ಥಾಲ್ಯಾಂಡ್ ಪ್ರವಾಸ ಪಟ್ಟಾಯದಲ್ಲಿ ಟುಕ್ ಟುಕ್

ಎ.ಎಸ್.ಎನ್. ಹೆಬ್ಬಾರ್

ಥಾಲ್ಯಾಂಡಿನ ಸುಂದರ ಕಡಲ ತೀರದ ಪುಟ್ಟ ನಗರ ಪಟ್ಟಾಯ. ಪ್ರವಾಸಿಗಳ ಪಾಲಿಗೆ ಅದು ಒಂದು ಸ್ವರ್ಗ. ‘ಇಲ್ಲಿಲ್ಲದುದಿಲ್ಲ’. ಒಂದು ಲೆಕ್ಕದಲ್ಲಿ ಪಟ್ಟಾಯ ಒಂದು ಇಂದ್ರನಗರಿ. ಇಲ್ಲಿರುವ ಅಪ್ಸರೆಯರನ್ನು ನೋಡಲು ಎರಡು ಕಣ್ಣು ಸಾಲದು. ರಂಭೆ, ಊರ್ವಶಿ, ಮೇನಕೆ, ತಿಲೋತ್ತಮೆಯರಂತಹ ಚೆಲುವೆಯರನ್ನು ಮೀರಿಸುವ ಹಾಲುಗಲ್ಲದ, ಕೆಂಪು ತುಟಿಗಳ, ನೀಳ ಕೇಶದ, ಸುಂದರ ಶ್ವೇತ ದಂತಪಂಕ್ತಿಯ ಲಲನೆಯರು ಅರೆಬೆತ್ತಲಾಗಿ ತಿರುಗುತ್ತಿರುವುದೇ ಪಟ್ಟಾಯದಲ್ಲಿ. ಸಂಜೆಯಾಯಿತೆಂದರೆ ಪಟ್ಟಾಯ ಕಣ್ಣಿಗೆ ಹಬ್ಬ ನೀಡುತ್ತದೆ. ಎಲ್ಲಿ ಕಂಡರಲ್ಲಿ ಬಣ್ಣ ಬಣ್ಣದ ಬೆಳಕು – ದಾರಿಯುದ್ದಕ್ಕೂ ಬಿಸಿ ಬಿಸಿ ತಿಂಡಿ ತಿನಿಸು ಮಾಡುತ್ತಾ, ಮಾರುತ್ತಾ ಇರುವ ತಾತ್ಕಾಲಿಕ, ಸಂಚಾರಿ ಖಾನಾವಳಿಗಳು. ರಸ್ತೆಬದಿಯಲ್ಲಿ ಚಿತ್ರವಿಚಿತ್ರ ಬೊಂಬೆಗಳನ್ನು, ಆಟಿಕೆಗಳನ್ನು, ಇಲೆಕ್ಟ್ರಾನಿಕ್ ವಸ್ತುಗಳನ್ನು ಮಾರುವ ಮಂದಿ. ಚಪ್ಪಾಳೆ ತಟ್ಟಿದರೆ ಸಾಕು, ಚಲಿಸುವ ಗೊಂಬೆಗಳೂ ಅಲ್ಲಿದ್ದುವು. ಕೆಲವು ಗೊಂಬೆಗಳು ಚಪ್ಪಾಳೆ ತಟ್ಟಿದೊಡನೆ ‘ಉದ್ರೇಕಗೊಳ್ಳುತ್ತಿರುವ’ ಮೋಜಿನವುಗಳು. ಬಾರ್ಗಳು, ನರ್ತನಶಾಲೆಗಳ ಸಾಲು. ಜತೆಯಲ್ಲಿ ಬಾಗಿಲಲ್ಲಿ ನಿಂತು ಮಿನಿ ಚಡ್ಡಿ, ಟಾಪ್ಲೆಸ್ ಅಂಗಿ ಹಾಕಿ ಕೈ ಮಾಡಿ ಕರೆಯುವ ಮೋಹಿನಿಯರು. ಅಂತಹವರೇ ಕಾಲೋತ್ತುವ, ಮೈ ಒತ್ತುವ ಆಕರ್ಷಕ ಮಸ್ಸಾಜ್ ಪಾರ್ಲರ್ಗಳು. ಅಲ್ಲಲ್ಲಿ ವೇಶ್ಯಾವಾಟಿಕೆಗಳು ಸಹಾ. ಮುಂಬೈಯ ಕೆಂಪುದೀಪದ ರಸ್ತೆಯನ್ನು ಮೀರಿಸಿದವುಗಳು. ಇವನ್ನೆಲ್ಲಾ ಕಾಣುತ್ತಾ ಸಾಗಿದರೆ ಸುಸ್ತೋ ಸುಸ್ತು.

ಜನಪ್ರಿಯ ವಾಹನ.
ಹಾಗಾಗಿಯೇ ಪಟ್ಟಾಯ, ಬ್ಯಾಂಕಾಕ್ಗಳಲ್ಲಿ ಇಂತಹ ಮೋಜು ವೀಕ್ಷಣೆಗೆ ನಗರ ಪ್ರದಕ್ಷಿಣೆ ಬರುವವರಿಗೆಂದೇ ‘ಟುಕ್ ಟುಕ್’ ಎಂಬ ವಾಹನ ಇರುತ್ತದೆ. ಪಟ್ಟಾಯದಲ್ಲಿ ನಾವಿಳಿದುಕೊಂಡಿದ್ದ ‘ಗೋಲ್ಡನ್ ಬೀಚ್’ ಎಂಬ ಐಶಾರಾಮಿ ಹೋಟೇಲಿನ ಹೊರ ಬಂದು ರಸ್ತೆಬದಿ ನಿಂತರೆ ಸಾಕು, ಈ ಟುಕ್ ಟುಕ್ಗಳ ಸಂಚಾರ ನೋಡಲು ಸಾಧ್ಯ. ನಮ್ಮಲ್ಲಿನ ಆಟೋರಿಕ್ಷಾಗಳನ್ನು ಹೋಲುವ ಈ ಟುಕ್ ಟುಕ್ಗಳು ಆಟೋಗಳಿಗಿಂತ ತುಸು ದೊಡ್ಡ ವಾಹನಗಳು. ಹೆಚ್ಚು ಜನ ಪ್ರಯಾಣಿಸಬಹುದು. ನಾಲ್ಕು ಚಕ್ರಗಳ ಈ ವಾಹನ (ಕೆಲವೆಡೆ ಮೂರು ಚಕ್ರಗಳ ವಾಹನ ಸಹಾ) ಸತತವಾಗಿ ನಗರ ಪ್ರದಕ್ಷಿಣೆ ಮಾಡುತ್ತಲೇ ಇರುತ್ತದೆ. ನೀವು ಎಲ್ಲಿ ಬೇಕಾದರೂ ಹತ್ತಬಹುದು, ಎಲ್ಲಿ ಬೇಕಾದರೂ ಇಳಿಯಬಹುದು. ದಾರಿಬದಿ ನಿಂತು ಟುಕ್ ಟುಕ್ ಬರುವಾಗ ಕೈ ತೋರಿಸಿದರೆ ಸಾಕು, ನಿಲ್ಲಿಸಿಬಿಡುತ್ತಾನೆ. ಹಿಂದಿರುವ ಆಸನಗಳಲ್ಲಿ ನೀವು ಕುಳಿತು ಅಲ್ಲಿದ್ದ ಗಂಟೆ ಬಾರಿಸಿದೊಡನೆ ಟುಕ್ ಟುಕ್ ಮತ್ತೆ ಚಾಲೂ. ನಿಮಗೆಲ್ಲಾದರೂ ಇಳಿಯಬೇಕೆಂದೆನಿಸಿದಾಗ ಗಂಟೆ ಬಾರಿಸಿಬಿಡಿ, ನಿಲ್ಲಿಸುತ್ತಾರೆ. ಒಬ್ಬೊಬ್ಬರಿಗೆ ಬರೇ ಹತ್ತು ಬಾತ್ ಪ್ರಯಾಣ ಶುಲ್ಕ. ಟ್ಯಾಕ್ಸಿಯಲ್ಲಿ ಹೋದರೆ ನೂರು ಬಾತ್ ಆಗುವುದಕ್ಕೆ ಟುಕ್ ಟುಕ್ ತೆಗೆದುಕೊಳ್ಳುವುದು ಹತ್ತುಪಟ್ಟು ಕಡಿಮೆ. ಹಾಗಾಗಿ ಪ್ರವಾಸಿಗರಲ್ಲಿ ಟುಕ್ ಟುಕ್ನ ನಗರ ಪ್ರದಕ್ಷಿಣೆ ಜನಪ್ರಿಯವಾಗಿದೆ.

ಚಲನಶೀಲ
ಅದು ಹೇಗೆ ಈ ಅಗ್ಗದ ದರ ಅವರಿಗೆ ಪೂರೈಸುತ್ತದೆ? ಟುಕ್ ಟುಕ್ ಸದಾ ಚಲಿಸುತ್ತಲೇ ಇರುತ್ತದೆ. ಜನ ಹತ್ತುತ್ತಲೇ ಇರುತ್ತಾರೆ, ಇಳಿಯುತ್ತಲೇ ಇರುತ್ತಾರೆ. ಇಷ್ಟೇ ದೂರ ಸಾಗಿ ಇಳಿದರೂ ಹತ್ತು ಬಾತ್, ದೂರ ಹೋಗಿ ಇಳಿದರೂ ಹತ್ತುಬಾತ್. ಹಾಗಾಗಿ ಒಂದೊಂದು ಟ್ರಿಪ್ಗೂ ಈ ಟುಕ್ ಟುಕ್ ಒಂದು ಟ್ಯಾಕ್ಸಿಗಿಂತಲೂ ಹೆಚ್ಚು ಸಂಪಾದನೆ ಮಾಡುತ್ತದೆ. ಜನಕ್ಕೆ ಕೈಗೆಟಕುವ ದರ, ಎಲ್ಲೆಂದರಲ್ಲಿ ಹತ್ತುವ, ಇಳಿಯುವ ಸೌಲಭ್ಯ. ವಾಹನಕ್ಕೂ ಲಾಭ.

ನಮ್ಮಲ್ಲೇಕೆ ಬರಬಾರದು?
ನಮ್ಮ ಬೆಂಗಳೂರು ಮತ್ತಿತರ ನಗರಗಳನ್ನೇ ನೋಡಿ. ಆಟೋ ನಿಲ್ದಾಣಕ್ಕೇ ಹೋಗಿ ‘ಜಯನಗರಕ್ಕೆ ಹೋಗೋಣ’ ಎಂದು ಕರೆದರೆ ‘ಆ ಕಡೆ ಬರೋದಿಲ್ಲ’ ಎನ್ನುತ್ತಾರೆ. ಹಠಮಾಡಿದರೆ ಮೀಟರ್ ಮೇಲೆ ಜಾಸ್ತಿ ಎಷ್ಟು ಕೊಡ್ತೀರಿ ಎಂದು ಕೇಳುತ್ತಾರೆ. ಒಟ್ಟಿನಲ್ಲಿ ಆಟೋ ನಂಬಿ ಎಲ್ಲಿಗೂ ಹೋಗುವಂತಿಲ್ಲದ ಪರಿಸ್ಥಿತಿ. ಇದೆಲ್ಲಾ ನೋಡುವಾಗ ಬೆಂಗಳೂರಿನಂತರ ನಗರಗಳಲ್ಲಿ ಸರಕಾರವೇ ಜನರ ಉಪಕಾರಕ್ಕಾಗಿ ಅಗ್ಗ ದರದ ಪ್ರಯಾಣ ನೀಡುವ ಟುಕ್ ಟುಕ್ಗಳನ್ನು ಯಾಕೆ ಆರಂಭಿಸಬಾರದು ಎಂತ ಅನ್ನಿಸಿತು. ಬರೇ ಪ್ರವಾಸಿಗಳಿಗಷ್ಟೇ ಅಲ್ಲ, ಸ್ಥಳೀಯರಿಗೂ ಕೂಡಾ ಈ ಟುಕ್ ಟುಕ್ ಅಷ್ಟು ಸಹಕಾರಿ, ಉಪಕಾರಿ. ಟುಕ್ ಟುಕ್ ನೋಡಿ ಖುಷಿಯಾಗಿ ಇಂಟರ್ನೆಟ್ಗೆ ತೆರಳಿದರೆ ‘ಟುಕ್ ಟುಕ್ ನಲ್ಲಿ ಪಟ್ಟಾಯ ಪ್ರದಕ್ಷಿಣೆ’ ವೀಡಿಯೋ ಸಹಾ ಇತ್ತು. ತೆರೆದೆದೆಯ ಥಾಯಿ ಸುಂದರಿಯರನ್ನು ಕಾಣುತ್ತಾ ಬರೇ ಹತ್ತು ಬಾತ್ನಲ್ಲಿ ಪಟ್ಟಾಯದ ಸೊಬಗನ್ನು ಸವಿಯುವ ಪ್ರವಾಸಿಗರ ಬಗೆ ಕಂಡು ಅವಾಕ್ಕಾಗುತ್ತದೆ.

ಗುರುತು ಚಿಹ್ನೆಯ ಕಥೆ
ಟುಕ್ ಟುಕ್ ಭಾಷೆ ಅರಿಯದ ಪ್ರವಾಸಿಗಳಿಗೆ ಎಷ್ಟು ಉಪಕಾರಿ ಎಂಬುದು ಒಂದೇ ದಿನದಲ್ಲಿ ನನ್ನ ಅರಿವಿಗೆ ಬಂತು. ಪಟ್ಟಾಯದಲ್ಲಿ ಕಡಲ ವಿಹಾರ, ಪಾರಾಸೈಲಿಂಗ್, ಡೀಪ್ ಸೀ ವಾಕಿಂಗ್ ಇತ್ಯಾದಿ ಕಾರ್ಯಕ್ರಮಗಳಿಗೆ ಪ್ರವಾಸಿ ಸಂಸ್ಥೆ ಕರೆದೊಯ್ಯುತ್ತದೆ. ಹಾಗೆ ನೆಲಬಿಟ್ಟು ನೀರ ಮೇಲೆ ತೆರಳುವ ಮೊದಲು ನಮ್ಮ ಬಲಗೈಯ ಮೇಲೇನೇ ‘ಗುರುತುಚಿಹ್ನೆ’ ಬರೆದುಬಿಟ್ಟಳು ನಮ್ಮ ಪ್ರವಾಸಿ ಸಖಿ. ‘ಯಾಕೆ ಇದು?’ ಎಂದು ಕೇಳಿದರೆ, ‘ಇರಲಿಬಿಡಿ – ನಮ್ಮ ತಂಡದವರು ಎಂತ ಗುರುತಿಸಲು ಸುಲಭವಾಗುತ್ತದೆ. ಇಲ್ಲವಾದರೆ ನೀವು ಭಾರತೀಯರು ಎಲ್ಲ ಒಂದೇ ರೀತಿ ಇದ್ದೀರಿ. ನಮ್ಮ ತಂಡದವರನ್ನು ನಾವು ಕಂಡುಹಿಡಿಯುವುದು ಹೇಗೆ?’ ಎಂದಳು. ಅದೂ ಹೌದೆನ್ನಿಸಿತು. ನಿಜಕ್ಕೆಂದರೆ ಸಮುದ್ರದ ಮೇಲೆ ಹೋಗುವಾಗ ಅಪಘಾತಗಳಾಗುವುದುಂಟು. ಆಗ ಅಪಘಾತದಲ್ಲಿ ಒಳಗಾದ ವ್ಯಕ್ತಿ ಯಾರೆಂದೇ ಅಲ್ಲಿಯ ಜನಗಳಿಗೆ ತಿಳಿಯಲಾಗುವುದಿಲ್ಲ. ಭಾಷೆಯ ತೊಡಕೂ ಇದೆ. ಅದಕ್ಕಾಗಿ, ಅಪಘಾತಕ್ಕೊಳಗಾದವರು ಯಾವ ತಂಡದವರು ಎಂದು ಪತ್ತೆ ಹಚ್ಚಲು ಈ ಚಿಹ್ನೆ ಸಹಾಯ ಮಾಡುತ್ತದೆ. ಅದಕ್ಕಾಗಿ ಅವರ ಉಪಾಯ.

ಗುರಿಮುಟ್ಟಿಸಿದ ಟುಕ್ ಟುಕ್
ಆದರೆ ಇದು ಖಂಡಿತ ಎಷ್ಟು ಫಲಕಾರಿಯಾಯಿತು ಎಂದರೆ, ನಮ್ಮ ತಂಡದಲ್ಲಿದ್ದ ಓರ್ವ ವೃದ್ಧ ದಂಪತಿಯನ್ನು ಅಚಾತುರ್ಯದಿಂದ ಒಂದು ದ್ವೀಪದ ದಂಡೆಯಲ್ಲಿ ಈ ಪ್ರವಾಸಿ ಸಂಸ್ಥೆ ಹಾಗೇ ಬಿಟ್ಟು ಬಂದಿತು. ಪಾಪ, ಆ ದಂಪತಿ ತಮ್ಮನ್ನು ವಾಪಾಸು ಪಟ್ಟಾಯಕ್ಕೆ ಕರೆದೊಯ್ಯುತ್ತಾರೆ ಎಂತ ಕಾದದ್ದೇ ಬಂತು. ಬಿಸಿಲು ಏರಿ ಗಂಟೆ ಮೂರಾಗುವಾಗ ಬೇರೆ ತಂಡದವರು ವಿಚಾರಿಸಿದರು. ‘ನೀವು ಯಾರು, ಯಾಕೆ ಇಲ್ಲಿದ್ದೀರಿ?’ ಇವರಿಗೋ ಭಾಷೆ ಬಾರದು. ಆಗ ಇವರ ಕೈಯ ಮೇಲಿದ್ದ ‘ಗುರುತಿನ ಚಿಹ್ನೆ’ ಕಂಡು ‘ಓಹೋ ನೀವು ಆ ತಂಡದವರಾ? ಅವರೆಲ್ಲಾ ಗೋಲ್ಡನ್ ಬೀಚ್ ಹೋಟೇಲಿನಲ್ಲಿ ಇದ್ದಾರಲ್ಲ?’ ಎಂದಾಗ ಹೌದೆಂದರು. ಆ ಜನಗಳು ಇವರನ್ನು ತಮ್ಮ ನೌಕೆಯಲ್ಲಿ ಹತ್ತಿಸಿಕೊಂಡು ಬಂದು ಪಟ್ಟಾಯದ ಬೀಚ್ ಬಳಿ ಬಿಟ್ಟರು. ಗೋಲ್ಡನ್ಬೀಚ್ ಹೋಟೇಲ್ ದೂರವೇ ಇತ್ತು. ಆಗ ಇವರ ನೆರವಿಗೆ ಬಂದದ್ದೇ ಈ ಟುಕ್ ಟುಕ್. ಯಾರೋ ಹೇಳಿದರು – ‘ಕೈ ತೋರಿಸಿದರೆ ಹತ್ತಿಸಿಕೊಳ್ಳುವ ಕುದುರೆ, ಗಂಟೆ ಹೊಡೆದರೆ ಇಳಿಸುವ ಕುದುರೆ, ಬರೇ ಹತ್ತು ಬಾತ್’ ಎಂತ. ಇವರು ಕೈ ತೋರಿಸಿ ಟುಕ್ ಟುಕ್ ಹತ್ತಿ ‘ಗೋಲ್ಡನ್ ಬೀಚ್ ಹೋಟೇಲು’ ಎಂದರು. ಒಬ್ಬೊಬ್ಬರಿಗೆ ಬರೇ ಹತ್ತು ಬಾತ್ನಲ್ಲಿ ಇವರ ಪ್ರಯಾಣ ಮುಗಿಯಿತು. ಇಪ್ಪತ್ತು ಬಾತ್ ತೆಗೆದುಕೊಂಡು ಆತ ಗೋಲ್ಡನ್ ಬೀಚ್ ಹೋಟೇಲ್ ಎದುರು ಟುಕ್ ಟುಕ್ ನಿಲ್ಲಿಸಿದಾಗ ‘ಬದುಕಿದೆಯಾ ಬಡ ಜೀವವೇ’ ಎಂದು ಈ ದಂಪತಿ ಬಂದು ರೂಮು ಸೇರಿಕೊಂಡರು. ಅಂದು ಮಧ್ಯಾಹ್ನ ಅವರಿಗೆ ಪ್ರವಾಸಿ ತಂಡದ ಅಚಾತುರ್ಯದಿಂದ ಊಟ ತಪ್ಪಿಹೋಯಿತಾದರೂ, ಟುಕ್ ಟುಕ್ನ ಉಪಕಾರದಿಂದ ಹೋಟೇಲು ತಪ್ಪಿಹೋಗಲಿಲ್ಲ.

Leave a Reply

Your email address will not be published. Required fields are marked *

5 × four =