ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ದೇವರು ನಮ್ಮನ್ನು ಈ ಪುಣ್ಯಭೂಮಿಯಲ್ಲಿ ಹುಟ್ಟಿಸಬೇಕಾದರೆ ನಮಗೆ ದೈನಂದಿನ ಚಟುವಟಿಕೆಗಳನ್ನು ನಡೆಸಲು ಬೇಕಾದ ಎಲ್ಲಾ ಅಂಗಾಂಗಗಳನ್ನು ಸೃಷ್ಟಿಸಿದ್ದಾನೆ. ನಮಗೆ ಈ ಸುಂದರ ಮಾಯಾ ಜೀವನ ಕೊಟ್ಟಿದ್ದು ತಂದೆ ತಾಯಿ. ಅವರೇ ನಮ್ಮ ನಿಜವಾದ ದೇವರು, ತಂದೆ ತಾಯಿ ನಮ್ಮ ಜೀವನದ ಹೀರೋಗಳು. ಹೀಗಾಗಿ ನಾವು ಪ್ರತಿನಿತ್ಯ ತಂದೆ ತಾಯಿಗೆ ನಮಸ್ಕರಿಸಿ ಅವರ ಆಶೀರ್ವಾದ ಪಡೆದುಕೊಳ್ಳಬೇಕು. ಇದರಿಂದ ನಮ್ಮ ಜೀವನ ಅಭಿವೃದ್ಧಿಯಾಗಿ ಸಮಾಜದಲ್ಲಿ ಉನ್ನತ ಸ್ಥಾನ ದೊರೆಯಲು ಸಹಾಯವಾಗುತ್ತದೆ ಎಂದು ಕುಂದಾಪುರ ಸರಸ್ವತಿ ಗ್ರೂಫ್ ಆಫ್ ಇನ್ಸಿಟ್ಯೂಟ್‌ನ ಆಡಳಿತ ನಿರ್ದೇಶಕ ರಿತೇಶ್ ಕಾಮತ್ ಹೇಳಿದರು.
ಕ್ರಾಂತಿವೀರರ ಅಭಿಮಾನಿ ಬಳಗ ಗಂಗೊಳ್ಳಿ ಹಾಗೂ ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಹಕಾರದೊಂದಿಗೆ ಕಾಲೇಜಿನ ಸಭಾಂಗಣದಲ್ಲಿ ಜರಗಿದ ಜನ್ಮದಾತೋ ದೇವೋ ಭವ: ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಂದೆ ತಾಯಿ ನಮ್ಮನ್ನು ಕಣ್ಣಲ್ಲಿ ಕಣ್ಣಿಟ್ಟು ಬೆಳೆಸಿ ಉತ್ತಮ ವಿದ್ಯಾಭ್ಯಾಸ ನೀಡಿ ಅವರು ಸಮಾಜದಲ್ಲಿ ಸತ್ಪ್ರಜೆಗಳಾಗಿ ಬಾಳಬೇಕು ಎಂದು ಶ್ರಮಪಟ್ಟಿರುತ್ತಾರೆ. ಅವರ ಇಳಿ ವಯಸ್ಸಿನಲ್ಲಿ ನಾವು ನಮ್ಮ ತಂದೆ ತಾಯಿಗಳನ್ನು ವೃದ್ಧಾಶ್ರಮಗಳಿಗೆ ಸೇರಿಸದೆ ಅವರನ್ನು ಮಕ್ಕಳಂತೆ ಅವರ ಆರೈಕೆ ಮಾಡಬೇಕು. ಅವರ ಸೇವೆ ಮಾಡಿದರೆ ದೇವರ ಸೇವೆ ಮಾಡಿದಷ್ಟು ಪುಣ್ಯ ದೊರೆಯುತ್ತದೆ ಎಂದು ಅವರು ಹೇಳಿದರು.
ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕ ಕೆ.ಸದಾನಂದ ವೈದ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸರಸ್ವತಿ ಗ್ರೂಫ್ ಆಫ್ ಇನ್ಸಿಟ್ಯೂಟ್‌ನ ಆಡಳಿತ ನಿರ್ದೇಶಕಿ ಸ್ನೇಹಾ ಕಾಮತ್ ಶುಭ ಹಾರೈಸಿದರು. ಶಾಲೆಯ ಶಿಕ್ಷಕ-ರಕ್ಷಕ ಸಮಿತಿ ಅಧ್ಯಕ್ಷ ರಾಜಗೋಪಾಲ ಶೇರುಗಾರ್, ಕ್ರಾಂತಿವೀರರ ಅಭಿಮಾನಿ ಬಳಗದ ಮಹೇಶ ಖಾರ್ವಿ ಉಪಸ್ಥಿತರಿದ್ದರು.
ಶಾಲೆಯ ಆಡಳಿತ ಮಂಡಳಿ ಸದಸ್ಯ ಕೆ.ರಾಮನಾಥ ನಾಯಕ್ ಸ್ವಾಗತಿಸಿದರು. ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಜಿ.ವಿಠಲ ಶೆಣೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಾಜಿ ಅಧ್ಯಕ್ಷ ಬಿ.ರಾಘವೇಂದ್ರ ಪೈ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಗಣೇಶ ಕಿಣಿ ವಂದಿಸಿದರು.