ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಕಳೆದ ನಾಲ್ಕು ವರ್ಷಗಳ ಹಿಂದೆ ಕೊಲ್ಲೂರು ವ್ಯವಸಾಯ ಸಂಘದಿಂದ ವಿಭಜನೆಗೊಂಡು ಜಡ್ಕಲ್ನಲ್ಲಿ ಸ್ಥಾಪನೆಗೊಂಡ ಈ ಸಂಸ್ಥೆ ಆರಂಭದ ದಿನಗಳಲ್ಲಿ ಸ್ವಲ್ಪ ಮಟ್ಟಿನ ನಷ್ಟವನ್ನು ಹೊಂದಿದ್ದರೂ ಅದನ್ನು ಭರಿಸಿಕೊಂಡು ಇಂದು ಈ ಮಟ್ಟದ ಸಾಧನೆ ಮಾಡಿದ್ದು ಸಣ್ಣ ವಿಷಯವಲ್ಲ. ಆಡಳಿತ ಮಂಡಳಿಯ ಪ್ರಾಮಾಣಿಕ ಪ್ರಯತ್ನ, ಸಿಬ್ಬಂದಿಗಳ ಅವಿರತ ಶ್ರಮ ಹಾಗೂ ಸದಸ್ಯರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಹೇಳಿದರು.

ಅವರು ಶುಕ್ರವಾರ ಜಡ್ಕಲ್ ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ಕಟ್ಟಡ ’ಸಹಕಾರ ಸಿರಿ’ ಉದ್ಘಾಟಿಸಿ ಮಾತನಾಡಿದರು. ಸಹಕಾರಿ ತತ್ವದಡಿ ವಿಶೇಷ ಕಾರ್ಯಕ್ರಮಗಳನ್ನು ಸಂಘಟಿಸಿ, ಸರ್ಕಾರದ ಯೋಜನೆಗಳನ್ನು ಅರ್ಹ ಸದಸ್ಯ ಫಲಾನುಭವಿಗಳಿಗೆ ತಲುಪಿಸುವ ಮೂಲಕ ಶೀಘ್ರಗತಿಯಲ್ಲಿ ಅನುಷ್ಠಾನಗೊಳಿಸಿದ ಕೀರ್ತಿ ಹಾಗೂ ಅತ್ಯಂತ ಹಿಂದುಳಿದ ಗ್ರಾಮೀಣ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಮೂಲಕ ತನ್ನ ಗ್ರಾಹಕರಿಗಾಗಿ ಅತ್ಯಂತ ಸುಂದರವಾದ ಹವಾನಿಯಂತ್ರಿತ ಸ್ವಂತ ಕಟ್ಟಡವನ್ನು ನಿರ್ಮಿಸಿದ ಈ ಸಹಕಾರಿ ಸಂಘ ಜಿಲ್ಲೆಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಸಂಘದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ ಭದ್ರತಾ ಕೊಠಡಿ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಪ್ರಧಾನ ಕಛೇರಿ, ಸಲ್ಕೋಡು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಮೊಕ್ತೇಸರ ಸೂರ್ಯನಾರಾಯಣ ಭಟ್ ಸಭಾಭವನ, ಜಡ್ಕಲ್ ಸೈಂಟ್ ಜಾರ್ಜ್ ಫೊರೋನ್ ಚರ್ಚ್ ಧರ್ಮಗುರು ರೆ. ಫಾ. ಥಾಮಸ್ ಪಾರೆಕಾಟಿಲ್ ಪ್ರೇರಕರ ಕೊಠಡಿಯನ್ನು ಉದ್ಘಾಟಿಸಿದರು. ನಬಾರ್ಡ್ ಡಿಡಿಎಂ ಸಂಗೀತ ಕರ್ತ, ಕಟ್ಟಡ ನಿರ್ಮಾಣದ ಗುತ್ತಿಗೆದಾರ ಜೈಸನ್, ಸಂಘದ ನಿರ್ದೇಶಕ ಹಾಗೂ ರಾಷ್ಟಮಟ್ಟದ ಕ್ರೀಡಾಪಟು ಜೋಶಿ ಪಿ.ಪಿ. ಇವರನ್ನು ಸನ್ಮಾನಿಸಲಾಯಿತು.
ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಎಸ್. ರಾಜು ಪೂಜಾರಿ, ಎಂ. ಮಹೇಶ್ ಹೆಗ್ಡೆ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ, ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಮಾರಾಟ ಸಂಘದ ಅಧ್ಯಕ್ಷ ಎಚ್. ಹರಿಪ್ರಸಾದ್ ಶೆಟ್ಟಿ, ಜಡ್ಕಲ್ ಗ್ರಾಪಂ ಅಧ್ಯಕ್ಷೆ ವನಜಾಕ್ಷಿ ಶೆಟ್ಟಿ, ಸಂಘದ ಉಪಾಧ್ಯಕ್ಷ ದೇವದಾಸ್ ವಿ. ಜೆ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೆಂಕಟರಮಣ ಶರ್ಮ, ನಿರ್ದೇಶಕರಾದ ಸುರೇಂದ್ರ ನಾಯಕ್, ಮಹಾಬಲ ಪೂಜಾರಿ, ಮುತ್ತ, ಮನೋಜ್ ಪಿ.ಜೆ., ನಾರಾಯಣ ಶೆಟ್ಟಿ, ಜೋಸೆಫ್ ಕೆ. ಎಂ., ಗುರುರಾಜ ಪೂಜಾರಿ, ರೋಸಮ್ಮ, ಸವಿತಾ ಶೆಟ್ಟಿ, ಧರ್ಮಗುರು ರೆ.ಫಾ. ಅಗೇಸ್ಟಿನ್ ಉಪಸ್ಥಿತರಿದ್ದರು. ಆರ್ಜೆ ರೇವತಿ ಶೆಟ್ಟಿ ಬೆಂಗಳೂರು ನಿರೂಪಿಸಿ, ನಿರ್ದೇಶಕ ವಿನೋದ್ ಜಾರ್ಜ್ ವಂದಿಸಿದರು. ಸುಬ್ರಹ್ಮಣ್ಯ ಪಡುಕೋಣೆ ಸಹಕರಿಸಿದರು.