ಚೌಡೇಶ್ವರಿ ಯುತ್ ಕ್ಲಬ್ ವಾರ್ಷಿಕೋತ್ಸವ: ಕ್ರೀಡಾಪಟು ಹರೀಶ ಖಾರ್ವಿಗೆ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ: ಇಲ್ಲಿನ ಬಂದರು ರಸ್ತೆಯ ಶ್ರೀ ಚೌಡೇಶ್ವರಿ ಯುತ್ ಕ್ಲಬ್‌ನ ಯುಗಾದಿ ಹಬ್ಬ ಆಚರಣೆ ಹಾಗೂ ವಾರ್ಷಿಕೋತ್ಸವ ಸಮಾರಂಭ ಗುರುವಾರ ಗಂಗೊಳ್ಳಿಯ ಬಂದರಿನ ದೊಡ್ಡಹಿತ್ಲು ವಠಾರದಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಪ್ಪುಂದದ ಉದ್ಯಮಿ ಬಿ.ಎಸ್.ಸುರೇಶ ಶೆಟ್ಟಿ ಮಾತನಾಡಿ, ಭಾರತೀಯ ಸಂಸ್ಕೃತಿ ಪರಂಪರೆಯಂತೆ ಯುಗಾದಿ ಹಬ್ಬವು ಹಿಂದುಗಳಿಗೆ ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ಯುಗಾದಿ ಆಚರಣೆಯ ಮಹತ್ವ ಹಾಗೂ ಉದ್ದೇಶವನ್ನು ಎಲ್ಲರೂ ಅರಿತುಕೊಂಡು ಸಂಭ್ರಮದಿಂದ ಯುಗಾದಿ ಆಚರಣೆ ಮಾಡಬೇಕು. ಕಳೆದ ಸಂವತ್ಸರದ ಕಹಿಯನ್ನು ಮರೆದು ಈ ಹೊಸ ಸಂವತ್ಸರವು ಎಲ್ಲರಿಗೂ ಸಂತೋಷ, ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ತರುವಂತಾಗಲಿ ಎಂದು ಶುಭ ಹಾರೈಸಿದರು.

ಕೋಟ ಸಾಲಿಗ್ರಾಮ ರೋಟರಿ ಕ್ಲಬ್ ಅಧ್ಯಕ್ಷ ಸಂತೋಷ ಪ್ರಭು, ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಜಿ.ಟಿ. ಮಂಜುನಾಥ, ಕೋಟ ಪಡುಕೆರೆ ಸರಕಾರಿ ಪ್ರಥಮ ದರ್ಜೆ ಪ್ರಾಂಶುಪಾಲ ಡಾ.ರಾಜೇಂದ್ರ ಎಸ್.ನಾಯಕ್ ಶುಭಾಶಂಸನೆಗೈದರು. ಇದೇ ಸಂದರ್ಭ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟು ಮಡಿ ಹರೀಶ ಖಾರ್ವಿ ಅವರನ್ನು ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷ ನಾಗರಾಜ ಖಾರ್ವಿ ಜಿಎಫ್‌ಸಿಎಸ್ ಸ್ವಾಗತಿಸಿದರು. ಪ್ರಶಾಂತ ಪೂಜಾರಿ ಸಂದೇಶ ವಾಚಿಸಿದರು. ಮಂತಿ ಸಂಜಯ್ ಖಾರ್ವಿ, ಪ್ರವೀಶ್ ಪುತ್ರನ್, ಪ್ರಶಾಂತ ಪೂಜಾರಿ ಹಾಗೂ ಸಂದೀಪ ಅತಿಥಿಗಳನ್ನು ಗೌರವಿಸಿದರು. ಸುಂದರ ಜಿ. ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ರವಿ ಖಾರ್ವಿ ವಂದಿಸಿದರು. ರಾತ್ರಿ 12 ಗಂಟೆಗೆ ಸ್ಫೂರ್ತಿ ಮಹಿಳಾ ಸಂಘ ದೊಡ್ಡಹಿತ್ಲು ಗಂಗೊಳ್ಳಿ ಇವರಿಂದ ದೀಪ ಬೆಳಗಿಸಿ ಬೇವು ಬೆಲ್ಲ ಮತ್ತು ಸಿಹಿ ತಿಂಡಿ ವಿತರಿಸುವುದರ ಮೂಲಕ ಯುಗಾದಿ ಆಚರಣೆಯನ್ನು ಮಾಡಲಾಯಿತು.

Leave a Reply

Your email address will not be published. Required fields are marked *

one × 2 =