ಕುಂದಾಪ್ರ ಡಾಟ್ ಕಾಂ ಸುದ್ದಿ
ಗೋವಾ : ಮೇ 27ರಂದು ಗೋವಾದ ಬಿಚೋಲಿಯಂನ ಹೀರಾಬಾಯಿ ಸಭಾಂಗಣದಲ್ಲಿ ಜರುಗಲಿರುವ ಹೊರನಾಡು ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನಕ್ಕೆ, ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ರವೀಂದ್ರ ತೋಟಿಗೇರ ಮತ್ತು ಪೂನಮ್ ರವೀಂದ್ರ ತೋಟಿಗೇರ ದಂಪತಿಗಳನ್ನು ಬೆಳಗಾವಿಯ ಅವರ ಸ್ವಗೃಹದಲ್ಲಿ ಅಧೀಕೃತವಾಗಿ ಆಹ್ವಾನಿಸಲಾಯಿತು.
ಈ ಕುರಿತು ಮಾತನಾಡಿದ ಮಹೇಶಬಾಬು ಸುರ್ವೆಯವರು ಕಳೆದ ಒಂದು ದಶಕದಿಂದಲೂ ಗೋವಾದಲ್ಲಿ ಕನ್ನಡಿಗರನ್ನು ಒಗ್ಗೂಡಿಸುವ ಮತ್ತು ಕನ್ನಡಿಗರ ಸಂಸ್ಕೃತಿ ಪರಂಪರೆಯನ್ನು ಬಿಂಬಿಸುವ ನಿಟ್ಟಿನಲ್ಲಿ ಈ ಸಮ್ಮೇಳನಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈ ಬಾರಿ ದಶಮಾನೋತ್ಸವದ ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಮಾಡುವದಾಗಿ ತಿಳಿಸಿದರು.
ಅಧೀಕೃತ ಆಹ್ವಾನ ಹಾಗೂ ಗೌರವವನ್ನು ಸ್ವೀಕರಿಸಿದ ಕನ್ನಡ ನುಡಿ ಸೇವಕ ಶ್ರೀಯುತ ರವೀಂದ್ರ ತೋಟಿಗೇರರವರು ಮಾತನಾಡಿ ಕನ್ನಡ ಭಾಷೆ, ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಜೊತೆಗೆ ಕನ್ನಡ ನಾಡು-ನುಡಿ-ಗಡಿಯ ಸೇವಕರಾಗಿಯೂ ಸಹ ಮುಂಬರುವ ದಿನಗಳಲ್ಲಿ ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುವದಾಗಿ ಹೇಳಿದರಲ್ಲದೇ ಸರ್ವಾಧ್ಯಕ್ಞರಾಗಿ ಕಾರ್ಯ ನಿರ್ವಹಿಸುವ ಹೊಣೆಯ ಜೊತೆಗೆ ಅತ್ಯಂತ ಪ್ರಾಮಾಣಿಕವಾಗಿ ತಾಯಿ ಭುವನೇಶ್ವರಿ ಸೇವೆಯನ್ನು ಮಾಡುವದಾಗಿ ತಿಳಿಸಿದರು.
ಈ ಅಧೀಕೃತ ಆಹ್ವಾನ ಕಾರ್ಯಕ್ರಮದಲ್ಲಿ ನಿಕಟಪೂರ್ವ ಸಮೇಳನದ ಸರ್ವಾಧ್ಯಕ್ಷರಾದ ಕೆ.ಎಲ್. ಕುಂದರಗಿ, ಪತ್ರಕರ್ತ ಕೆ.ಜಿ. ಮಲ್ಲಿಕಾರ್ಜುನಮಠ,. ಕರ್ನಾಟಕ ಜಾಗೃತಿ ವೇದಿಕೆ ಅಧ್ಯಕ್ಷ ಎಂ. ಶಿವಬಾಲಸ್ವಾಮಿ, ಕನ್ನಡಪರ ಚಿಂತಕ ಚಿದಂಬರ ಪಟ್ಟಣಶೆಟ್ಟಿ, ಯುವ ಕಾರ್ಯಕರ್ತ ಪ್ರಶಾಂತ ಬಿರಾದಾರ, ಕರ್ಮಭೂಮಿ ಕನ್ನಡ ಸಂಘದ ಅಧ್ಯಕ್ಷರಾದ ಹನಮಂತ ರೆಡ್ಡಿ ಶಿರೂರ ಹಾಗೂ ಸಮ್ಮೇಳನದ ಸಂಚಾಲಕರಾದ ಮಹೇಶ ಬಾಬು ಸುರ್ವೆ ಜೊತೆಗೆ ಗೋವಾ ಕನ್ನಡ ಸಂಘಗಳ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.