ಬಂಟ್ಸ್ ಸೋಲಾರ್ ಸಹಯೋಗದೊಂದಿಗೆ ಒಂದು ವಿನೂತನ ಪ್ರಯತ್ನಕ್ಕೆ ಮುನ್ನುಡಿ
ಕುಂದಾಪುರ: ಸೋಲಾರ್ ಕಂಪೆನಿಗಳು ಸೋಲಾರ್ ಬೆಳಕು, ಉದ್ಯೋಗವನ್ನು ನೀಡುವುದಷ್ಟೇ ಅಲ್ಲದೇ ದೇಶ ಕಟ್ಟುವ ಕಾರ್ಯವನ್ನು ಮಾಡುತ್ತಿದೆ. ಮುಂದೊಂದು ದಿನ ಸೋಲಾರ್ ಶಕ್ತಿ ನಮ್ಮ ದೇಶದ ಪರ್ಯಾಯ ಶಕ್ತಿಯಾಗಬಹುದು ಎಂದು ಸಿಂಡಿಕೇಟ್ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಕೆ. ಟಿ. ರೈ ಹೇಳಿದರು.
ಅವರು ಗುರುಕುಲ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಅಳವಡಿಸಲಾದ ಸೋಲಾರ್ ನೆಟ್ ಮೀಟರಿಂಗ್ ಸಿಸ್ಟಮ್ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ವಿದ್ಯಾಸಂಸ್ಥೆಯನ್ನು ಕಟ್ಟಿ ಬೆಳೆಸುವುದರೊಂದಿಗೆ ಹೊಸ ಹೊಸ ಆವಿಷ್ಕಾರಗಳಿಗೆ ಇಲ್ಲಿ ಮನ್ನಣೆ ದೊರಕಿಸಿಕೊಟ್ಟಿರುವುದನ್ನು ಅವರು ಶ್ಲಾಘಿಸಿದರು.
ಇದಕ್ಕೂ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ಬಂಟ್ಸ್ ಸೋಲಾರ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ನ ಮ್ಯಾನೆಜಿಂಗ್ ಟ್ರಸ್ಟಿ ಚಂದ್ರಶೇಖರ ಶೆಟ್ಟಿ ಮಾತನಾಡಿ ಸೋಲಾರ್ ಫಲಕಗಳನ್ನು ಅಳವಡಿಸಿಕೊಂಡು ವಿದ್ಯುತ್ ಉತ್ಪಾದಿಸಿ ಅವಶ್ಯವಿರುವಷ್ಟನ್ನೇ ಬಳಸಿಕೊಂಡು ಹೆಚ್ಚುವರಿಯಾದ ವಿದ್ಯುತ್ನ್ನು ಕೆಪಿಟಿಸಿಎಲ್ ಗೆ ವರ್ಗಾಯಿಸಿ ಆದಾಯ ಗಳಿಸುವ ತಮ್ಮ ಸ್ಥಾವರ ತಮ್ಮ ವಿದ್ಯುತ್ ಯೋಜನೆ ವಿನೂತನವಾಗಿದ್ದು, ಗುರುಕುಲ ಪಬ್ಲಿಕ್ ಸ್ಕೂಲ್ನಲ್ಲಿ ಪ್ರಥಮವಾಗಿ ಅಳವಡಿಸುತ್ತಿರುವುದು ಹೆಮ್ಮೆಯ ವಿಚಾರ ಎಂದವರು ಹೇಳಿದರು.
ಬಾಂಡ್ಯ ಎಜುಕೇಶನ್ ಟ್ರಸ್ಟ್ನ ಸಂಸ್ಥಾಪಕ ಅಪ್ಪಣ್ಣ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಿಂಡಿಕೇಶ್ ಬ್ಯಾಂಕಿನ ಡಿಜಿಎಂ ಭರಮೇಗೌಡ, ಮೆಸ್ಕಾಂ ಗೋಪಾಡಿ ಶಾಖೆಯ ಎಸ್ಓ ಸುರೇಶ್ ಬಾಬು ಉಪಸ್ಥಿತರಿದ್ದರು.
ಬಾಂಡ್ಯ ಎಜುಕೇಶನ ಟ್ರಸ್ಟ್ನ ಜಂಟಿ ಕಾರ್ಯದರ್ಶಿ ಅನುಪಮ ಎಸ್. ಶೆಟ್ಟಿ ಸ್ವಾಗತಿಸಿದರು. ಆಡಳಿತ ನಿರ್ದೇಶಕರಾದ ಬಾಂಡ್ಯಾ ಸುಭಾಷಚಂದ್ರ ಶೆಟ್ಟಿ ಧನ್ಯವಾದಗೈದರು.