ಜನರ ಅಹವಾಲುಗಳಿಗೆ ತಕ್ಷಣ ಪರಿಹಾರ ನೀಡುವುದು ಜನಸಂಪರ್ಕ ಸಭೆಯ ಉದ್ದೇಶ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ರಾಜರಾಜೇಶ್ವರ ಸಭಾಭವನದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಬೈಂದೂರು ತಾಲ್ಲೂಕು ಮಟ್ಟದ ಜನಸಂಪರ್ಕ ಸಭೆ ಜರುಗಿತು.

ಸಭೆಯನ್ನು ಉದ್ಘಾಟಿಸಿದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಮಾತನಾಡಿ ಜನರ ಅಹವಾಲುಗಳಿಗೆ ಸ್ಥಳದಲ್ಲೇ ಪರಿಹಾರ ನೀಡುವುದು ಜನಸಂಪರ್ಕ ಸಭೆಯ ಉದ್ದೇಶ. ಆಡಳಿತದಿಂದ ಸಿಗಬೇಕಾದ ವೈಯಕ್ತಿಕ ಸೇವೆಯ ಜತೆಗೆ ಸಾರ್ವಜನಿಕ ಸಮಸ್ಯೆಗಳ ಕುರಿತೂ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.

94ಸಿ ನಿಯಮದನ್ವಯ ಅರ್ಜಿ ಸಲ್ಲಿಸಿದ ಹಲವರಿಗೆ ಹಕ್ಕುಪತ್ರ ಸಿಕ್ಕಿಲ್ಲ. ಮರಳಿನ ಅಲಭ್ಯತೆಯ ಕಾರಣ ವೈಯಕ್ತಿಕ ಮತ್ತು ಸಾರ್ವಜನಿಕ ನಿರ್ಮಾಣ ಕೆಲಸ ಸ್ಥಗಿತವಾಗಿದೆ. ಸಂಧ್ಯಾ ಸುರಕ್ಷಾ ಯೋಜನೆಯಡಿ ಅರ್ಜಿ  ಸಲ್ಲಿಸಿದವರು ಶಾಲೆಗೆ ಹೋಗಿರದಿದ್ದರೆ ವಯಸ್ಸಿನ ಪ್ರಮಾಣಪತ್ರ ಪಡೆಯುವುದು ಸಮಸ್ಯೆಯಾಗಿದೆ. ಈ ಪ್ರದೇಶದಲ್ಲಿ ನೆಲೆಸಿರುವ ’ಹಳೆಯ’ ಎಂಬ ಜಾತಿಯವರಿಗೆ ಹಿಂದುಳಿದ ವರ್ಗ ದೃಢೀಕರಣ ಸಿಗುತ್ತಿಲ್ಲ. ಈ ಸಮಸ್ಯೆಗಳಿಗೆ ಜಿಲ್ಲಾಡಳಿತ ಪರಿಹಾರ ಒದಗಿಸಬೇಕು ಎಂದರು.

ವೈಯಕ್ತಿಕ ಸಮಸ್ಯೆ ಇರುವವರಿಗೆ ವೇದಿಕೆಯ ಮೇಲೆ ಹೋಗಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮುಂದೆ ಕುಳಿತು ಅವರೊಂದಿಗೆ ಚರ್ಚಿಸುವ ಅವಕಾಶ ಕಲ್ಪಿಸಲಾಗಿತ್ತು. ೩೪ ಜನರು ಈ ಅವಕಾಶ ಬಳಸಿಕೊಂಡರು. ಅವರಲ್ಲಿ ಇಬ್ಬರು ಮೆಸ್ಕಾಂ ಸಂಬಂಧಿಸಿ, ಒಬ್ಬರು ಆರೋಗ್ಯ ಇಲಾಖೆಗೆ ಸಂಬಂಧಿಸಿದ ಅಹವಾಲು ತಂದಿದ್ದರೆ, ಉಳಿದ ಎಲ್ಲವೂ ಕಂದಾಯ ಇಲಾಖೆಗೆ ಸಂಬಂಧಿಸಿದ್ದುವು. ಜಿಲ್ಲಾಧಿಕಾರಿಗಳು ಕೆಲವನ್ನು ಸಂಬಂಧಿಸಿದ ಅಧಿಕಾರಿಗಳನ್ನು ಕರೆಸಿಕೊಂಡು ಅಲ್ಲೇ ವಿಲೇವಾರಿ ಮಾಡಿದರು. ಉಳಿದವುಗಳ ವಿಲೇವಾರಿಗೆ ಸೂಚನೆ ನೀಡಿದರು.

ದೀಪಕ್‌ಕುಮಾರ ಶೆಟ್ಟಿ, ರಾಮಚಂದ್ರ ಉಪ್ಪುಂದ, ಪುಷ್ಪರಾಜ ಶೆಟ್ಟಿ, ಗೋಪಾಲ ಮಯ್ಯ, ರಾಜೇಂದ್ರ ಬಿಜೂರು, ರಾಮಚಂದ್ರ ಕಿರಿಮಂಜೇಶ್ವರ, ವೆಂಕಟೇಶ ನಾಯಕ್ ಕೋಣಿ, ಮಂಜುನಾಥ ಹೆಬ್ಬಾರ್, ನಾಗರತ್ನ ನಾಡ ಮರಳಿನ ಅಭಾವ, ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ಅವ್ಯವಸ್ಥೆ, ವೃದ್ಧಾಪ್ಯ ವೇತನ ಪಾವತಿ ಬಾಕಿ, ಪದವಿ ಕಾಲೇಜಿನ ಆಟದ ಮೈದಾನ, ತ್ಯಾಜ್ಯ ವಿಲೇವಾರಿ, ಕುಡಿಯುವ ನೀರು, ಕಡಲತೀರ ನಿರ್ಬಂಧ ವಲಯ, ಪಡಿತರ ಚೀಟಿಯಲ್ಲಿ ಹೊಸ ಹೆಸರುಗಳ ಸೇರ್ಪಡೆ, ಅಕ್ರಮ ಸಕ್ರಮ ಯೋಜನೆಯಡಿ ಮಂಜೂರಾದ ಭೂಮಿಯ ನಕ್ಷೆ ರಚನೆ ಕುರಿತಾದ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು. ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಯಶವಂತ್ ಶಿರೂರಿನಲ್ಲಿ ಮೆಸ್ಕಾಂ ಬಿಲ್ ಸಂಗ್ರಹಕ್ಕೆ ವ್ಯವಸ್ಥೆ ಮಾಡುವ ಭರವಸೆಯಿತ್ತರೆ, ಉಳಿದ ಸಮಸ್ಯೆಗಳನ್ನು ಶೀಘ್ರ ಪರಿಹರಿಸುವ ಭರವಸೆ ಅನ್ಯ ಅಧಿಕಾರಿಗಳಿಂದ ಬಂತು.

ತಹಶೀಲ್ದಾರ್ ಕಿರಣ್ ಗೌರಯ್ಯ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಒ. ಆರ್. ಪ್ರಕಾಶ್ ವಂದಿಸಿದರು. ಶಿಕ್ಷಕ ಸುಧಾಕರ ಪಿ. ಬೈಂದೂರು ನಿರೂಪಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಸಿ, ಸದಸ್ಯ ಸುರೇಶ ಬಟವಾಡಿ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *

4 × 1 =