ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬ್ಲಾಕ್ ಮಹಿಳಾ ಕಾಂಗ್ರೆಸ್ ಇಲ್ಲಿನ ರೋಟರಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಅರಶಿನ ಕುಂಕುಮ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆ, ನವರಾತ್ರಿಯು ದುಷ್ಟ ದಮನಕಾರಕ ಶಕ್ತಿರೂಪಿಗಳಾದ ನವದುರ್ಗೆಯರನ್ನು ಆರಾಧಿಸುವ ಮಹತ್ವದ ಪರ್ವಕಾಲ. ದೇಶದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿರುವ ಪ್ರಸಕ್ತ ಕಾಲಘಟ್ಟದಲ್ಲಿ ಮಹಿಳೆಯರು ದುರ್ಗೆಯ ಆರಾಧನೆಯ ಮೂಲಕ ಶಕ್ತಿಸಂಚಯ ಮಾಡಿಕೊಂಡು ಅಂತಹ ದೌರ್ಜನ್ಯದ ವಿರುದ್ಧ ಸೆಟೆದು ನಿಲ್ಲಬೇಕು ಎಂದು ಹೇಳಿದರು.
ಶಶಿಕಲಾ ಮತ್ತು ಸಂಗಡಿಗರು ಪ್ರಾರ್ಥನೆ ಹಾಡಿದರು. ಬ್ಲಾಕ್ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಶಾಂತಿ ಪಿರೇರಾ ಸ್ವಾಗತಿಸಿದರು. ಅಧ್ಯಕ್ಷೆ ಗೌರಿ ದೇವಾಡಿಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಜ್ಯೋತಿ ಕೆ. ಹೆಬ್ಬಾರ್ ಅರಶಿನ ಕುಂಕುಮ ಆಚರಣೆಯ ಮಹತ್ವವನ್ನು ವಿವರಿಸಿದರು. ವಂಡ್ಸೆ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ದೇವಾಡಿಗ ವಂದಿಸಿದರು.
ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೇಲಿಯೊ, ಉಡುಪಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಡಾ. ಸುನಿತಾ, ರಾಜೀವ ಗಾಂಧಿ ಪಂಚಾಯತ್ ಪರಿಷತ್ತಿನ ಜಿಲ್ಲಾ ಸಂಚಾಲಕಿ ರಶ್ಮಿ ಒಲಿವೇರಾ, ಬೈಂದೂರು ತಾಲ್ಲೂಕು ಪಂಚಾಯಿತಿ ಸದಸ್ಯರಾದ ಪ್ರಮೀಳಾ ದೇವಾಡಿಗ, ಗ್ರೀಷ್ಮಾ ಬಿಡೆ, ಜಗದೀಶ ದೇವಾಡಿಗ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್. ರಾಜು ಪೂಜಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಮದನ್‌ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ ಪೂಜಾರಿ, ನಾಗರಾಜ ಗಾಣಿಗ ಇದ್ದರು.
ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಗೀತಾ ವಾಗ್ಲೆ ಅವರಿಗೆ ಅರಶಿನ ಕುಂಕುಮ ಹಚ್ಚಿ, ಮಡಿಲು ತುಂಬಿ ಅರಶಿಣ ಕುಂಕುಮ ಕಾರ್ಯಕ್ರಮ ಆಚರಿಸಲಾಯಿತು. ಬೈಂದೂರು ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರಾದ ಸುವರ್ಣಾ, ಕಮಲಾ ಮತ್ತು ನಾವುಂದ ಗ್ರಾಮ ಪಂಚಾಯಿತಿಗೆ ಸತತವಾಗಿ ನಾಲ್ಕು ಬಾರಿ ಸದಸ್ಯೆಯಾಗಿದ್ದ ಲಕ್ಷ್ಮೀ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು. ಎಸ್. ರಾಜು ಪೂಜಾರಿ ಅವರ ಜನ್ಮದಿನ ಆಚರಿಸಲಾಯಿತು.