ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ : ಇಲ್ಲಿನ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಜರುಗಿತು.
ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಓಂ ಯೋಗ ಮಂದಿರ ಕೋಟೇಶ್ವರದ ವ್ಯವಸ್ಥಾಪಕರಾದ ಬಿ. ಅಣ್ಣಪ್ಪ ಬೀಜಾಡಿಯವರು ಕಾಯ ವಾಚಾ ಮನಸಾ ನಮ್ಮನ್ನು ಉತ್ತಮ ಗೊಳಿಸಿ ಇಡೀ ಬದುಕನ್ನು ಸುಂದರವಾಗಿಸುವ ಯೋಗದಂತಹ ಅತ್ಯುತ್ತಮ ವಿದ್ಯೆಯನ್ನು ಜಗತ್ತಿಗೆ ನೀಡಿದ ಭಾರತೀಯರಾದ ನಾವು ಯೋಗ ವಿದ್ಯೆಯ ಬಗೆಗೆ ಮೂಲಭೂತ ಅರಿವನ್ನು ಹೊಂದಿರುವುದು ಮತ್ತು ಅದನ್ನು ಅನುಸರಿಸುವುದು ಅತ್ಯಂತ ಪ್ರಮುಖವಾಗಿದೆ. ಯೋಗ ರೋಗದಿಂದ ದೂರವಿರುವುದನ್ನು ಕಲಿಸುತ್ತದೆ. ಉತ್ತಮ ಆರೋಗ್ಯ ಗುಣ ನಡತೆಯನ್ನು ಉದ್ದೀಪಿಸುತ್ತದೆ ಎಂದು ಅವರು ಹೇಳಿದರು.
ವಿದ್ಯಾರ್ಥಿನಿ ಚೈತ್ರಾ ಯೋಗದ ಮಹತ್ವದ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಥಾಮಸ್ ಪಿ ಎ ಅಧ್ಯಕ್ಷತೆ ವಹಿಸಿದ್ದರು. ಜಿ.ಎಸ್.ವಿ.ಎಸ್ ಅಸೋಷಿಯೇಷನ್ ಅಧ್ಯಕ್ಷ ಡಾ.ಕಾಶೀನಾಥ್ ಪೈ, ಕಾರ್ಯದರ್ಶಿ ಹೆಚ್. ಗಣೇಶ್ ಕಾಮತ್, ಸರಸ್ವತಿ ವಿದ್ಯಾಲಯ ವಿದ್ಯಾ ಸಂಸ್ಥೆಗಳ ಕಾರ್ಯದರ್ಶಿ ಎನ್ ಸದಾಶಿವ ನಾಯಕ್ ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಸುಜಯೀಂದ್ರ ಹಂದೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕ ಯು. ವೆಂಕಟೇಶ ಮೂರ್ತಿ ಸ್ವಾಗತಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಭಾಸ್ಕರ್ ಶೆಟ್ಟಿ ಧನ್ಯವಾದಗೈದರು.