ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಶಾಲೆಯ ಪ್ರತಿಯೊಬ್ಬ ಪ್ರಾಕ್ತನ ವಿದ್ಯಾರ್ಥಿಗಳಲ್ಲಿ ನನ್ನ ಶಾಲೆ ಎಂಬ ಪ್ರೀತಿ ಬೆಳೆದಾಗ, ಶಾಲೆಯ ಬಗ್ಗೆ ಅಭಿಮಾನ ಮೂಡಿದಾಗ ಶಾಲೆಯ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಲಿದೆ. ಶಾಲೆಯ ಆಗುಹೋಗುಗಳಿಗೆ ಸ್ಪಂದಿಸುತ್ತಾ ಶಾಲೆಯ ಅಭಿವೃದ್ಧಿಗೆ ಶ್ರಮಿಸಿದಾಗ ನಮ್ಮಲ್ಲಿ ಆತ್ಮತೃಪ್ತಿ ಭಾವನೆ ಮೂಡುತ್ತದೆ. ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಿರುವ ಈ ಕಾಲಘಟ್ಟದಲ್ಲಿ ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತವಾಗಬಾರದು. ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಒದಗಿಸುವುದರ ಜೊತೆಗೆ ಶಾಲೆಯ ಮಕ್ಕಳ ಕಷ್ಟಸುಖಗಳಿಗೆ ಸ್ಪಂದಿಸುವ ಮನೋಭಾವ ಎಲ್ಲರಲ್ಲೂ ಬೆಳೆಯಬೇಕು ಎಂದು ಶಾಲೆಯ ಹಳೆ ವಿದ್ಯಾರ್ಥಿ ರಾಘವೇಂದ್ರ ಕೋಟಾನ್ ಬೆಂಗಳೂರು ಹೇಳಿದರು.
ಗಂಗೊಳ್ಳಿ ಖಾರ್ವಿಕೇರಿಯ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ೬,೭ ಮತ್ತು ೮ನೇ ತರಗತಿಯ ಸುಮಾರು ೧೦೫ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಾಲಾ ಬ್ಯಾಗ್‌ಗಳನ್ನು ಸೋಮವಾರ ವಿತರಿಸಿ ಅವರು ಮಾತನಾಡಿದರು.
ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರವಿಶಂಕರ ಖಾರ್ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಗ್ರಾಪಂ ಸದಸ್ಯ ಬಿ.ರಾಘವೇಂದ್ರ ಪೈ ಶುಭಾಶಂಸನೆಗೈದರು. ಎಸ್‌ಡಿಎಂಸಿ ಉಪಾಧ್ಯಕ್ಷೆ ರೇಣುಕಾ, ರಮೇಶ ಖಾರ್ವಿ ಕಂಚುಗೋಡು, ಎಸ್‌ಡಿಎಂಸಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
ಸಹಶಿಕ್ಷಕಿ ಅನುಷಾ ಸ್ವಾಗತಿಸಿದರು. ಶಾಲೆಯ ಮುಖ್ಯೋಪಾದ್ಯಾಯಿನಿ ಸುಮತಿ ಪ್ರಾಸ್ತಾವಿಕ ಮಾತುಗಳನ್ನಾಗಿದರು. ಸಹಶಿಕ್ಷಕರಾದ ಶಶಿಶಂಕರ ಕಾರ್ಯಕ್ರಮ ನಿರ್ವಹಿಸಿದರು. ಯಶೋಧಾ ವಂದಿಸಿದರು.