ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶಾಲೆಯಲ್ಲಿ ಮಕ್ಕಳ ಮಾನಸಿಕ ಆರೋಗ್ಯ ಮತ್ತು ಕ್ಷೇಮಪಾಲನೆಯತ್ತ ಕಾಳಜಿ ವಹಿಸಲು ಪ್ರತ್ಯೇಕ ವಿಭಾಗ ಆರಂಭಿಸಲಾಗಿದೆ. ಪರಿಣತ ವ್ಯಕ್ತಿಯ ನೇತೃತ್ವದಲ್ಲಿ ಕೆಲಸ ಮಾಡುವ ಈ ವಿಭಾಗ ವಿಶಿಷ್ಟ ವಿಧಾನಗಳನ್ನು ಬಳಸಿಕೊಂಡು ತನ್ನ ಉದ್ದೇಶ ಸಾಧಿಸುತ್ತದೆ ಎಂದು ಹೊಸಾಡಿನ ಡಾನ್ ಬಾಸ್ಕೊ ಶಾಲೆಯ ಪ್ರಾಂಶುಪಾಲ ಫಾ. ಮ್ಯಾಕ್ಸಿಮ್ ಡಿಸೋಜ ಹೇಳಿದರು.
ಅವರು, ಡಾನ್ ಬಾಸ್ಕೊ ಶಾಲೆಯ ಬೋಧಕ, ಬೋಧಕೇತರರಿಗಾಗಿ ಈಚೆಗೆ ನಡೆಸಿದ ಮಾನಸಿಕ ಆರೋಗ್ಯ ಮತ್ತು ಕ್ಷೇಮಪಾಲನೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಶಾಲೆಯ ಆಪ್ತ ಸಮಾಲೋಚಕಿಯಾಗಿ ಕೆಲಸಮಾಡುತ್ತಿರುವ ರಕ್ಷಿತಾ ಎನ್. ಜೆ ಈ ವಿಷಯದಲ್ಲಿ ವಿಶೇಷ ಶಿಕ್ಷಣದ ಜತೆಗೆ ಅಂತರರಾಷ್ಟ್ರೀಯ ಸಂಸ್ಥೆಯೊಂದರಿಂದ ಚಿಕಿತ್ಸಕ ಆಟಗಳು ಮತ್ತು ಚಿಕಿತ್ಸಾ ಪರಿಣತಿ ಪಡೆದುಕೊಂಡಿದ್ದಾರೆ. ಅವರು ಮಾನಸಿಕ ಸಮಸ್ಯೆ ಇರುವ ಮತ್ತು ವಿಶೇಷ ಅಗತ್ಯ ಇರುವ ಮಕ್ಕಳಿಗೆ ಚಿಕಿತ್ಸೆ ನೀಡುತ್ತಾರೆ. ಅದರೊಂದಿಗೆ ಮಕ್ಕಳಲ್ಲಿ ಮಾನಸಿಕ ಸಮಸ್ಯೆ ಉದ್ಭವಿಸಿದಾಗ ಚಿಕಿತ್ಸಕ ಆಟಗಳು, ಆಪ್ತ ಸಮಾಲೋಚನೆ ಹಾಗೂ ಪಾರಸ್ಪರಿಕ ಕ್ರಿಯೆಗಳ ಮೂಲಕ ಅದನ್ನು ಹೇಗೆ ಪರಿಹರಿಸಬಹುದು ಎಂಬ ಕುರಿತು ಈ ಕಾರ್ಯಾಗಾರದಲ್ಲಿ ಬೊಧಕ, ಬೋಧಕೇತರರಿಗೆ ತರಬೇತಿ ನೀಡುವ ಮೂಲಕ ಅವರನ್ನು ಈ ಪ್ರಕ್ರಿಯೆಯಲ್ಲಿ ತೊಡಗಿಸುವುದು ತರಬೇತಿಯ ಉದ್ದೇಶ ಎಂದು ಹೇಳಿದರು.
ಶಾಲೆಯ ಎಲ್ಲ ಶಿಕ್ಷಕ, ಶಿಕ್ಷಕೇತರರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಆಪ್ತ ಸಮಾಲೋಚಕಿ ರಕ್ಷಿತಾ ಪಾರಸ್ಪರಿಕ ಚಟುವಟಿಕೆಗಳ ಮೂಲಕ ಅವರಿಗೆ ವಿಷಯ ಮನದಟ್ಟುಮಾಡಿದರು.
