ಜಿಲ್ಲಾಡಳಿತಕ್ಕೆ ಇನ್ಫೋಸಿಸ್‌ನಿಂದ ವೈದ್ಯಕೀಯ ಉಪಕರಣ ಹಸ್ತಾಂತರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಇನ್ಫೋಸಿಸ್ ವತಿಯಿಂದ ಉಡುಪಿ ಜಿಲ್ಲಾಡಳಿತಕ್ಕೆ ಸುಮಾರು 70 ಲಕ್ಷ ರೂ. ಮೌಲ್ಯದ 10 ಆಕ್ಸಿಜನ್ ಕಾನ್ಸನ್ಟ್ರೇಟರ್ ಹಾಗೂ 10 ವೆಂಟಿಲೇಟರ್‌ಗಳನ್ನು  ಜಿಲ್ಲಾಧಿಕಾರಿ ಕಚೇರಿಯಲ್ಲಿ, ಜಿಲ್ಲಾಧಿಕಾರಿ ಜಿ. ಜಗದೀಶ್ ಅವರಿಗೆ ಹಸ್ತಾಂತರಿಸಲಾಯಿತು.

ನಂತರ ಮಾತನಾಡಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಇನ್ಫೋಸಿಸ್ ವತಿಯಿಂದ ಕೋವಿಡ್ ಮೊದಲನೇ ಅಲೆಯ ಸಂದರ್ಭದಲ್ಲೂ ಸಹ ಜಿಲ್ಲಾಡಳಿತದ ಮನವಿಗೆ ಕೂಡಲೇ ಸ್ಪಂದಿಸಿ ಅಗತ್ಯವಿದ್ದ ಅರೋಗ್ಯ ಸಾಮಗ್ರಿಗಳನ್ನು ನೀಡಲಾಗಿದ್ದು, ಕೋವಿಡ್ 2 ನೇ ಅಲೆಯ ಈ ಸಮಯದಲ್ಲೂ ಸಹ ಜಿಲ್ಲಾಡಳಿತದ ಮನವಿಗೆ ಸ್ಪಂದಿಸಿ, ಅಕ್ಸಿಜನ್ ಕಾನ್ಸನ್ಟ್ರೇಟರ್ ಮತ್ತು ವೆಂಟಿಲೇಟರ್ಗಳನ್ನು ನೀಡಿದ್ದು, ಸಂಸ್ಥೆಯ ಮುಖ್ಯಸ್ಥರಿಗೆ ಜಿಲ್ಲಾಡಳಿತ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

ಪ್ರಸ್ತುತ ನೀಡಿರುವ ಉಪಕರಣಗಳಲ್ಲಿ ಉಡುಪಿ ಜಿಲ್ಲಾಸ್ಪತ್ರೆಗೆ 5 ವೆಂಟಿಲೇಟರ್ ಮತ್ತು ಅಕ್ಸಿಜನ್ ಕಾನ್ಸನ್ಟ್ರೇಟರ್, ಕುಂದಾಪುರ ತಾಲೂಕು ಆಸ್ಪತ್ರೆಗೆ 2 ವೆಂಟಿಲೇಟರ್ ಮತ್ತು ಅಕ್ಸಿಜನ್ ಕಾನ್ಸನ್ಟ್ರೇಟರ್, ಕಾರ್ಕಳ ತಾಲೂಕು ಆಸ್ಪತ್ರೆಗೆ 3 ವೆಂಟಿಲೇಟರ್ ಮತ್ತು ಅಕ್ಸಿಜನ್ ಕಾನ್ಸನ್ಟ್ರೇಟರ್ಗಳನ್ನು ನೀಡಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಇನ್ಫೋಸಿಸ್ ಮಂಗಳೂರು ವಿಭಾಗದ ಮ್ಯಾನೇಜರ್ಗಳಾದ ವಾಸುದೇವ ಕಾಮತ್ ಮತ್ತು ಸಂದೀಪ್ ಡಿಸಿಲ್ವಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

14 + 7 =