ದಿ ಹಿಂದೂ- ಅಂತರ್-ಕಾಲೇಜು ರಾಜ್ಯ ಮಟ್ಟದ ಚರ್ಚಾ ಸ್ಪರ್ಧೆ: ಅಣ್ಣಾಮಲೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಮೂಡಬಿದಿರೆ: “ಯಾವುದೇ ವಿಚಾರವನ್ನು ಚರ್ಚಿಸದೆ, ಸಂಶ್ಲೇಷಿಸದೆ ನಿರ್ಧಾರ ತೆಗೆದುಕೊಳ್ಳುವುದರಿಂದ ನಮ್ಮ ಪ್ರಜಾಪ್ರಭುತ್ವಕ್ಕೆ ಭವಿಷ್ಯತ್ತಿನಲ್ಲಿ ಅಪಾಯ ಎದುರಾಗಬಹುದು ” ಎಂದು ಚಿಕ್ಕಮಗಳೂರಿನ ಪೊಲೀಸ್ ಅಧೀಕ್ಷಕ ಅಣ್ಣಾಮಲೈ ಅಭಿಪ್ರಾಯಪಟ್ಟರು. ಅದಾನಿ ಸಂಸ್ಥೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಮ್ ವಿದ್ಯಾರ್ಥಿ ವೇದಿಕೆ ಹಾಗೂ ದಿ ಹಿಂದೂ ಗ್ರೂಪ್ ಆಫ್ ಮೀಡಿಯಾ ಸಂಯುಕ್ತ ಆಶ್ರಯದಲ್ಲಿ ದಿ ಹಿಂದೂ- ಅಂತರ್-ಕಾಲೇಜು ರಾಜ್ಯ ಮಟ್ಟದ ಚರ್ಚಾ ಸ್ಪರ್ಧೆಯನ್ನು ಆಯೋಜಿಸಿತ್ತು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ಚರ್ಚೆ ಎಂಬುದು ಈ ಪ್ರಜಾಪ್ರಭುತ್ವ ಹಾಗೂ ಪ್ರತಿಯೊಬ್ಬರ ಜೀವನದ ಭಾಗವಾಗಿದೆ. ಯಾವುದೇ ವೃತ್ತಿಯಲ್ಲಿ ನಾವು ತೊಡಗಿಸಿಕೊಂಡಿದ್ದರೂ, ಒಂದು ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವ ಮುನ್ನ ಮಾತುಕತೆಯ ಮೂಲಕ ಅದನ್ನು ಚರ್ಚಿಸಬೇಕು. ಎಲ್ಲಾ ಆಯಾಮಗಳಿಂದ ಅದನ್ನು ಪರಿಗಣಿಸಿ ತೀರ್ಮಾನಿಸುವುದು ಅಗತ್ಯ. ಚರ್ಚೆಗಳಿಂದ ಯಾವುದೇ ವಿಚಾರದಲ್ಲಿ ಉತ್ತಮ ಫಲಿತಾಂಶ ಹೊರತರುವಲ್ಲಿ ನಾವು ಸಫಲರಾಗುತ್ತೇವೆ” ಎಂದು ಹೇಳಿದರು.

“ಚರ್ಚಾಕೌಶಲ್ಯ ಇದ್ದಲ್ಲಿ ನಮ್ಮ ವಿಚಾರ ವಿನಿಮಯದಲ್ಲಿ ಪೂರ್ಣತೆಯನ್ನು ಸಾಧಿಸಬಹುದು. ಇತ್ತೀಚೆಗೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ ಶಶಿ ತರೂರ್ ಐದು ನಿಮಿಷದಲ್ಲಿ ಭಾರತದ ಇತಿಹಾಸವನ್ನು ಸಮರ್ಥವಾಗಿ ತೋರಿಸಿದ್ದರು. ಬರಾಕ್ ಒಬಾಮ ಒಬ್ಬ ದಕ್ಷ ಆಡಳಿತಗಾರನ್ನಲ್ಲದೇ ಅತ್ಯುತ್ತಮ ಮಾತುಗಾರನೂ ಆಗಿದ್ದರು. ಈ ನಿದರ್ಶನಗಳು ಚರ್ಚೆಯ ಅವಶ್ಯಕತೆಯನ್ನು ಹೇಳುತ್ತವೆ” ಎಂದು ಹೇಳಿದರು.

“ಚರ್ಚಾ ಸ್ಪರ್ಧೆಗಳ ಆಯೋಜನೆಯ ಸಂಖ್ಯೆ ಈಗೀಗ ಕುಸಿಯುತ್ತಿದೆ. ಜೊತೆಗೆ ಇಂದಿನ ಯುವಜನತೆಯಲ್ಲಿ ಚರ್ಚಾ ಮನೋಭಾವವೂಕ್ಷೀಣಿಸುತ್ತಿದೆ. ಯಾವುದೇ ರೀತಿಯ ಚರ್ಚೆ ಅಥವಾ ವಿಶ್ಲೇಷಣೆಯೇ ಇಲ್ಲದೇ ಅಂತಿಮಗೊಂಡ ಇತ್ತೀಚಿನ ಮುಂಗಡ ಪತ್ರ ಮಂಡನೆಯೇ ಇದಕ್ಕೆ ಸಾಕ್ಷಿ. ನಮ್ಮ ಮುಂದಿನ ಜನನಾಯಕರು ಸಹ ಇದಕ್ಕೆ ಪೂರಕವಾಗಿ ತಯಾರಾಗುತ್ತಿದ್ದಾರೆ. ಇತತರ ದೃಷ್ಟಿಕೋನವನ್ನು ಪರಿಗಣಿಸದೇ ತಮ್ಮದಷ್ಟೇ ಸತ್ಯ ಎಂಬ ಮನಸ್ಥಿತಿ ಭವಿಷ್ಯತ್ತಿಗೆ ಮಾರಕ” ಎಂದು ವಿಷಾದ ವ್ಯಕ್ತಪಡಿಸಿದರು.

“ದಿ ಹಿಂದೂ ತನ್ನಗುಣಮಟ್ಟದ ಸುದ್ದಿ ಬಿತ್ತರಣೆ, ಉತ್ತಮ ವಿಶ್ಲೇಷಣಾತ್ಮಕ ರೀತಿಯಿಂದಎಲ್ಲರ ಮನೆಮಾತಾಗಿದೆ. ಕೇವಲ ಸುದ್ದಿಯನ್ನಷ್ಟೇ ಅಲ್ಲದೇ ವಿದ್ಯಾರ್ಥಿಗಳಿಗೆ ಈ ರೀತಿಯ ಸ್ಪರ್ಧೆಗಳ ಆಯೋಜನೆ ಅದರ ಕಾರ್ಯವೈಖರಿಯನ್ನು ಬಿಂಬಿಸುತ್ತದೆ. ನನ್ನಎಲ್ಲಾ ಏಳಿಗೆಗಳಲ್ಲೂ ದಿ ಹಿಂದೂ ಪತ್ರಿಕೆ ನನ್ನ ಸಂಗಾತಿಯಾಗಿತ್ತು” ಎಂದು ಸಂತಸ ಸೂಚಿಸಿದರು.

ಚರ್ಚೆಗಳ ಪ್ರಾಮುಖ್ಯತೆಯ ಕುರಿತು ಮಾತನಾಡಿ “ಈ ರೀತಿಯ ಸ್ಪರ್ಧೆಗಳು ಪ್ರತಿಭಾ ಪ್ರದರ್ಶನಕ್ಕೆ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಡುತ್ತವೆ. ಸೋಲು-ಗೆಲುವು ಇಲ್ಲಿ ಮುಖ್ಯವಾಗುವುದಿಲ್ಲ. ಇಂತಹ ಸ್ಪರ್ಧೆಗಳು ನಮ್ಮನ್ನು ಮತ್ತಷ್ಟು ಕೌಶಲ್ಯಪೂರ್ಣಗೊಳಿಸುತ್ತವೆ. ನಮ್ಮ ಚಿಂತನೆಯನ್ನು ಇನ್ನಷ್ಟು ತೀಕ್ಷ್ಣಗೊಳಿಸುತ್ತವೆ. ಚರ್ಚೆಗಳು ವಿಚಾರದ ಬಗೆಗೆ ಪರಿಪೂರ್ಣತೆ ಹೊಂದಲು ಸಹಾಯ ಮಾಡುತ್ತವೆ. ಹಾಗಾಗಿ ವಿದ್ಯಾರ್ಥಿಗಳು ಇದರಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳಬೇಕು” ಎಂದುಕರೆ ನೀಡಿದರು.

Leave a Reply

Your email address will not be published. Required fields are marked *

13 + twelve =