ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕೃಷಿಕರು ಆಧುನಿಕ ಕೃಷಿ ಚಟುವಟಿಕೆಗಳಿಗೆ ಒಗ್ಗಿಕೊಳ್ಳುವ ಮೂಲಕ ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿ ಪರಿವರ್ತಿಸಿಕೊಳ್ಳಬೇಕು, ದೇವಾಲಯಗಳಂತೆ ಕೃಷಿಯು ಅತ್ಯಂತ ಪಾವಿತ್ರ್ಯತೆ ಹೊಂದಿರುವ ಕ್ಷೇತ್ರವಾಗಿದ್ದು, ಪರಿಶ್ರಮದ ಕೃಷಿಯ ಮೂಲಕ ಹೆಚ್ಚಿಸಿ ಸಂಪತ್ತು ಗಳಿಸಲು ಸಾಧ್ಯವಾಗುತ್ತದೆ ಎಂದು ಎಂದು ಧರ್ಮಸ್ಥಳ ಧರ್ಮಾಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ರಿ. ಬೈಂದೂರು ತಾಲೂಕು ವತಿಯಿಂದ ಕೃಷಿ ಮನೆ ನಾಯ್ಕನಕಟ್ಟೆಯಲ್ಲಿ ಸ್ಥಳಾಂತರಗೊಳ್ಳುತ್ತಿರುವ ಕೃಷಿ ಯಂತ್ರಗಳ ಬಾಡಿಗೆ ಸೇವಾ ಕೇಂದ್ರ ಮತ್ತು ಶ್ರೀ ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟದ ಕಚೇರಿ ಉದ್ಘಾಟಿಸಿ ಮಾತನಾಡಿದರು.
ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ 3666 ಸ್ವ-ಸಹಾಯ ಸಂಘಗಳಿವೆ. ಬಹುತೇಕ ಎಲ್ಲಾ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಎ ಗ್ರೇಡ್‌ನಲ್ಲಿ ಗುರುತಿಸಿಕೊಂಡಿದೆ. ತಾಲೂಕು ವ್ಯಾಪ್ತಿಯಲ್ಲಿನ ಸ್ವ ಸಹಾಯಗಳು ಈ ಬಾರಿ 8.53 ಕೋಟಿ ರೂ. ಲಾಭಗಳಿಸಿದ್ದು, ಪ್ರತಿ ಸದಸ್ಯರು ತಲಾ 22 ಸಾವಿರ ರೂ. ಲಾಭಾಂಶ ಹಂಚಿಕೊಂಡಿದ್ದಾರೆ. ಸ್ವಹಾಯ ಸಂಘದ ಮೂಲ ಉದ್ದೇಶ ಧರ್ಮವಾಗಿದ್ದು, ಇದರ ಮೂಲಕ ಆತ್ಮ ಕಲ್ಯಾಣ ಮಾಡಲಾಗುತ್ತದೆ. ಧರ್ಮದ ಮೂಲಕ ಹೊಸ ಚಿಂತನೆ, ಯೋಜನೆಗಳು ಹಾಗೂ ದೂರದೃಷ್ಟಿತ್ವ ಬೆಳೆಯಬೇಕು. ಪರಿವರ್ತನೆ ದೇವರ ಅನುಗ್ರಹದಿಂದ ಸಾಧ್ಯವಾಗುತ್ತದೆ. ಕ್ಷೇತ್ರದಲ್ಲಿ ವಿದ್ಯಾದಾನ, ಅನ್ನದಾನ, ಔಷಧ ದಾನ ನಿತ್ಯ ನಡೆಯುತ್ತಿದ್ದು, ಜನರನ್ನು ಹೆದರಿಕೆಯಿಂದ ಮುಕ್ತಗೊಳಿಸಲು ಅಭಯ ದಾನ ಮಾಡಲಾಗುತ್ತದೆ. ಕೃಷಿಕರು ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಜೀವನ ನಡೆಸುವಂತಾಗಲಿ ಎಂದು ಹೇಳಿದರು.
ಈ ಸಂದರ್ಭ ಕೃಷಿಮನೆ ಕಟ್ಟಡ ಮಾಲಕ ನಾಗಲಕ್ಷ್ಮೀ ಸತೀಶ ಕೊಠಾರಿ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ, ಕೆರ್ಗಾಲು ಗ್ರಾ.ಪಂ.ಅಧ್ಯಕ್ಷ ಮಾಧವ ದೇವಾಡಿಗ, ಪ್ರಗತಿ ಬಂಧು ಒಕ್ಕೂಟದ ಅಧ್ಯಕ್ಷ ರಘರಾಮ ಕೆ. ಪೂಜಾರಿ, ಬೈಂದೂರು ಜನಜಾಗೃತಿ ವೇದಿಕೆ ಅಧ್ಯಕ್ಷ ರಾಜು ದೇವಾಡಿಗ, ವಸಂತ ಸಾಲಿಯಾನ, ಅಬ್ರಹಾಂ ಉಪಸ್ಥಿತರಿದ್ದರು.
ಧರ್ಮಸ್ಥಳದ ಮುಖ್ಯ ಕಾರ್ಯನಿರ್ವಹಣಾಕಾರಿ ಡಾ.ಎಲ್. ಹೆಚ್.ಮಂಜುನಾಥ ಪ್ರಾಸ್ತವನೆಗೈದರು. ಯೋಜನಾಕಾರಿ ಶಶಿರೇಖಾ ಪಿ. ಸ್ವಾಗತಿಸಿದರು. ಲೆಕ್ಕಪರಿಶೋಧಕ ರಾಘವೇಂದ್ರ ನಿರೂಪಿಸಿದರು. ಯೋಜನಾಕಾರಿ ಅಶೋಕ ವಂದಿಸಿದರು.