ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಉತ್ತಮ ನಿರೂಪಕಿಯಾಗಲು ಭಾಷ ಶುದ್ಧತೆ ಮುಖ್ಯ. ಒಬ್ಬ ಪತ್ರಕರ್ತನಿಗೆ ಸಮಯಪ್ರಜ್ಞೆ ಹಾಗೂ ಬದ್ಧತೆ ಇದ್ದಾಗ ವೃತ್ತಿಜೀವನದಲ್ಲಿ ಯಶಸ್ಸು ಸಿಗಲು ಸಾಧ್ಯ ಎಂದು ಟಿವಿ 9 ನಿರೂಪಕಿ, ಆಳ್ವಾಸ್ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಶುಭಶ್ರೀ ಜೈನ್ ಹೇಳಿದರು.
ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ, ಸಮೂಹ ಸಂವಹನ ಸ್ನಾತಕೋತ್ತರ ವಿಭಾಗವು ಆಯೋಜಿಸಿದ್ದ ’ಟ್ರೆಂಡ್ಸ್ ಪ್ರಾಕ್ಟೀಸಸ್ ಇನ್ ಟಿವಿ ಜರ್ನಲಿಸಂ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದಿನ ಮಾಧ್ಯಮ ಲೋಕದಲ್ಲಿ ಹೆಚ್ಚಿನ ಸ್ಪರ್ಧೆಯಿದೆ. ಎಲೆಕ್ಟ್ರಾನಿಕ್ ಮೀಡಿಯಾಕ್ಕೆ ಅಗತ್ಯವಿರುವ ಕೌಶಲಗಳನ್ನು ಕಾಲೇಜು ಮಟ್ಟದಲ್ಲಿಯೇ ಕಲಿತುಕೊಂಡರೆ ವೃತ್ತಿ ಜೀವನ ಸುಗಮವಾಗಿರುತ್ತದೆ. ನಿರೂಪಕನಿಗೆ ಧ್ವನಿ, ಮುಖಭಾವ, ಮೇಕಪ್, ವಸ್ತ್ರ ವಿನ್ಯಾಸಗಳ ಬಗ್ಗೆ ಹೆಚ್ಚಿನ ತಿಳುವಳಿಕೆ ಇರಬೇಕು. ಇದೆಲ್ಲದರ ಜೊತೆಗೆ ಒಬ್ಬ ನಿರೂಪಕನಿಗೆ ಯಾವುದೇ ವಿಷಯದ ಬಗ್ಗೆ ಆಳ ಜ್ಞಾನ, ಪ್ರಬುದ್ಧತೆ ತುಂಬಾ ಮುಖ್ಯ. ಇದು ಯಾವುದೇ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸುವ ಆತ್ಮ ವಿಶ್ವಾಸವನ್ನು ತುಂಬುತ್ತದೆ ಎಂದರು.
ನಿರೂಪಣೆಯನ್ನು ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಸಲಹೆಗಳನ್ನು ನೀಡಿದರು. ಆಂಕರ್‌ಗಳಿಗಿರುವ ಸವಾಲು, ಪರಿಸ್ಥಿತಿ, ನಿಭಾಯಿಸುವಿಕೆ, ವಿಷಯಗಳ ಕುರಿತು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಸಂಪನ್ಮೂಲ ವ್ಯಕ್ತಿ ಉತ್ತರಿಸಿದರು. ಪತ್ರಿಕೋದ್ಯಮ ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ ಹಾಗೂ ಇತರ ಉಪನ್ಯಾಸಕರು ಉಪಸ್ಥಿತರಿದ್ದರು.