮಾಜದ ಮೇಲೆ ಅಕ್ರಮಣ ಅಥವಾ ಇಂತಹ ವಿಭಜನೆ ಶಕ್ತಿಗಳು ತಮ್ಮ ಕಾರ್ಯ ಚಟುವಟಿಕೆಗಳನ್ನು ತೋರಿಸಿದರೆ ಸಮಸ್ತ ದೇಶದ ಹಿಂದು ಸಮಾಜ ತಕ್ಕ ನೀಡಲು ಸಿದ್ಧವಾಗಿದೆ. ನಿಮ್ಮ ಯಾವುದೇ ಷಡ್ಯಂತ್ರ ವಿಫಲ ಮಾಡಲು ನಾವು ಸಿದ್ಧರಿದ್ದೇವೆ. ಇವತ್ತಿನವರೆಗೆ ನೀವು ನಮ್ಮ ವಿಶ್ವಾಸ ಇಟ್ಟುಕೊಂಡು ನಮ್ಮೊಟ್ಟಿಗೆ ಬದುಕುವ ನಾಟಕ ಮಾಡುತ್ತಾ ನಮ್ಮ ಎಲ್ಲಾ ವ್ಯಾಪಾರಿಗಳ ವ್ಯಾಪಾರವನ್ನು ಸೋಲಿಸುವ ಪ್ರಯತ್ನ ಮಾಡಿದ್ದೀರಿ ಎಂದು ಆರೋಪಿಸಿದ ಅವರು ನಾವು ಯಾವತ್ತೂ ಕೂಡ ಹಿಂದು ಸಮಾಜ ಮೀನುಗಾರರ ಪರವಾಗಿದ್ದೇವೆ ಎಂದು ಹೇಳಿದರು.
ವಿಹಿಂಪ ಕುಂದಾಪುರ ತಾಲೂಕು ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ ಗೋಳಿಯಂಗಡಿ, ಬಜರಂಗದಳ ಜಿಲ್ಲಾ ಸಂಚಾಲಕ ಸುರೇಂದ್ರ ಕೋಟೇಶ್ವರ, ವಿಹಿಂಪ ಸಂಪರ್ಕ ಪ್ರಮುಖ್ ಗಿರೀಶ ಕುಂದಾಪುರ, ಬಜರಂಗದಳ ತಾಲೂಕು ಸಂಚಾಲಕ ಸುಧೀರ್, ತಾಲೂಕು ಮಠ ಮಂದಿರ ಪ್ರಮುಖ್ ಶ್ರೀನಿವಾಸ ಕುಂದರ್, ಬಿಎಂಎಸ್ ಗೌರವಾಧ್ಯಕ್ಷ ಕೆ.ಟಿ.ಸತೀಶ್, ಸಂಕೇತ್ ಕೊರ್ಗಿ, ವಿಹಿಂಪ ಮತ್ತು ಬಜರಂಗದಳ ಕಾರ್ಯಕರ್ತರು, ನಂದಗೋಕುಲ ಗೇರುಬೀಜ ಕಾರ್ಖಾನೆಯ ನೌಕರರು, ಮತ್ತಿತರರು ಉಪಸ್ಥಿತರಿದ್ದರು.