ಗುಲ್ವಾಡಿ ಗ್ರಾ. ಪಂ. ಕಛೇರಿ ಸ್ಥಳಾಂತರಿಸದಿರಿ

ಕುಂದಾಪುರ: ಗುಲ್ವಾಡಿಯಲ್ಲಿ ಬ್ಯಾಂಕ್‌ಗಳು, ನ್ಯಾಯಬೆಲೆ ಅಂಗಡಿಗಳು ಒಂದೇ ಕಡೆ ಇರುವುದರಿಂದ ಜನರ ಅನುಕೂಲಕ್ಕೆ ಗ್ರಾಮಪಂಚಾಯತ್ ಕಛೇರಿ ಗುಲ್ವಾಡಿಯಲ್ಲಿ ಕಾರ್ಯನಿರ್ವಹಿಸಿದರೆ ಅನುಕೂಲವಾಗುತ್ತದೆ. ಆದ್ದರಿಂದ ಸರಕಾರ ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡಕೂಡದು. ಮತ್ತು ಗುಲ್ವಾಡಿ ಗುಡಾರ್‌ಹಕ್ಲುಗೆ ಸಂಪರ್ಕ ಸೇತುವೆ ನಿರ್ಮಿಸಬೇಕು, ಗುಲ್ವಾಡಿಯಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿ ಮಾಡಬೇಕು, ಜನರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗೆ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿ ಸಿಪಿಎಂ ಗುಲ್ವಾಡಿ ಶಾಖೆ ಇಂದು ಗುಲ್ವಾಡಿ ಗ್ರಾಮಪಂಚಾಯತ್ ಎದುರು ಪ್ರತಿಭಟನೆ ನಡೆಸಿತು.

ಬೈಂದೂರು ವಲಯ ಕಾರ್ಯದರ್ಶಿ ಸುರೇಶ್‌ಕಲ್ಲಾಗರ ಮಾತನಾಡಿ, ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ರೈತ ಕಾರ್ಮಿಕರು ತ್ಯಾಗ ಬಲಿದಾನ ಮಾಡಿದ ಪರಿಣಾಮ ದೇಶ ಸ್ವಾತಂತ್ರ್ಯ ಗಳಿಸಲು ಸಾಧ್ಯವಾಗಿದೆ. ಅದರಂತೆ ಇಂದು ಜನಸಾಮಾನ್ಯರು ತಮ್ಮ ಬದುಕಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಹೋರಾಟಗಳನ್ನು ನಡೆಸುವುದು ಅನಿವಾರ್ಯವಾಗಿದೆ. ಸಿಪಿಎಂ ಪಕ್ಷವು ತನ್ನ ಜನಾಂದೋಲನವನ್ನು ಆಗಸ್ಟ್-೧೪ ಮಧ್ಯರಾತ್ರಿವರೆಗೆ ನಡೆಸಲು ನಿರ್ಧರಿಸಿ ಜನತೆಯ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸುತ್ತಿದೆ ಎಂದು ಅವರು ಹೇಳಿದರು.

ಸಿಪಿಎಂ ಕುಂದಾಪುರ ವಲಯ ಕಾರ್ಯದಶಿ ಹೆಚ್. ನರಸಿಂಹ ಮಾತನಾಡಿ, ಕೇಂದ್ರದ ಬಿಜೆಪಿ ರಾಜ್ಯದ ಕಾಂಗ್ರೆಸ್ ಸರಕಾರಗಳು ಅನುಸರಿಸುತ್ತಿರುವ ನೀತಿಗಳು ಏಕರೀತಿಯಾಗಿರುವುದರಿಂದ ಬೆಲೆ ಏರಿಕೆ ತಡೆಯಲು ಸಾಧ್ಯವಾಗುತ್ತಿಲ್ಲ. ಪ್ರತಿ ಚುನಾವಣೆಯಲ್ಲಿ ಜನರಲ್ಲಿ ಭ್ರಮೆ ಹುಟ್ಟಿಸಿ ಓಟು ಗಿಟ್ಟಿಸಿಕೊಳ್ಳುವ ಮೂಲಕ ಜನತೆಯನ್ನು ವಂಚಿಸುತ್ತಿವೆ. ಇದರ ವಿರುದ್ಧ ಸಿಪಿಎಂ ಪಕ್ಷ ರಾಷ್ಟ್ರವ್ಯಾಪಿ ಜನಾಂದೋಲನ ನಡೆಸುತ್ತಿದೆ ಎಂದು ಹೇಳಿದರು.

ಪಂಚಾಯತ್ ಉಪಾಧ್ಯಕ್ಷರಾದ ಜಿ. ಮಹಮ್ಮದ್ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಂದ್ರಕಾಂತರವರಿಗೆ ಮನವಿ ಸಲ್ಲಿಸಲಾಯಿತು.

Leave a Reply

Your email address will not be published. Required fields are marked *

seventeen − 10 =