ಗೋಳಿಹೊಳೆ ಗ್ರಾಮಸಭೆಯಲ್ಲಿ ಗದ್ದಲ

Call us

ಬೈಂದೂರು: ನಮ್ಮ ಗ್ರಾಮದ ಹೆಚ್ಚಿನ ಗೂಡಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಇದನ್ನು ತಡೆಗಟ್ಟಲು ಇಲಾಖೆ ವಿಫಲವಾಗಿದೆ. ಯಾವೂದೇ ಅಂಗಡಿಯಲ್ಲಿ ಒಂದು ಮದ್ಯದ ಬಾಟಲಿ ಸಿಕ್ಕಿದರೂ ಮಾರುವಾತನನ್ನು ಬಂಧಿಸುವುದಾಗಿ ಹೇಳಿದ ಉಡುಪಿ ಅಬಕಾರಿ ಕಛೇರಿಯ ಅಧಿಕಾರಿಗಳು, ಬಾಕ್ಸ್‌ಗಟ್ಟಲೆ ಅಕ್ರಮ ಮದ್ಯ ಸಿಕ್ಕಿದರೂ ಯಾಕೆ ಕ್ರಮ ತೆಗೆದುಕೊಂಡಿಲ್ಲ. ಬೈಂದೂರು ಭಾಗದ ವೈನ್‌ಶಾಪ್ ಮಾಲೀಕರಿಗೆ ಹಣ ಮುಖ್ಯವಾಗಿದೆ. ಇವರು ಸಾಮಾಜಿಕ ಪಿಡುಗನ್ನು ಕಾನೂನು ರೀತಿಯಲ್ಲಿ ವಿಚಾರಿಸಬೇಕಾದ ಪೋಲೀಸ್ ಇಲಾಖೆಗೆ ಹಪ್ತಾ ನೀಡಿ ವ್ಯವಸ್ಥಿತವಾಗಿ ಬುಟ್ಟಿಗೆ ಹಾಕಿಕೊಂಡಿದ್ದಾರೆ.

Call us

Call us

-ಇದು ಯಾವುದೇ ಸಿನೆಮಾ ಡೈಲಾಗ್ ಅಲ್ಲ. ಗೋಳಿಹೊಳೆ ಗ್ರಾಮಸಭೆಯಲ್ಲಿ ಸ್ಥಳೀಯ ಮಹಿಳೆಯರು ಪಂಚಾಯತ್ ವಿರುದ್ದ ಹರಿಹಾಯ್ದ ರೀತಿ. ಗ್ರಾಮಸಭೆಗೆ ಅಬಕಾರಿ ಇಲಾಖಾಧಿಕಾರಿ ಗೈರಾಗಿದ್ದೆ ಇಷ್ಟೆಲ್ಲ ರಾದ್ದಾಂತಕ್ಕೆ ಕಾರಣವಾಯಿತು. ಸಂಜೆ ಸಮಯದಲ್ಲಿ ಮಾಮೂಲಿ ವಸೂಲಿಗಾಗಿ ಗೂಡಂಗಡಿಗಳಿಗೆ ಬರುವ ಅಬಕಾರಿ ಇಲಾಖಾ ಸಿಬ್ಬಂದಿಗಳಿಗೆ ಗ್ರಾಮಸಭೆಗೆ ಬರಲು ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರತಿಭಟಿಸಿದ ಮಹಿಳೆಯರ ಹಾಗೂ ಗ್ರಾಮಸ್ಥರ ಆಕ್ರೋಶ ತೀವೃ ಸ್ವರೂಪ ಪಡೆಯಿತು. ಈ ಬಗ್ಗೆ ಪಂಚಾಯತ್ ನಿರ್ಣಯ ಮಾಡಿ ಸಂಬಂಧಿಸಿದವರಿಗೆ ದೂರು ನೀಡುವುದಾಗಿ ನೊಡೆಲ್ ಅಧಿಕಾರಿಯಾಗಿ ಆಗಮಿಸಿದ ತೋಟಗಾರಿಕೆ ಇಲಾಖಾಧಿಕಾರಿ ರಾಘವೇಂದ್ರ ಭರವಸೆ ಕೊಟ್ಟ ಮೇಲೆ ಪರಿಸ್ಥಿತಿ ತಿಳಿಯಾಯಿತು. ಬಳಿಕ ಎರಡು ಬಣಗಳ ರಾಜಕೀಯ ಘರ್ಷಣೆಯಿಂದ ಕೆಲಕಾಲ ಪ್ರಕ್ಷುಬ್ದ ವಾತಾವರಣ ಸೃಷ್ಠಿಯಾಯಿತು. ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ ಜನಪ್ರತಿನಿಧಿಗಳ ನಡೆಗೆ ಕೋಪಗೊಂಡ ಗ್ರಾಮಸ್ಥರು ಸಭೆಯನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ಬಂದರು. ಬಳಿಕ ಮಾರ್ಗದರ್ಶಿ ಅಧಿಕಾರಿಗಳ ವಿನಂತಿಯ ಮೇರೆಗೆ ಗ್ರಾಮಸ್ಥರು ಬಹಿಷ್ಕಾರ ಹಿಂಪಡೆದರು.

ಕೊಡಿಯಾಲ್‌ಕೇರಿ ಅಂಗನವಾಡಿ ಕಟ್ಟಡ ಮೂರು ವರ್ಷ ಕಳೆದರೂ ಮಂಜೂರಾಗದಿರುವುದು, ಕಳೆದರಡು ವರ್ಷದಿಂದ ಯಳಜಿತ್ ಸೋರುವ ಅಂಗನವಾಡಿ ಕಟ್ಟಡ ರಿಪೇರಿಯಾಗದಿರುವ ಕುರಿತು ಇಲಾಖಾ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಅನುದಾನದ ಕೊರತೆಯಿಂದ ಇದು ಸಾಧ್ಯವಾಗಿಲ್ಲ ಎಂದು ಮಹಿಳಾ ಮತ್ತು ಶಿಶುಕಲ್ಯಾಣ ಇಲಾಖಾಧಿಕಾರಿ ಪೂರ್ಣಿಮಾ ಸಭೆಗೆ ತಿಳಿಸಿದರು. ಚಾರ್ಸಾಲು ಮರಾಠಿ ಕೇರಿಗೆ ಇದುವರೆಗೆ ವಿದುತ್ ಸಂಪರ್ಕ ನೀಡದಿರುವ ಬಗ್ಗೆ ಮೆಸ್ಕಾಂ ಅಧಿಕಾರಿಗಳಿಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೊಲ್ಲೂರು ಶಾಖಾಧಿಕಾರಿ ಸಂತೋಷ್ ನಾಯಕ್, ಮೀಸಲು ಅರಣ್ಯ ಪ್ರದೇಶವಾಗಿರುವುದರಿಂದ ಸ್ವಲ್ಪಮಟ್ಟಿನ ಸಮಸ್ಯೆಯಾಗಿದೆ ಎಂದರು. ಗ್ರಾಮದಲ್ಲಿ ನಿವೇಶನ ರಹಿತರಿಗೆ ಹಾಗೂ ಅವಶ್ಯಕತೆ ಇರುವವರಿಗೆ ಆದ್ಯತೆ ನೀಡಬೇಕು. ಈಗಾಗಲೇ ಸ್ಥಳ ಇರುವವರಿಗೆ ಅಗತ್ಯ ಇಲ್ಲದವರಿಗೆ ನಿವೇಶನ ಹಂಚಿಕೆ ಮಾಡಬಾರದು ಎಂದು ಗ್ರಾಮಸ್ಥರು ಈ ಸಂದರ್ಭದಲ್ಲಿ ಪಂಚಾಯತ್ತಿಗೆ ಆಗ್ರಹಿಸಿದರು. ಗೋಳಿಹೊಳೆ ಗ್ರಾಮದ ಸ.ನಂ.೩೫೦ರ ಐದು ಎಕ್ರೆ ಸರಕಾರಿ ಸ್ಥಳವನ್ನು ಬೇರೆ ಗ್ರಾಮಗಳಿಗೆ ಡಂಪಿಂಗ್ ಯಾರ್ಡ್‌ಗೆ ನೀಡಲು ಪ್ರಸ್ತಾವನೆ ಸಲ್ಲಿಸಿದ ವಿಚಾರದ ಕುರಿತು ಸಭೆಯ ಕೊನೆಯ ಹಂತದಲ್ಲಿ ಇನ್ನೊಮ್ಮೆ ಕೋಲಾಹಲವಾಯಿತು. ಬೇರೆ ಗ್ರಾಮಗಳ ಕಸವನ್ನು ಇಲ್ಲಿ ತಂದು ಹಾಕಲು ಸರ್ವಥಾ ಬಿಡುವುದಿಲ್ಲ. ಈ ಪ್ರಸ್ತಾವನೆ ಕೈ ಬಿಡದಿದ್ದರೆ ಉಗ್ರಹೋರಾಟಕಕ್ಕೂ ಹಿಂಜರಿಯಲಾರೆವು ಎಂದು ಗ್ರಾಮಸ್ಥರು ಒಕ್ಕೊರಳಿನಿಂದ ಕೂಗಿ ಗದ್ದಲ ಎಬ್ಬಿಸಿದರು. ಈ ವಿಷಯದ ಕುರಿತಂತೆ ಪಿಡಿಓ ಚಂದ್ರಶೇಖರ ಹೀಗಾದಂತೆ ಕ್ರಮ ಜರಿಗಿಸುವುದಾಗಿ ಸಮಾಧಾನ ಪಡಿಸಿದರು. ಒಟ್ಟಿನಲ್ಲಿ ಗ್ರಾಮಸಭೆ ಗದ್ದಲದ ಗೂಡಾಯಿತು.

Call us

Call us

ಗ್ರಾಪಂ ಅಧ್ಯಕ್ಷ ರಾಜು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಇಲಾಖೆಯ ಗಾಯತ್ರಿದೇವಿ, ಅರಣ್ಯಾಧಿಕಾರಿ ಗೋವಿಂದ ಪಟಗಾರ್, ಆರೋಗ್ಯ ಇಲಾಖೆಯ ಗಾಯತ್ರಿ, ಪಶುವೈದ್ಯ ಡಾ. ವಿವೇಕಾನಂದ, ಗ್ರಾಮಲೆಕ್ಕಿಗ ಮಂಜುನಾಥ ತಮ್ಮ ಇಲಾಖೆಯ ಯೋಜನೆ, ಮಾಹಿತಿಯನ್ನು ಗ್ರಾಮಸ್ಥರಿಗೆ ನೀಡಿದರು. ಗ್ರಾಪಂನ ಸರ್ವ ಸದಸ್ಯರು ಉಪಸ್ಥಿತರಿದ್ದರು. ಪಿಡಿಓ ಚಂದ್ರಶೇಖರ ಸ್ವಾಗತಿಸಿ, ಕಾರ್ಯದರ್ಶಿ ಅನ್ನಮ್ಮ ವಂದಿಸಿದರು. ವಾಸು ಗೌಡ ನಿರೂಪಿಸಿದರು.

Leave a Reply

Your email address will not be published. Required fields are marked *

12 + 6 =