ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಶತಮಾನೋತ್ಸವದ ಸವಿನೆನಪಿಗಾಗಿ ಗುಜ್ಜಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶತಮಾನೋತ್ಸವ ಭವನ ಹಾಗೂ ರಂಗ ಮಂದಿರದ ಉದ್ಘಾಟನೆ ನಡೆಯಿತು.
ಉದ್ಘಾಟಿಸಿ ಮಾತನಾಡಿದ ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟಿ, ಸರಕಾರ ಶಾಲೆಗಳಲ್ಲಿ ನೂತನ ಕೊಠಡಿಗಳನ್ನು ನಿರ್ಮಿಸಿದರಷ್ಟೇ ಸಾಲದು. ಮಕ್ಕಳ ದಾಖಲಾತಿ ಕೂಡ ಪ್ರತಿವರ್ಷ ಹೆಚ್ಚಳವಾಗಬೇಕು. ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕಾರಣವಾಗಬೇಕು. ಶತಮಾನೋತ್ಸವನ್ನು ಆಚರಿಸಿಕೊಳ್ಳುತ್ತಿರುವ ಗುಜ್ಜಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂದಾಪುರ ತಾಲೂಕಿನಲ್ಲೇ ಅತ್ಯುತ್ತಮವಾದ ಶಾಲೆಯಾಗಿದ್ದು, ಬೈಂದೂರು ವಲಯದಲ್ಲಿ ಅತಿ ಹೆಚ್ಚು ಮಕ್ಕಳ ದಾಖಲಾತಿ ಹೊಂದಿರುವ ಎರಡನೇ ದೊಡ್ಡ ಸರಕಾರಿ ಶಾಲೆಯಾಗಿರುವುದು ಪ್ರಶಂಸನಾರ್ಹವಾದುದು ಎಂದು ಹೇಳಿದರು.
ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ದಾನಿಗಳ ಸಹಾಯದಿಂದ ಸುಸಜ್ಜಿತವಾದ ಶಾಲಾ ಕೊಠಡಿ, ವಿಸ್ತಾರದ ರಂಗ ಮಂದಿರ, ಸ್ಮಾರ್ಟ್ ಕ್ಲಾಸ್, ಶೌಚಾಲಯ, ಆವರಣ ಗೋಡೆ, ಸಭಾಂಗಣ ನವೀಕರಣ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಲಾಗಿದ್ದು, ಎಲ್ಲರ ಸಹಕಾರದಿಂದ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಹೇಳಿದರು.
ನೂತನವಾಗಿ ನಿರ್ಮಾಣಗೊಂಡ ರಂಗ ಮಂದಿರವನ್ನು ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಎನ್. ಟಿ ಪೂಜಾರಿ ಗುಜ್ಜಾಡಿ ಉದ್ಘಾಟಿಸಿದರು.
ಕುಂದಾಪುರ ತಾ. ಪಂ ಅಧ್ಯಕ್ಷೆ ಇಂದಿರಾ ಶೆಟ್ಟಿ, ಜಿ.ಪಂ ಸದಸ್ಯೆ ಶೋಭ ಜಿ. ಪುತ್ರನ್, ತಾ. ಪಂ ಸದಸ್ಯರಾದ ನಾರಾಯಣ ಕೆ. ಗುಜ್ಜಾಡಿ, ರಾಜು ದೇವಾಡಿಗ ತ್ರಾಸಿ, ಬೈಂದೂರು ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ ಮುಂದಿನಮನಿ, ಉದ್ಯಮಿಗಳಾದ ಶೇಷಯ್ಯ ಕೊತ್ವಾಲ್, ಗಣಪತಿ ಮೇಸ್ತ ಗುಜ್ಜಾಡಿ, ವಸಂತ ಮೇಸ್ತ ಗುಜ್ಜಾಡಿ, ವಿನೋದ್ ಭಂಡಾರಿ ಶಿವಮೊಗ್ಗ, ಪತ್ರಕರ್ತ ಬಿ.ರಾಘವೇಂದ್ರ ಪೈ ಗಂಗೊಳ್ಳಿ, ಎಸ್‌ಡಿಎಂಸಿ ನಿಕಟಪೂರ್ವ ಅಧ್ಯಕ್ಷ ರಾಮನಾಥ ಚಿತ್ತಾಲ್, ಯಶೋಧಾ ಎನ್.ಪೂಜಾರಿ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಇಂದಿರಾ ಪೂಜಾರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಕಾಶ್ ಎಂ. ಪೂಜಾರಿ, ನಿವೃತ್ತ ಮುಖ್ಯೋಪಾಧ್ಯಾಯ ಜಯರಾಮ ಶೆಟ್ಟಿ ಉಪಸ್ಥಿತರಿದ್ದರು.
ಶತಮಾನೋತ್ಸವ ಸಮಿತಿ ಕಾರ್ಯದರ್ಶಿ ರಾಜೀವ್ ಶ್ರೀಯಾನ್ ಸ್ವಾಗತಿಸಿದರು. ಅಧ್ಯಕ್ಷ ಉಮೇಶ ಎಲ್.ಮೇಸ್ತ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಲಾ ಮುಖ್ಯೋಪಾಧ್ಯಾಯ ಆನಂದ ಜಿ. ವರದಿ ವಾಚಿಸಿದರು. ಶಾಲಾ ಶಿಕ್ಷಕಿ ಆಶಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಮಾಧವಿ ವಂದಿಸಿದರು.