ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಹಲವು ವರ್ಷಗಳ ಬೇಡಿಕೆ ಇರುವ ಸರ್ಕಾರಿ ವೈದ್ಯಕೀಯ ಕಾಲೇಜು ಇನ್ನೂ ಕೂಡ ಉಡುಪಿ ಜಿಲ್ಲೆಗೆ ಒದಗಿ ಬಂದಿಲ್ಲ. ಒಂದು ವಿದ್ಯಾರ್ಥಿ ಅವನ ಶಾಲಾ ಜೀವನದಲ್ಲಿ ಇರುವಾಗಲೇ ಆತನೊಬ್ಬ ವೈದ್ಯನಾಗಬೇಕೆಂಬ ಕನಸನ್ನು ಇಟ್ಟುಕೊಂಡು ಅದರ ಹಿಂದೆ ಬಹಳಷ್ಟು ಶ್ರಮವಹಿಸುತ್ತಾನೆ. ಆದರೆ ನೀಟ್ ಪರೀಕ್ಷೆ ಬರೆದ ನಂತರ ಕಾಲೇಜು ಪ್ರವೇಶ ಸಮಯದಲ್ಲಿ ಅಲ್ಲಿಯ ಶುಲ್ಕ ರಚನೆ ನೋಡಿದಾಗ ಅವನ ಕನಸನ್ನು ಬಿಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಲಕ್ಷಗಟ್ಟಲೆ ಫೀಸು ನೀಡಲು ಸಾಧ್ಯವಾಗದೆ,ಮತ್ತು ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲದೆ ಇರುವುದರಿಂದ ಆ ವಿದ್ಯಾರ್ಥಿ ಶಿಕ್ಷಣದಿಂದ ಹಿಂಜರಿಯುತ್ತಾನೆ ಎಂದು ಉಡುಪಿ ಜಿಲ್ಲೆಯ ಕ್ಯಾಂಪಸ್ ಫ್ರಂಟ್ ಜಿಲ್ಲಾಧ್ಯಕ್ಷರಾದ ಅಸೀಲ್ ಅಕ್ರಂ ಹೇಳಿದರು.
ಅವರು ಉಡುಪಿ ಪ್ರೆಸ್ ಕ್ಲಬ್‌ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ವಿಚಾರದಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಮುಖಾಂತರ ಸರ್ಕಾರಕ್ಕೆ ಬರುವಂತಹ ಬಜೆಟ್ ಅಧಿವೇಶನದಲ್ಲಿ ಈ ವಿಷಯವನ್ನು ಉಲ್ಲೇಖಿಸಬೇಕೆಂದು ಮನವಿ ಮಾಡಲಾಯಿತು. ಮನವಿ ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲಾಧಿಕಾರಿಯಿಂದ ಬಂದಂತಹ ಉತ್ತರ ಒಂದು ಬೇಜವಾಬ್ದಾರಿತನದಾಗಿತ್ತು. ಉಡುಪಿ ಜಿಲ್ಲೆಯಲ್ಲಿ ಬಹಳಷ್ಟು ಕಡೆಗಳಲ್ಲಿ ಸರ್ಕಾರಿ ಭೂಮಿ ಇದ್ದರೂ ಕೂಡ ಜಿಲ್ಲಾಧಿಕಾರಿ ಸರ್ಕಾರಿ ವೈದ್ಯಕೀಯ ಕಾಲೇಜಿಗಾಗಿ ಸರ್ಕಾರದ ಭೂಮಿ ಇಲ್ಲ ಎಂದು ಹೇಳಿದ್ದಾರೆ. ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿ ಈ ರೀತಿಯ ಉತ್ತರ ಕೊಡುವುದು ಎಷ್ಟರ ಮಟ್ಟಿಗೆ ಸರಿ? ಎಂಬುದನ್ನು ಕ್ಯಾಂಪಸ್ ಫ್ರಂಟ್ ಪ್ರಶ್ನಿಸುತ್ತಿದೆ ಎಂದರು.
ರಾಜ್ಯದಲ್ಲಿ ಸುಮಾರು 19 ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಇದೆ. ಯಾವ ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲವೋ, ಅಲ್ಲಿ ಇರುವಂತಹ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಇಂತಿಷ್ಟು ಶೇಕಡದಷ್ಟು ಸರ್ಕಾರದ ಕೋಟಾ ಇದೆ, ಬುದ್ಧಿವಂತರ ಜಿಲ್ಲೆ ಎಂದು ಖ್ಯಾತ ಪಡೆದ ಉಡುಪಿ ಜಿಲ್ಲೆಗೆ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ಕೂಡ ಇಲ್ಲ, ಇಲ್ಲಿರುವಂತಹ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಸರ್ಕಾರದ ಕೋಟಾ ಕೂಡ ಇಲ್ಲ. ಇದೊಂದು ಉಡುಪಿ ಜಿಲ್ಲೆಗೆ ಆಗಿರುವಂತಹ ದೊಡ್ಡ ಅವಮಾನ ಮತ್ತು ದೊಡ್ಡ ಅನ್ಯಾಯ ಕೂಡ ಹೌದು. ಜಿಲ್ಲೆಯ ಉಸ್ತುವಾರಿ ಸಚಿವರಾದ ಗೃಹಮಂತ್ರಿಯವರಿಗೆ ಇದರ ಬಗ್ಗೆ ಗಮನ ಕೊಡಲು ಸಮಯವೇ ಇಲ್ಲದಾಗಿದೆ, ಜಿಲ್ಲೆಯ ಅಭಿವೃದ್ದಿಗೆ ಶ್ರಮವಹಿಸಲು ಸಾಧ್ಯವಾಗದ ಇವರು ರಾಜ್ಯದ ಗೃಹಮಂತ್ರಿ ಸ್ಥಾನವನ್ನು ಯಾವ ರೀತಿ ನಿಭಾಯಿಸುತ್ತಾರೆ ಎಂಬ ಕುತೂಹಲ ಮೂಡಿದೆ ಎಂದರು.
ಈಗಾಗಲೇ ಈ ವಿಚಾರದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿಯು ತಯಾರಾಗಿದೆ, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ UdupiDemandsGovtMedicalCollege ಎಂಬ ಚಳುವಳಿಯನ್ನು ಆರಂಭಿಸಿದ್ದು, ಇದರ ಭಾಗವಾಗಿ ಈಗಾಗಲೇ ಹಲವಾರು ಜನಸಾಮಾನ್ಯರನ್ನು, ಪ್ರಗತಿಪರ ಚಿಂತಕರನ್ನು ಮತ್ತು ಇಲ್ಲಿರುವಂತಹ ವಿವಿಧ ಸಾಮಾಜಿಕ ಮತ್ತು ವಿದ್ಯಾರ್ಥಿ ಸಂಘಟನೆಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ಎಲ್ಲರೂ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ, ಮುಂದಿನ ದಿನಗಳಲ್ಲಿ ಎಲ್ಲರನ್ನೂ ಸೇರಿಸಿಕೊಂಡು ಒಂದು ಐತಿಹಾಸಿಕ ಆಂದೋಲನ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ನೇತೃತ್ವದಲ್ಲಿ ನಡೆಯಲಿದೆ. ಉಡುಪಿಯ ಜನರು ಇದಕ್ಕೆ ಸಾಕ್ಷಿಯಾಗಲಿದ್ದಾರೆ. ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ನಾವು ಈಗಾಗಲೇ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಈ ಹೋರಾಟವು ತೀವ್ರ ಸ್ವರೂಪ ಪಡೆಯಲಿಕ್ಕಿದೆ ಎಂದು ಈ ಪತ್ರಿಕಾಗೋಷ್ಠಿಯ ಮುಖಾಂತರ ಎಚ್ಚರಿಸುತ್ತಿದ್ದೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ಯಾಂಪಸ್ ಫ್ರಂಟ್ ಜಿಲ್ಲಾ ಮುಖಂಡರಾದ ನವಾಜ್ ಉಡುಪಿ, ಝಮ್ ಝಮ್, ಕ್ಯಾಂಪಸ್ ಫ್ರಂಟ್ ಜಿಲ್ಲಾ ಕಾರ್ಯದರ್ಶಿಯಾದ ಮಸೂದ್ ಮನ್ನಾ, ಕುಂದಾಪುರ ಕ್ಯಾಂಪಸ್ ಫ್ರಂಟ್‌ನ ಜಿಲ್ಲಾ ಕಾರ್ಯದರ್ಶಿಯಾದ ಅನ್ಫಾಲ್ ಗಂಗೊಳ್ಳಿ ಉಪಸ್ಥಿತರಿದ್ದರು.