ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ತೊಡಗಿಸಿದ ಸಮಯ ನಮ್ಮ ಜೀವನವಿಡಿ ನಮ್ಮ ಜೊತೆ ಬರುತ್ತದೆ. ವಿದ್ಯೆಯೆಂಬ ಧನವನ್ನು ಯಾರಿದಂಲೂ ಕದಿಯಲು ಸಾಧ್ಯವಿಲ್ಲ. ವಿದ್ಯೆಯನ್ನು ಹಂಚಿದಷ್ಟು ಕಡಿಮೆಯಾಗುದಿಲ್ಲ. ಶಾಲೆಗಳಲ್ಲಿ ಅಧ್ಯಾಪಕರು ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಅವರನ್ನು ಸರಿದಾರಿಯಲ್ಲಿ ನಡೆಸಿಕೊಂಡು ಹೋಗಬೇಕು, ವಿದ್ಯಾರ್ಥಿಗಳು ತಪ್ಪಿದಾಗ ಬುದ್ಧಿಹೇಳಿ ತಿದ್ದಬೇಕು. ವಿದ್ಯಾಭ್ಯಾಸದಲ್ಲಿ ಮಾನವೀಯ ಗುಣಗಳನ್ನು ಸದ್ಭುದ್ಧಿಗಳ ಮೌಲ್ಯಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳನ್ನು ಸತ್ಪ್ರಜೆಗಳನ್ನಾಗಿ ಮಾಡುವುದರಲ್ಲಿ ಅಧ್ಯಾಪಕರ ಪಾತ್ರ ಹಿರಿದು ಎಂದು ದುಬೈನ ಕೊಂಚಾಡಿ ಸಬಿತಾ ಗಣಪತಿ ಶೆಣೈ ಹೇಳಿದರು.
ಅವರು ಕುಂದಾಪುರ ತಾಲೂಕಿನ ಬೈಂದೂರು ವಲಯದ ಗುಜ್ಜಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಂಚಾಡಿ ರಾಧಾ ಶೆಣೈ ಮತ್ತು ಕೊಂಚಾಡಿ ಗೋಪಾಲಕೃಷ್ಣ ಶೆಣೈ ಸ್ಮರಣಾರ್ಥ ಕೊಂಚಾಡಿ ರಾಧಾ ಗೋಪಿ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇವರು ಕೊಡುಗೆಯಾಗಿ ನೀಡಿರುವ ಸುಮಾರು ೧೬.೮೦ ಲಕ್ಷ ರೂ. ವೆಚ್ಚದಲ್ಲಿ ನವೀಕರಣಗೊಂಡಿರುವ ಶಾಲಾ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ, ವಿದ್ಯೆಯಿಂದ ಮನುಷ್ಯನು ಪರಿಪೂರ್ಣ ಬೆಳವಣಿಗೆ ಹೊಂದುತ್ತಾನೆ. ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಂಡು ಗ್ರಾಮದ ಹಾಗೂ ಶಾಲೆಯ ಬೆಳವಣಿಗಳಲ್ಲಿ ಶಿಕ್ಷಣದ ಪಾತ್ರ ಮಹತ್ವವಾದುದು. ಗ್ರಾಮೀಣ ಪ್ರದೇಶದಲ್ಲಿರುವ ಗುಜ್ಜಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡವನ್ನು ಸಂಪೂರ್ಣ ನವೀಕರಣಗೊಳಿಸಿ ಸಮಾಜಕ್ಕೆ ಅರ್ಪಿಸಿದ ಕೊಂಚಾಡಿ ಗಣಪತಿ ಶೆಣೈ ಅವರ ಕಾರ್ಯ ಶ್ಲಾಘನೀಯ ಎಂದರು.
ಗೌರವ ಅತಿಥಿಗಳಾದ ದುಬೈನ ಉದ್ಯಮಿ ಕೊಂಚಾಡಿ ಗಣಪತಿ ಶೆಣೈ ಶುಭ ಹಾರೈಸಿದರು. ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಸುಜಯೀಂದ್ರ ಹಂದೆ ಅಭಿನಂದನಾ ಮಾತುಗಳನ್ನಾಡಿದರು. ಇದೇ ಸಂದರ್ಭ ಕಟ್ಟಡ ನವೀಕರಣಕ್ಕೆ ಕೊಡುಗೆ ನೀಡಿದ ಕೊಂಚಾಡಿ ಗಣಪತಿ ಶೆಣೈ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಕಟ್ಟಡ ನವೀಕರಣಕ್ಕೆ ಸಹಕರಿಸಿದ ಗಂಗೊಳ್ಳಿಯ ಉದ್ಯಮಿ ಎಚ್.ಗಣೇಶ ಕಾಮತ್, ಪತ್ರಕರ್ತ ಬಿ.ರಾಘವೇಂದ್ರ ಪೈ ಹಾಗೂ ಶಾಲೆಯ ಮುಖ್ಯ ಶಿಕ್ಷಕ ಹನುಮಂತ ಬಿಲ್ಲವ ಅವರನ್ನು ಸನ್ಮಾನಿಸಲಾಯಿತು. ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಜಿಲ್ಲಾ ಪಂಚಾಯತ್ ಸದಸ್ಯೆ ಶೋಭಾ ಜಿ.ಪುತ್ರನ್, ತಾಲೂಕು ಪಂಚಾಯತ್ ಸದಸ್ಯರಾದ ನಾರಾಯಣ ಕೆ. ಗುಜ್ಜಾಡಿ, ರಾಜು ದೇವಾಡಿಗ, ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಹರೀಶ ಮೇಸ್ತ, ಗಂಗೊಳ್ಳಿಯ ಉದ್ಯಮಿ ಎಚ್.ಗಣೇಶ ಕಾಮತ್, ಪತ್ರಕರ್ತ ಬಿ.ರಾಘವೇಂದ್ರ ಪೈ ಉಪಸ್ಥಿತರಿದ್ದರು.
ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ರಾಮನಾಥ ಚಿತ್ತಾಲ್ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಹನುಮಂತ ಬಿಲ್ಲವ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಮೇಶ ಮೇಸ್ತ ಅತಿಥಿಗಳನ್ನು ಪರಿಚಯಿಸಿದರು. ಮೋಹನ ಸನ್ಮಾನಿತರನ್ನು ಪರಿಚಯಿಸಿದರು. ಸಹಶಿಕ್ಷಕಿ ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕ ಜಯರಾಮ ಶೆಟ್ಟಿ ವಂದಿಸಿದರು.