ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಶ್ರೀ ಸರಸ್ವತಿ ವಿದ್ಯಾನಿಧಿ ವತಿಯಿಂದ ಜಿಎಸ್‌ಬಿ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿದ ಸಂಸ್ಥೆಯ ಹಿರಿಯ ಸದಸ್ಯ ಯು.ನಾರಾಯಣ ಪಿ.ಪೈ, ಸಂಸ್ಥೆಯ ಈ ಕಾರ್ಯದ ಉದ್ದೇಶ ಉತ್ತಮವಾಗಿದ್ದು, ಹಿರಿಯರ ಆಶಯದಂತೆ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ನೆರವು ಕಲ್ಪಿಸುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿವೇತನ ಪಡೆದುಕೊಂಡವರು ನಿಧಿಯ ಸದುಪಯೋಗಪಡಿಸಿಕೊಂಡು ಪರಿಶ್ರಮಪಟ್ಟು ಉತ್ತಮ ವಿದ್ಯಾರ್ಜನೆಗೈದು ವಿದ್ಯಾರ್ಥಿ ಜೀವನದಲ್ಲಿ ಯಶಸ್ವಿಗಳಾಗಿ ಸಮಾಜಕ್ಕೆ, ಊರಿಗೆ ಸಹಕಾರ ನೀಡಿ ಸತ್ಪ್ರಜೆಗಳಾಗುವಂತೆ ಕರೆ ನೀಡಿದರು.
ಸಂಸ್ಥೆಯ ಅಧ್ಯಕ್ಷ ವೆಂಕಟೇಶ್ ಬಿ. ಶೆಣೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ಗಂಗೊಳ್ಳಿ ಕೆನರಾ ಬ್ಯಾಂಕ್ ಸಿಬ್ಬಂದಿ ಜಿ.ಗಂಗಾಧರ ಪೈ ಶುಭಾಶಂಸನೆಗೈದರು. ಸುಮಾರು 87 ಸಾವಿರ ರೂಪಾಯಿ ವಿದ್ಯಾರ್ಥಿ ವೇತನವನ್ನು ಅರ್ಹ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಜಿ.ವೆಂಕಟೇಶ ಶೆಣೈ ಸ್ವಾಗತಿಸಿದರು. ಕೆ.ರಾಮನಾಥ್ ನಾಯಕ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಬಿ.ರಾಘವೇಂದ್ರ ಪೈ ವಂದಿಸಿದರು.
