ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಗ್ರಾಮೀಣ ಭಾಗ ಸೇರಿದಂತೆ ಸ್ಥಳೀಯವಾಗಿ ಕೌಶಲ್ಯಾಧರಿತ ತರಬೇತಿ ಪಡೆದ ಯುವ ಸಮುದಾಯ ನಿರ್ಮಾಣದ ಜೊತೆಗೆ ಗುಣಮಟ್ಟದ ಶಿಕ್ಷಣ ತರಬೇತಿ ಮೂಲಕ ಅತ್ಯುತ್ತಮ ಸಂಸ್ಥೆಗಳನ್ನು ಆರಂಭಿಸುವ ಉದ್ದೇಶದಿಂದ ಸರಕಾರ ವಿಶ್ವ ದರ್ಜೆಯ ಐ.ಟಿ.ಐ ಕಾಲೇಜುಗಳನ್ನು ಆರಂಭಿಸುತ್ತಿದೆ ಎಂದು ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ವಿದ್ಯುನ್ಮಾನ, ಐಟಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಶ್ವಥ್ ನಾರಾಯಣ ಹೇಳಿದರು.
ಅವರು, ಶನಿವಾರ ಬೈಂದೂರು ಸರಕಾರಿ ಐ.ಟಿ.ಐ ಕಾಲೇಜಿಗೆ ಬೇಟಿ ನೀಡಿ, ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಐ.ಟಿ.ಐ ಕಾಲೇಜಿನ ಕಟ್ಟಡ ಕಾಮಗಾರಿ ವೀಕ್ಷಿಸಿ ಮಾತನಾಡಿದರು.
ಐ.ಟಿ.ಐ ಕಾಲೇಜುಗಳನ್ನು ಆರಂಭಿಸುಲು ಬೇಡಿಕೆ ಆಧಾರದಲ್ಲಿ ಹೊಸದಾದ 11 ಕೋರ್ಸ್‌ಗಳು ಆರಂಭವಾಗಲಿದ್ದು ಅವುಗಳಲ್ಲಿ ಆರು ವಿಷಯಗಳು ಎರಡು ವರ್ಷ ಹಾಗೂ ಐದು ವಿಷಯಗಳು ಒಂದು ವರ್ಷದ ಅವಧಿಯದ್ದಾಗಿದೆ. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕಿದೆ ಎಂದರು.
ಉಪ ಚುನಾವಣೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ ಕಾಂಗ್ರೆಸ್ ಪಕ್ಷ ಕುಟುಂಬ ಆಧಾರಿತವಾಗಿದೆ. ಅದು ನಮ್ಮ ದೇಶಕ್ಕೆ ಪ್ರಸ್ತುತವಲ್ಲ ಅದರ ಸಂಪೂರ್ಣ ನಿರ್ನಾಮ ನಮ್ಮ ಜನಪರ ಕಾರ್ಯಕ್ರಮ ಮೂಲಕ ಆಗಲಿದೆ. ಉಪ ಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲಿ ಬಿಜೆಪಿ ಜಯಬೇರಿ ಗಳಿಸಲಿದೆ ಎಂದರು.

ಇಂಜಿನಿಯರ್‌ಗೆ ಗರಂ ಆದ ಸಚಿವರು:
ಐ.ಟಿ.ಐ ಕಾಲೇಜಿನ ಕಾಮಗಾರಿ ಪರೀಕ್ಷಣೆ ವೇಳೆ ಕಾಮಗಾರಿ ವಿವರ ಕೇಳಿದಾಗ ಯಾವುದೇ ದಾಖಲೆಯನ್ನು ಹಾಜರುಪಡಿಸದೆ ಇಂಜಿನಿಯರ್ ವಿರುದ್ದ ಸಚಿವರು ಗರಂ ಆದರು. ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ಲೋಪ ಉಂಟಾಗದಂತೆ ವ್ಯವಸ್ಥಿತವಾಗಿ ಮೂಲ ಯೋಜನೆಯ ಪ್ರಕಾರ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳ್ಳಬೇಕು. ಮಹತ್ವಪೂರ್ಣ ಯೋಜನೆಯಾಗಿರುವುದರಿಂದ ಕಾಮಗಾರಿಯಲ್ಲಿ ಯಾವುದೇ ಲೋಪ ಉಂಟಾಗದಂತೆ ಕಾಮಗಾರಿ ಪೂರ್ಣಗೊಳ್ಳಬೇಕು ಎಂದರು.
ಬೈಂದೂರು ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ ಮಾತನಾಡಿ ಕ್ಷೇತ್ರದಲ್ಲಿ ದಾಖಲೆಯ ಅಭಿವ್ರದ್ದಿ ಕಾರ್ಯಗಳಾಗಿದೆ. ಬಂದೂರು ಕ್ಷೇತ್ರ ರಾಜ್ಯದಲ್ಲೆ ಮಾದರಿ ಕ್ಷೇತ್ರವಾಗಲಿದೆ.ವಿಶ್ವ ದರ್ಜೆಯ ಐಟಿಐ ಕಾಲೇಜು ಆರಂಭವಾಗುವ ಮೂಲಕ ಉತ್ತಮ ಶಿಕ್ಷಣ ದೊರೆಯಲಿದೆ ಎಂದರು.
ಈ ಸಂದರ್ಭದಲ್ಲಿ ಬೈಂದೂರು ತಹಶೀಲ್ದಾರ ಶೋಭಾಲಕ್ಷ್ಮಿ, ಐ.ಟಿ.ಐ ಕಾಲೇಜಿನ ಪ್ರಾಂಶುಪಾಲ ಜಗದೀಶ, ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಮುಖಂಡರಾದ ಪ್ರಿಯದರ್ಶಿನಿ ಬೆಸ್ಕೂರ್, ಇಂಜಿನಿಯರ್ ಮೊದಲಾದವರು ಉಪಸ್ಥಿತರಿದ್ದರು.