ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗುಜ್ಜಾಡಿ ಗ್ರಾಪಂ ವ್ಯಾಪ್ತಿಯ ಐದು ಕೊರಗ ಕುಟುಂಬಗಳಿಗೆ ಈ ಹಿಂದಿನ ಆರ್ಥಿಕ ವರ್ಷಗಳಲ್ಲಿ ಬೇಡಿಕೆಯಾಧಾರಿತವಾಗಿ ಅನುದಾನ ನೀಡುತ್ತಿದ್ದು ಮುಂದಿನ ಆರ್ಥಿಕ ವರ್ಷದಲ್ಲೂ ಕೊರಗ ಕುಟುಂಬಗಳ ಅಭಿವೃದ್ಧಿ ಕುರಿತು ಅನುದಾನವನ್ನು ಮೀಸಲಿಡಲಾಗುವುದು. ಕೊರಗ ಕುಟುಂಬದ ಎಲ್ಲಾ ಫಲಾನುಭವಿಗಳ ಸರ್ವತೋಮುಖ ಅಭಿವೃದ್ಧಿಗೆ ಗ್ರಾಮ ಪಂಚಾಯತ್ ಸಿದ್ಧವಿದ್ದು, ಯಾವುದೇ ಗೊಂದಲಗಳಿಗೆ ಆಸ್ಪದ ನೀಡುವುದಿಲ್ಲ ಎಂದು ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಯಮುನಾ ಪೂಜಾರಿ ಹೇಳಿದರು.
ಗುಜ್ಜಾಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಮಂಗಳವಾರ ನಡೆದ ಗುಜ್ಜಾಡಿ ಗ್ರಾಮ ಪಂಚಾಯತ್‌ನ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊರಗ ಕುಟುಂಬಗಳಿಗೆ ಯಾವುದೇ ಅನುದಾನ ಸಿಗುತ್ತಿಲ್ಲ ಮತ್ತು ಅನುದಾನದ ಸಮರ್ಪಕ ಬಳಕೆಯಾಗುತ್ತಿಲ್ಲ. ಗ್ರಾಪಂ.ನ ಶೇ.೨೫ರ ಅನುದಾನದ ದುರ್ಬಳಕೆಯಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದ್ದು, ಕೊರಗ ಕುಟುಂಬಗಳಿಗೆ ಮೀಸಲಿಟ್ಟ ಅನುದಾನವನ್ನು ಸಮಾನವಾಗಿ ಹಂಚಿಕೆ ಮಾಡಲಾಗಿದೆ ಎಂದರು.
ಗ್ರಾಪಂ ವತಿಯಿಂದ ೫ ಕೊರಗ ಕುಟುಂಬಗಳಿಗೆ ಸಿಗುವ ಸವಲತ್ತುಗಳು ಹಾಗೂ ಅನುದಾನದ ಮಾಹಿತಿ ನೀಡಿದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೋಭಾ, ಗ್ರಾಪಂ.ನ ಎಸ್.ಟಿ. ಅನುದಾನವು ಪ್ರತಿ ಆರ್ಥಿಕ ವರ್ಷದಲ್ಲಿ ಪಾರದರ್ಶಕವಾಗಿ ಫಲಾನುಭವಿಗಳಿಗೆ ನೀಡುತ್ತಿದ್ದು ಮುಂದಿನ ಸಾಲಿನಲ್ಲಿಯೂ ಪ್ರತಿ ೫ ಕುಟುಂಬಗಳಿಗೆ ಆದ್ಯತೆ ಮೇರೆಗೆ ಅನುದಾನ ನೀಡಲಾಗುವುದು ಎಂದರು. ೨೦೨೧-೨೨ನೇ ಸಾಲಿನಡಿ ಎಸ್.ಟಿ. ಕುಟುಂಬಗಳ ಬೇಡಿಕೆ ಪಡೆಯಲಾಯಿತು.
ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಜು ಪೂಜಾರಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಭಾರತಿ, ಗ್ರಾಪಂ ಸದಸ್ಯರು, ಎಸ್.ಟಿ. ಸಮುದಾಯದ ಮುಖಂಡರಾದ ವಿ.ಪ್ರಭಾಕರ, ಸತೀಶ ಜಪ್ತಿ, ರವೀಂದ್ರ, ಮನೋಜ್ ಮತ್ತಿತರರು ಉಪಸ್ಥಿತರಿದ್ದರು.