ಜೀವಂತ ಕಲೆಗೆ ನಶಿಸುವ ಅಪಾಯ ಇಲ್ಲ: ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಷಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಯಕ್ಷಗಾನ ಕಲೆ ಕರ್ನಾಟಕದ ಕೆಲವೇ ಜಿಲ್ಲೆಗಳಿಗೆ ಸೀಮಿತವಾದುದು. ವಿದ್ಯುನ್ಮಾನ ಮಾಧ್ಯಮಗಳಿಂದಾಗಿ ಯಕ್ಷಗಾನ ಜನರಿಂದ ದೂರವಾಗುತ್ತಿದೆ ಎಂದು ಕೆಲವರು ಆಡಿಕೊಳ್ಳುತ್ತಾರೆ. ಆದರೆ ದಿನದ ೨೪ ಗಂಟೆಯೂ ಲಭ್ಯವಿರುವ ವಿದ್ಯುನ್ಮಾನ ಮಾಧ್ಯಮಗಳ ಮನೋರಂಜನೆಯ ನಡುವೆ ಈ ಸೀಮಿತ ಪ್ರದೇಶದಲ್ಲಿರುವ ವೃತ್ತಿ ಮೇಳಗಳು, ಹವ್ಯಾಸಿ ತಂಡಗಳು, ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ನೀಡುವ ಪ್ರದರ್ಶನಗಳ ಸಂಖ್ಯೆ ಅಚ್ಚರಿ ಹುಟ್ಟಿಸುವಂತಿದೆ. ಅದರಲ್ಲೂ ಹಿಮ್ಮೇಳ ಮತ್ತು ಅರ್ಥದಾರಿಗಳು ಮಾತ್ರ ಸಾಕಾಗುವ ಅತ್ಯಂತ ಸರಳ ರಂಗಭೂಮಿಯಾದ ತಾಳಮದ್ದಲೆಗೂ ದೊಡ್ಡ ಶ್ರೋತೃವರ್ಗ ಇರುವುದು ಜೀವಂತ ಕಲೆ ನಶಿಸದು ಎಂಬ ಭರವಸೆ ನೀಡುತ್ತದೆ ಎಂದು ನಿವೃತ್ತ ಪ್ರಾಂಶುಪಾಲ, ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಷಿ ಹೇಳಿದರು.

ಕಿರಿಮಂಜೇಶ್ವರ ನಾಗೂರು ಸುತ್ತಲಿನ ನಾಗರಿಕರ ಮತ್ತು ರಾಜ್ಯ ಯಕ್ಷಗಾನ ಬಯಲಾಟ ಅಕಾಡೆಮಿಯ ಸಹಯೋಗದೊಂದಿಗೆ ಧಾರೇಶ್ವರ ಯಕ್ಷ ಬಳಗ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ನಾಗೂರಿನ ಒಡೆಯರಮಠ ಗೋಪಾಲಕೃಷ್ಣ ಕಲಾಮಂದಿರದ ಯಕ್ಷಗುರು ಹೇರಂಜಾಲು ವೆಂಕಟರಮಣ ಗಾಣಿಗ ವೇದಿಕೆಯಲ್ಲಿ ಆರಂಭವಾದ ತಾಳಮದ್ದಲೆ ಸಪ್ತಾಹದ ಉದ್ಘಾಟನಾ ಸಮಾರಂಭದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು. ಧಾರೇಶ್ವರರಂತಹ ಪ್ರತಿಭಾವಂತ ಮತ್ತು ಅನುಭವಿ ವೃತ್ತಿ ಕಲಾವಿದರು ಯಕ್ಷಗಾನ ಸಂಘಟನೆ, ಪ್ರಸಾರದಲ್ಲಿ ತೊಡಗಿರುವುದು ಆಶಾದಾಯಕ ಬೆಳವಣಿಗೆ ಎಂದು ಅವರು ಅಭಿಪ್ರಾಯಪಟ್ಟರು.

ಸಪ್ತಾಹವನ್ನು ಉದ್ಘಾಟಿಸಿದ ಅಕಾಡೆಮಿಯ ಸದಸ್ಯ ಪಿ. ಕಿಶನ್‌ಕುಮಾರ ಹೆಗ್ಡೆ ಹಿರಿಯ ಯಕ್ಷಗಾನ ಕಲಾವಿದರ ಸಾಕ್ಷ್ಯಚಿತ್ರ ನಿರ್ಮಾಣ ಸೇರಿದಂತೆ ಅಕಾಡೆಮಿ ನಡೆಸುತ್ತಿರುವ ಯಕ್ಷಗಾನಪರ ಚಟುವಟಿಕೆಗಳನ್ನು ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಪರ್ಕಳದ ಜ್ಯೋತಿಷ್ಯ ವಿದ್ವಾನ್ ಕಬ್ಯಾಡಿ ಜಯರಾಮ ಆಚಾರ್ಯ, ಅತಿಥಿಗಳಾಗಿದ್ದ ಕೊಲ್ಲೂರು ಕ್ಷೇತ್ರದ ಅರ್ಚಕ ಡಾ. ಕೆ. ಎನ್. ನರಸಿಂಹ ಅಡಿಗ ಶುಭ ಹಾರೈಸಿದರು.

ರತನ್ ಬಿಜೂರು ಸ್ವಾಗತಿಸಿದರು. ಟ್ರಸ್ಟ್‌ನ ಅಧ್ಯಕ್ಷ ಸುಬ್ರಹ್ಮಣ್ಯ ಧಾರೇಶ್ವರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೆ. ಬಾಲಕೃಷ್ಣ ಶ್ಯಾನುಭಾಗ್ ವಂದಿಸಿದರು. ಗೋವಿಂದ ಮಟ್ನಕಟ್ಟೆ ನಿರೂಪಿಸಿದರು. ಉದ್ಘಾಟನೆಯ ಬಳಿಕ ಚಂದ್ರಕಾಂತ ಮೂಡುಬೆಳ್ಳೆ, ರಾಘವೇಂದ್ರ ಹೆಗ್ಡೆ ಯಲ್ಲಾಪುರ, ಶಶಾಂಕ ಆಚಾರ್ಯ, ರಾಮಕೃಷ್ಣ ಮಂದಾರ್ತಿ, ಡಾ. ಎಂ. ಪ್ರಭಾಕರ ಜೋಷಿ, ಹಿರಣ್ಯ ವೆಂಕಟೇಶ ಭಟ್, ಜಬ್ಬಾರ್ ಸಮೊ, ಕಬ್ಯಾಡಿ ಜಯರಾಮ ಆಚಾರ್ಯ ’ಕೃಷ್ಣ ಸಂಧಾನ’ ತಾಳಮದ್ದಲೆ ನಡೆಸಿಕೊಟ್ಟರು.

Leave a Reply

Your email address will not be published. Required fields are marked *

1 + thirteen =