ತೋಟಗಾರಿಕೆ ಬೆಳೆಯ ಯಂತ್ರೋಪಕರಣಗಳಿಗೆ ಸಹಾಯಧನ-ಅರ್ಜಿ ಆಹ್ವಾನ

ಕುಂದಾಪ್ರ ಡಾಟ್ ಕಾಂ ಸುದ್ದಿ
ಉಡುಪಿ: ಪ್ರಸ್ತುತ ಸಾಲಿಗೆ ಆರ್ಕೆವಿವೈ ಯಾಂತ್ರೀಕರಣ ಮತ್ತು ಕೇಂದ್ರ ಪುರಸ್ಕೃತ ಕೃಷಿ ಯಾಂತ್ರೀಕೃತ ಉಪಅಭಿಯಾನ ಕಾರ್ಯಕ್ರಮಗಳಡಿ ಶೇ. 50 ರ ಸಹಾಯಧನದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಣ್ಣ ಮತ್ತು ಅತೀ ಸಣ್ಣ ಹಾಗೂ ಮಹಿಳಾ ಫಲಾನುಭವಿಗಳಿಗೆ ಶೇ 40 ರ ಸಹಾಯಧನದಲ್ಲಿ ಇತರೇ ವರ್ಗದ ಫಲಾನುಭವಿಗಳಿಗೆ ಟ್ರ್ಯಾಕ್ಟರ್ ಯಂತ್ರೋಪಕರಣವನ್ನು ಹೊರತುಪಡಿಸಿ ಉಳಿದ ತೋಟಗಾರಿಕೆ ಬೆಳೆಗಳಲ್ಲಿ ಅವಶ್ಯಕವಿರುವ ಅನುಮೋದಿತ ಯಂತ್ರೋಪಕರಣಗಳಿಗೆ ಯೋಜನೆಯಡಿ ಜಿಲ್ಲೆಯಲ್ಲಿ ರೈತರಿಗೆ ಅವಕಾಶ ಕಲ್ಪಿಸಲು ಅನುಮೋದನೆಯಾಗಿರುತ್ತದೆ.

ಪ್ರತಿ ರೈತ ಫಲಾನುಭವಿಗಳಿಗೆ ಗರಿಷ್ಟ 5 ಯಂತ್ರೋಪಕರಣಗಳಿಗೆ 1.25 ಲಕ್ಷ ಗರಿಷ್ಟ ಸಹಾಯಧನ ಮಿತಿಯೊಂದಿಗೆ ಸಹಾಯಧನದ ಮೊತ್ತವನ್ನು ಇಸಿಎಸ್ ಮೂಲಕ ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆಗಳಿಗೆ ವಿತರಿಸಲಾಗುತ್ತದೆ. ರೈತ ಫಲಾನುಭವಿಗಳು ಖರೀದಿಸುವ ಯಂತ್ರೋಪಕರಣಗಳಿಗೆ ಒಮ್ಮೆ ಸಹಾಯಧನ ಪಡೆಯಲು ಅರ್ಹರಿದ್ದು, ಹಿಂದಿನ ಸಾಲಿನಲ್ಲಿ ಖರೀದಿಸಿದ ಯಂತ್ರೋಪಕರಣಗಳ ಮಾದರಿಗಳನ್ನು ಪ್ರಸ್ತುತ ಹೊಸದಾಗಿ ಖರೀದಿಸಿದರೆ ಸಹಾಯಧನಕ್ಕಾಗಿ ಪರಿಗಣಿಸಲು ಅರ್ಹರಾಗಿರುವುದಿಲ್ಲ.

ಅರ್ಜಿದಾರರು ತೋಟಗಾರಿಕೆ ಬೆಳೆ ಬೆಳೆಯುತ್ತಿರುವ ಬಗ್ಗೆ ವಿವರಗಳುಳ್ಳ ಆರ್ಟಿಸಿ ಅಥವಾ ಪಹಣಿಯನ್ನು ಇಲಾಖೆಗೆ ಒದಗಿಸಬೇಕು. ಅರ್ಜಿ ನೀಡುವ ರೈತರು ಏಪ್ರಿಲ್ 2020 ರ ನಂತರದಲ್ಲಿ ಖರೀದಿಸಿದ ಯಂತ್ರೋಪಕರಣಗಳಿಗೆ ಮಾತ್ರ ಸಹಾಯಧನ ನೀಡಲು ಅವಕಾಶವಿರುತ್ತದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಧಿನಿಯಮ 2013ರಂತೆ ಉಳಿಕೆ ಅನುದಾನ ಕಾರ್ಯಕ್ರಮದಡಿ ಕೃಷಿ ಇಲಾಖೆಯಿಂದ ಅನುಮೋದಿತ ಸರಬರಾಜು ದರ ಪಟ್ಟಿಯಲ್ಲಿರುವಂತೆ ಕೃಷಿ ಇಲಾಖೆಯ ಮಾರ್ಗಸೂಚಿಯಂತೆ ಪವರ್ ಟಿಲ್ಲರ್ಗಳನ್ನು ಪಡೆಯಲು ಅವಕಾಶವಿದ್ದು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ ಮಾತ್ರ ಅನುದಾನದ ಲಭ್ಯತೆ ಇದ್ದು, ಅರ್ಹ ರೈತರು ಪ್ರಯೋಜನ ಪಡೆದುಕೊಳ್ಳುವಂತೆ ಜಿಲ್ಲಾ ಪಂಚಾಯತ್ ತೋಟಗಾರಿಕೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

five × 1 =