ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ತಾಲ್ಲೂಕಿನ ಹೊಸಾಡು ಮತ್ತು ಬೈಂದೂರು ತಾಲ್ಲೂಕಿನ ಮರವಂತೆ ಗ್ರಾಮ ಪಂಚಾಯಿತಿಗಳು ರಾಜ್ಯ ಸರ್ಕಾರ ಪ್ರತಿವರ್ಷ ತಾಲ್ಲೂಕಿಗೊಂದರಂತೆ ನೀಡುವ ಗಾಂಧಿ ಗ್ರಾಮ ಪುರಸ್ಕಾರಕ್ಕೆ 2020-21ರಲ್ಲೂ ಅರ್ಹತೆ ಪಡೆದು ದಾಖಲೆ ಬರೆದಿವೆ. ವರ್ಷದ ಸಮಗ್ರ ನಿರ್ವಹಣೆ ಮತ್ತು ನಾವೀನ್ಯತಾ ಕಾರ್ಯಕ್ರಮಗಳನ್ನು ಪರಿಗಣಿಸಿ ನೀಡುವ ಈ ಪ್ರಶಸ್ತಿ ರೂ 5 ಲಕ್ಷ ಮೊತ್ತದ ಬಹುಮಾನ ಒಳಗೊಂಡಿದೆ.
ಈ ಹಿಂದೆ ಮರವಂತೆ 2013-14, 2019-20ರಲ್ಲಿ, ಹೊಸಾಡು 2016-17, 2017-18ರಲ್ಲಿ ಈ ಪ್ರಶಸ್ತಿ ಗಳಿಸಿದ್ದುವು. ನಿರ್ಮಲ ಗ್ರಾಮ ರಾಷ್ಟ್ರೀಯ ಪುರಸ್ಕಾರ, ಪಂಚಾಯತ್ ರಾಜ್ ಸಶಕ್ತೀಕರಣ ರಾಷ್ಟೀಯ ಪುರಸ್ಕಾರ, ರಜತ ನೈರ್ಮಲ್ಯ ಪುರಸ್ಕಾರ ಪಡೆದ ಹಿರಿಮೆ ಮರವಂತೆಯದಾದರೆ (ಬಹುಮಾನದ ಒಟ್ಟು ಮೊತ್ತ ರೂ 20 ಲಕ್ಷ), ಹೊಸಾಡು ‘ನಮ್ಮ ಗ್ರಾಮ ನಮ್ಮ ಯೋಜನೆ’ಯ ರಾಷ್ಟೀಯ ಪುರಸ್ಕಾರದ ಜತೆಗೆ ರೂ 10 ಲಕ್ಷ ಬಹುಮಾನ ಗಳಿಸಿತ್ತು. ಈ ಪಂಚಾಯಿತಿಗಳು ತಮ್ಮ ನಿಗದಿತ ಪ್ರಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಜತೆಗೆ ಮುಂದಿನ ವಿಶೇಷ ಸಾಧನೆ ಮಾಡಿರುವುದು ಅವುಗಳಿಗೆ ಪ್ರಶಸ್ತಿ ದಕ್ಕಲು ಕಾರಣವಾಯಿತು.
ಮರವಂತೆ: ತೆರಿಗೆ ಆಕರಣೆಯಲ್ಲಿ ರೂ 2.4 ಲಕ್ಷ ಹೆಚ್ಚಳ ಮಾಡುವುದರ ಜತೆಗೆ ಶೇ 100 ಸಂಗ್ರಹ ಸಾಧಿಸಿದೆ. 15ನೇ ಹಣಕಾಸು ಆಯೋಗ ನಿಗದಿತ ಅನುದಾನ 90% ಬಳಕೆ ಮಾಡಿದೆ. ಪರಿಶಿಷ್ಟರ, ಅಂಗವಿಕಲರ ಮತ್ತು ಕ್ರೀಡೆಯ ಮೀಸಲು ಮೊತ್ತ ಪೂರ್ಣ ವಿನಿಯೋಗವಾಗಿದೆ. ವಿದ್ಯುತ್ ಬಿಲ್ ಪೂರ್ತಿ ಪಾವತಿಸಿದೆ. ಸಕಾಲದಲ್ಲಿ ವಾರ್ಡ್‌ಸಭೆ, ಗ್ರಾಮಸಭೆ, ಮಹಿಳಾ, ಮಕ್ಕಳ ಮತ್ತು ದಲಿತರ ಗ್ರಾಮಸಭೆ ಏರ್ಪಡಿಸಿದೆ. ಅಗತ್ಯ ಇರುವ ಎಲ್ಲರಿಗೆ ಕುಡಿಯುವ ನೀರು ಪೂರೈಸಿದೆ. ಸುಧಾರಿತ ಮಾದರಿಯಲ್ಲಿ ತ್ಯಾಜ್ಯ ಸಂಗ್ರಹ ಮತ್ತು ನಿರ್ವಹಣೆ ಕೈಗೊಂಡಿದೆ.
ಪ್ಲಾಸ್ಟಿಕ್ ಬಾಟಲಿಗಳಿಂದ ಆವರಣ ನಿರ್ಮಾಣ, ಟಾರ್‌ಗೆ ಪ್ಲಾಸ್ಟಿಕ್ ಬೆರೆಸಿ ರಸ್ತೆ ನಿರ್ಮಾಣ, ಕೇಂದ್ರೀಕೃತ ಮಾದರಿಯ ಸೋಲಾರ್ ಬೀದಿದೀಪ ವ್ಯವಸ್ಥೆ, ಕಚೇರಿಗೆ ರೂಫ್‌ಟಾಪ್ ಸೋಲಾರ್ ಶಕ್ತಿ ಬಳಕೆ, ಕಾರ್ಯಪಡೆಯಿಂದ ಯಶಸ್ವಿ ಕೊರೊನಾ ನಿಯಂತ್ರಣ ಮತ್ತು ಲಸಿಕೆ ಅಭಿಯಾನ, ನಗದುರಹಿತ ಹಣಕಾಸು ವ್ಯವಹಾರಕ್ಕೆ ಉತ್ತೇಜನ ಮರವಂತೆ ಪಂಚಾಯಿತಿ ಅನುಷ್ಠಾನಿಸಿದ ನಾವೀನ್ಯತಾ ಯೋಜನೆಗಳು.

ಹೊಸಾಡು: ಸಮರ್ಪಕ ತ್ಯಾಜ್ಯ ನಿರ್ವಹಣೆ ಮೂಲಕ ತ್ಯಾಜ್ಯಮುಕ್ತ ಗ್ರಾಮ, ಶೇ 94 ತೆರಿಗೆ ಸಂಗ್ರಹ, ಕುಡಿಯುವ ನೀರು ಪೂರೈಕೆ, ಉದ್ಯೋಗ ಖಾತರಿ ಯೋಜನೆಯ ಗರಿಷ್ಠ ಸಾಧ್ಯ ಅನುಷ್ಠಾನ, ವಿಶಾಲ ಸಭಾಭವನ ಸಹಿತವಾದ ಕಚೇರಿ ಕಟ್ಟಡ ನಿರ್ಮಾಣ ಹೊಸಾಡು ಪಂಚಾಯಿತಿಯ ವರ್ಷದ ಸಾಧನೆ.
ಯಶಸ್ವಿ ಕೊರೊನಾ ನಿಯಂತ್ರಣ ಮತ್ತು ಲಸಿಕೆ ಅಭಿಯಾನ, ಮಕ್ಕಳ ಡಿಜಿಟಲ್ ಪುಸ್ತಕಾಲಯ, ಸೌಲಭ್ಯ ವಂಚಿತ ಊರಿನ ಹಾಗೂ ವಲಸೆ ಮಕ್ಕಳಿಗೆ ಪಂಚಾಯಿತಿಯಲ್ಲಿ ತಂತ್ರಜ್ಞಾನ ಬಳಸಿ ‘ಸಂವೇದನಾ’ ಶಿಕ್ಷಣಾವಕಾಶ, ಜನಸ್ನೆಹಿ ಮುಂಚೂಣಿ ಕಚೇರಿ ಹೊಸಾಡು ಕೈಗೊಂಡ ನಾವೀನ್ಯತಾ ಯೋಜನೆಗಳು.
ಮರವಂತೆ ಮಾದರಿ ಗ್ರಾಮ ಪಂಚಾಯಿತಿ ಎಂಬ ಖ್ಯಾತಿ ಗಳಿಸಿದ್ದು, ಎಲ್ಲರ ಸಾಮೂಹಿಕ ಪ್ರಯತ್ನದ ಮೂಲಕ ಆ ಪರಂಪರೆಯನ್ನು ಮುಂದುವರಿಸಲಾಗಿದೆ – ರಿಯಾಜ್ ಅಹಮದ್, ಮರವಂತೆ ಅಭಿವೃದ್ಧಿ ಅಧಿಕಾರಿ
ಜನಪ್ರತಿನಿಧಿಗಳ, ಅಧಿಕಾರಿಗಳ, ಜನರ ಬೆಂಬಲದೊಂದಿಗೆ ಉತ್ತಮ ಆಡಳಿತ, ಅಭಿವೃದ್ಧಿ ಸಾಧಿಸಿದುದರ ಫಲ ಗಾಂಧಿಗ್ರಾಮ ಪುರಸ್ಕಾರ – ಪಾರ್ವತಿ ಕೋಟತಟ್ಟು, ಹೊಸಾಡು ಅಭಿವೃದ್ಧಿ ಅಧಿಕಾರಿ