ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ: ಅಚ್ಚಳಿಯದಂತೆ ಹೆಜ್ಜೆ ಗುರುತಗಳನ್ನು ಬಿಟ್ಟು ಹೋದ ಡಾ. ಪುನೀತ್ ರಾಜ್‌ಕುಮಾರ್ ಅವರನ್ನು ಮತ್ತೆ ನೆನೆಯಲು ಮೂಡಬಿದ್ರೆ ಆಳ್ವಾಸ್ ಕಾಲೇಜು ಮತ್ತು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಇದರ ಸಂಯೋಜನೆಯಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಜಾಂಬೂರಿಯ ಕೃಷಿಸಿರಿ ವೇದಿಕೆ ಸಾಕ್ಷಿಯಾಯಿತು.
ಹಚ್ಚ ಹಸಿರು ತೋಟದ ನಡುವೆ ಇಳಿ ಸಂಜೆಯಲ್ಲಿ ಪ್ರಾರಂಭವಾದ ಜೈನ್ ಬೀಟ್ಸ್ ಶ್ರವಣಬೆಳಗೋಳ ತಂಡದ ಪುನೀತ್ ನಮನ ಕಾರ್ಯಕ್ರಮ ಮೈ ನವಿರೇಳಿಸುವಂತೆ ಮಾಡಿದ್ದಂತೂ ಸತ್ಯ. ಸರ್ವೇಶ್ ಜೈನ್ ಮತ್ತು ತಂಡದಿಂದ ಕರುನಾಡ ರತ್ನನ ರಸಸಂಜೆ ಕಾರ್ಯಕ್ರಮದಲ್ಲಿ ಪುನೀತ್ ರಾಜ್‌ಕುಮಾರ್ ಹಾಡುಗಳು ಅನುರಣಿಸುತ್ತಿದ್ದವು.
ಗಣಪತಿಯ ಹಾಡಿನಿಂದ ಪ್ರಾರಂಭವಾಗಿ, ನಂತರ ಗುರುಗಳಿಗೆ ವಂದಿಸಿ, ಕನ್ನಡ ನಾಡು ನುಡಿಯನ್ನು ಅದರ ಪರಿಸರ ಸಂಸ್ಕೃತಿಯನ್ನು ಗಂಧದ ಗುಡಿ ಎಂದು ಕರೆದ ಗಂಧದ ಗುಡಿ ಚಿತ್ರದ ‘ನಾವಾಡುವ ನುಡಿಯೇ ಕನ್ನಡ ನುಡಿ’ ಎಂಬ ಹಾಡನ್ನು ಕನ್ನಡಾಂಬೆಯ ಪಾದಚರಣಗಳಿಗೆ ಅರ್ಪಿಸುತ್ತಾ ಸರ್ವೇಶ್ ಜೈನ್, ಸೌಮ್ಯಾ ಜೈನ್, ಸಮರಾಗ ಜೈನ್, ಮತ್ತು ಮಾಸ್ಟರ್ ಅಪರಾಜಿತ್ ಜೈನ್ ಪ್ರಸ್ತುತಪಡಿಸಿದರು. ಹಸಿರೇ ತುಂಬಿದ್ದ ವಾತಾವರಣದಲ್ಲಿ ಕನ್ನಡ ನಾಡಿನ ಕಾನನ, ನುಡಿಯ ಬಗ್ಗೆ ಹಾಡಲು ಅವಕಾಶ ದೊರೆತ ನಾವೇ ಪುನೀತರು ಎಂದು ಸರ್ವೇಶ್ ಅಭಿಪ್ರಾಯಪಟ್ಟರು.
ಕೀಬೋರ್ಡ್, ಡ್ರಮ್ಸ್, ತಬಲ, ಗಿಟಾರ್‌ಗಳ ಅದ್ಭುತ ಸಮ್ಮಿಲನದೊಂದಿಗೆ ಮೂಡಿಬಂದ ಒಂದೊಂದು ಗೀತೆ ಕೂಡ ಅದ್ಭುತವಾಗಿ ಮೂಡಿಬಂದಿತ್ತು. ವೇದಿಕೆಯ ಮೇಲೆ ಹಾಡುವವರು ಮತ್ತು ಹಿನ್ನೆಲೆ ಸಂಗೀತಗಾರರ ಹೊಂದಾಣಿಕೆ ಗಮನ ಸೆಳೆಯುವಂತಿತ್ತು. ಇದರೊಂದಿಗೆ ಮೂಡಿಬಂದ ‘ವಂಶಿ’ ಚಿತ್ರದ ‘ಭುವನಂ ಗಗನಂ’ ಹಾಡು ಎಲ್ಲರನ್ನೂ ಭಾವದ ಕಡಲಲ್ಲಿ ತೇಲಿಸಿತ್ತು.
ಮಾಸ್ಟರ್ ಅಪರಾಜಿತ್ ಹಾಡಿದ ‘ಬಾನ ದಾರಿಯಲ್ಲಿ ಸೂರ್ಯ ಜಾರಿಹೋದ’ ಹಾಡು ಒಮ್ಮೆ ಎಲ್ಲರ ಬಾಲ್ಯದ ನೆನಪುಗಳನ್ನು ಮತ್ತೊಮ್ಮೆ ಮೆಲುಕು ಹಾಕುವಂತೆ ಮಾಡಿತ್ತು. ಜೊತೆಗೆ ಪುಟ್ಟ ಬಾಲಕನ ಲಯಬದ್ಧ ಹಾಡಿಗೆ ನೆರೆದಿದ್ದ ಪ್ರೇಕ್ಷಕರು ಮೂಕವಿಸ್ಮಿತರಾದರು. ಸರ್ವೇಶ್ ಜೈನ್ ಮತ್ತು ಸೌಮ್ಯ ಜೈನ್ ಜೋಡಿಯಾಗಿ ಹಾಡಿದ ‘ಅಹಾ ಎಂಥ ಆ ಕ್ಷಣ’ ಕ್ಷಣ ಕ್ಷಣಕ್ಕೂ ರೋಮಾಂಚನವನ್ನುಂಟು ಮಾಡಿತ್ತು.
ವೇದಿಕೆಯ ಮೇಲೆ ಒಬ್ಬರನ್ನೊಬ್ಬರು ಪ್ರಶಂಸೆ ಮಾಡಿಕೊಂಡು ನಗುನಗುತ್ತಾ ಹಾಡಿದ್ದು ಅವರ ಜೊತೆಗೆ ಪ್ರೇಕ್ಷಕರನ್ನೂ ಸಂಗೀತ ಪ್ರಯಾಣಕ್ಕೆ ಕರೆದೊಯ್ದರು. ಹಾಡಿನ ಜೊತೆಗೆ ಕರುನಾಡ ರತ್ನನ ದಾನ ಧರ್ಮಗಳು, ನೊಂದವರ ಪರವಾಗಿ ನಿಂತ ಕೈಗಳ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದರು. ಕನ್ನಡ ಸಿನಿ ರಂಗದಲ್ಲಿ ಹೊಸ ಅಲೆಯನ್ನು ಸೃಷ್ಟಿ ಮಾಡಿದ ‘ಹೊಸ ಗಾನಬಜಾನ’ ಗೀತೆ ,ಪುನೀತ್ ನಮನ ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆತಂದುಕೊಟ್ಟಿತು. ನಂತರ ಹಾಡಿದ ಅಪ್ಪು ಚಿತ್ರದ ‘ಎಲ್ಲಿಂದ ಆರಂಭವೋ ಎಲ್ಲಿಂದ ಆನಂದವೋ ಹಾಡು’ ಪ್ರೇಕ್ಷಕರ ಚಪ್ಪಾಳೆಗೆ ಸಾಕ್ಷಿಯಾಯಿತು.
ಜಾಕಿ ಚಿತ್ರದ ‘ಜಾಕಿ ಜಾಕಿ’ ಹಾಡು ಪ್ರೇಕ್ಷಕರನ್ನು ಆಸನದಿಂದ ಎದ್ದು ಕುಣಿದಾಡುವಂತೆ ಮಾಡಿತ್ತು. ಸಂಗೀತದ ತೇರನ್ನು ಬಾಲ್ಯಕ್ಕೆ ಎಳೆದ ಮಾಸ್ಟರ್ ಅಪರಾಜಿತ್ ‘ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೆ’ ಎಂಬ ಹಾಡನ್ನು ತಮ್ಮ ತಾಯಿಯ ಮುಂದೆ ಹಾಡಿದ್ದು ಎಲ್ಲರನ್ನೂ ಭಾವೋದ್ವೇಗಕ್ಕೆ ಒಳಪಡಿಸಿತ್ತು. ಇವರ ಮಧುರ ಕಂಠಕ್ಕೆ ಕರಗಿದ ಪ್ರೇಕ್ಷಕರು, ಆ ಹಾಡನ್ನು ಮತ್ತೊಮ್ಮೆ ಹಾಡಿಸಿದರು.
ಗಾಯಕರ ಅದ್ಭುತ ಕಂಠಕ್ಕೆ ಹಿನ್ನೆಲೆ ಸಂಗೀತವಾದಕರಾಗಿ ಗುರುರಾಜ್( ಕೀ ಬೋರ್ಡ್) ಸುಮುಖ (ಗಿಟಾರ್), ಅರುಣ್(ಡ್ರಮ್ಸ್) ಮಹದೇವ ಮೈಸೂರು (ತಬಲಾ) ಸಾತ್ ನೀಡಿದರು. ಸಿನಿಮಾ ಹಾಡಿನ ಜೊತೆ ಜಾನಪದ ಮಿಳಿತವಾಗಿರುವ ಗಲ್ಲು ಗಲ್ಲೆನುತ ಹಾಡು ನೆರೆದಿದ್ದವರ ಗಮನ ಸೆಳೆಯಿತು.
ಪುನೀತ್ ಅವರು ನಟಿಸಿ ಕನ್ನಡಿಗರ ಮನ ಮನೆಗಳಲ್ಲಿ ಇಂದಿಗೂ ಅಚ್ಚಳಿಸುವಂತೆ ಮಾಡಿದ ‘ಬೊಂಬೆ ಹೇಳುತೈತೆ’ ಹಾಡು ಎಲ್ಲರ ಕಣ್ಣಂಚಲಿ ನೀರು ತುಂಬುವಂತೆ ಮಾಡಿತ್ತು, ಈ ಹಾಡಿನೊಂದಿಗೆ ಕಸ್ತೂರಿ ನಿವಾಸದ ‘ಆಡಿಸಿ ನೋಡು ಬೀಳಿಸಿ ನೋಡು’ ಹಾಡಿಗೆ ಚಪ್ಪಾಳೆ ಸಿಳ್ಳೆಗಳು ಮೂಡಿ ಬಂತು.
ಕಾರ್ಯಕ್ರಮದ ಕೊನೆಯಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಗುರುಪ್ರಸಾದ್ ಭಟ್ ಜೈನ್ ಬೀಟ್ಸ್ ತಂಡಕ್ಕೆ ಸ್ಮರಣಿಕೆ ನೀಡಿ ಗೌರವಿಸಿದರು.
- ವರದಿ : ಅರ್ಪಿತ್ ಇಚ್ಛೆ, ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ
