ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸ್ವಚ್ಛಭಾರತದ ಕನಸು ನನಸಾಗಬೇಕಾದರೆ ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಸಮರ್ಪಕ ತ್ಯಾಜ್ಯ ನಿರ್ವಹಣೆ ನಡೆಯಬೇಕು. ಉಡುಪಿ ಜಿಲ್ಲೆಯಲ್ಲಿ ಆರಂಭವಾಗಿರುವ ವೆಲ್ಲೂರು ಮಾದರಿಯ ಘನ-ದ್ರವ ಸಂಪನ್ಮೂಲ ನಿರ್ವಹಣೆ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ವಿಸ್ತರಿಸಲ್ಪಡಬೇಕು ಎಂದು ವಂಡ್ಸೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಉದಯಕುಮಾರ ಶೆಟ್ಟಿ ಹೇಳಿದರು.
ಕುಂದಾಪುರ ಮಿಡ್‌ಟೌನ್ ಮತ್ತು ಬೈಂದೂರು ರೋಟರಿ ಕ್ಲಬ್, ಉಪ್ಪುಂದ-ಬೈಂದೂರು ಲಯನ್ಸ್ ಕ್ಲಬ್ ಹಾಗೂ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಸಹಯೋಗದಲ್ಲಿ ವಿಚಿತ್ರ ಕ್ರಿಯೇಶನ್ಸ್ ಹೊರತಂದಿರುವ ಘನದ್ರವ ಸಂಪನ್ಮೂಲ ನಿರ್ವಹಣಾ ಘಟಕದ ಸಾಕ್ಷ್ಯಚಿತ್ರವನ್ನು ಅವರು ಶನಿವಾರ ನಾಗೂರಿನ ಕೆಎಎಸ್ ಆಡಿಟೋರಿಯಮ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.
ತಮ್ಮ ನೇತೃತ್ವದಲ್ಲಿ ವಂಡ್ಸೆ ಗ್ರಾಮ ಪಂಚಾಯಿತಿ ಆರಂಭಿಸಿರುವ ಘನದ್ರವ ಸಂಪನ್ಮೂಲ ನಿರ್ವಹಣಾ ಘಟಕದ ಯಶೋಗಾಥೆಯನ್ನು ವಿವರಿಸಿದ ಉದಯಕುಮಾರ ಶೆಟ್ಟಿ ಅದು ಮೂರು ವರ್ಷಗಳಿಂದ ಅತ್ಯಂತ ಯಶಸ್ವಿಯಾಗಿ ಮತ್ತು ಲಾಭದಾಯಕವಾಗಿ ನಡೆಯುತ್ತಿದೆ. ರಾಜ್ಯದ ಮಾದರಿ ಘಟಕ ಎಂಬ ಹೆಗ್ಗಳಿಕೆ ಪಡೆದು, ದೇಶದ ಗಮನ ಸೆಳೆದಿದೆ. ವಂಡ್ಸೆಯ ಜನರ ಸಹಭಾಗಿತ್ವ, ಘಟಕದ ಕಾರ್ಯಕರ್ತರ ನಿಸ್ಪೃಹ ದುಡಿಮೆ ಅದರ ಯಶಸ್ಸಿಗೆ ಕಾರಣ. ಇಚ್ಛಾಶಕ್ತಿ ಇದ್ದರೆ ಆ ಮಾದರಿಯನ್ನು ಎಲ್ಲ ಗ್ರಾಮ ಪಂಚಾಯಿತಿಗಳು ಅನುಸರಿಸಬಹುದು ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮರವಂತೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್. ಜನಾರ್ದನ, ವಿಚಿತ್ರ ಕ್ರಿಯೇಶನ್ಸ್ ತಂಡ ವಂಡ್ಸೆ ಘಟಕ ಕೇಂದ್ರಿತವಾಗಿ ನಿರ್ಮಿಸಿದ ಸಾಕ್ಷ್ಯಚಿತ್ರ ಹೆಚ್ಚು ಪ್ರಸಾರ ಪಡೆದು ಗ್ರಾಮೀಣ ಜನರಲ್ಲಿ ತ್ಯಾಜ್ಯ ನಿರ್ವಹಣೆಯತ್ತ ಒಲವು ಬೆಳೆಸಲಿ ಎಂದು ಆಶಿಸಿದರು.
ಕುಂದಾಪುರ ಮಿಡ್‌ಟೌನ್ ರೋಟರಿ ಅಧ್ಯಕ್ಷ ನಳಿನ್‌ಕುಮಾರ ಶೆಟ್ಟಿ, ಬೈಂದೂರು ರೋಟರಿ ಅಧ್ಯಕ್ಷ ಯು. ಗೋಪಾಲ ಶೆಟ್ಟಿ, ಉಪ್ಪುಂದ-ಬೈಂದೂರು ಲಯನ್ಸ್ ಕ್ಲಬ್ ಅಧ್ಯಕ್ಷ ಜಯಶೀಲ ಶೆಟ್ಟಿ, ಕಾರ್ಯಕ್ರಮದ ಪ್ರಧಾನ ಪ್ರಾಯೋಜಕ ಕನಕ ಉದ್ಯಮ ಸಮೂಹದ ಮಾಲೀಕ ಜಗದೀಶ ಶೆಟ್ಟಿ ನಾವುಂದ ಮುಖ್ಯ ಅತಿಥಿಗಳಾಗಿದ್ದರು.
ವಿಚಿತ್ರ ಕ್ರಿಯೇಶನ್ಸ್ ತಂಡದ ಪ್ರಮುಖ ಪ್ರಜ್ವಲ್ ಶೆಟ್ಟಿ ಸ್ವಾಗತಿಸಿ, ವಂದಿಸಿದರು. ಸತೀಶ ಮೊಗೇರಿ ನಿರೂಪಿಸಿದರು. ವಿಚಿತ್ರ ಕ್ರಿಯೇಶನ್ಸ್ ತಂಡದ ಸದಸ್ಯರು ಇದ್ದರು.