ಬೈಂದೂರು: ಉಪ್ಪುಂದ ದೇವಾಡಿಗ ಸಂಘ ಮಹಿಳಾ ಘಟಕದ ’ಪ್ರೇರಣಾ’ ವತಿಯಿಂದ ಮಹಿಳಾ ಜಾಗೃತಿ ಸಮಾವೇಶ ಮಾತೃಶ್ರೀ ಸಭಾಭವನದಲ್ಲಿ ನಡೆಯಿತು.
ಸಮಾವೇಶ ಉದ್ಘಾಟಿಸಿದ ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ ಮಾತನಾಡಿ ಪುರುಷ ಪ್ರಧಾನ ಸಮಾಜದಲ್ಲಿ ಈಗ ಮಹಿಳೆಯರೂ ಅವರಿಗಿಂತ ಕಡಿಮೆ ಇಲ್ಲದ ರೀತಿಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಮಹಿಳೆಯರು ಸಮಾಜ ಹಾಗೂ ಕುಟುಂಬದ ಎರಡು ಕಣ್ಣುಗಳಿದ್ದಂತೆ. ಆದರೆ ಈಗ ಸದಾ ದೌರ್ಜನ್ಯ, ಅತ್ಯಾಚಾರ, ಅಮಾನವೀಯ ಕೃತ್ಯಗಳಿಗೆ ಬಲಿಯಾಗುತ್ತಿರುವ ಮಹಿಳೆಯರು ಸಮಾಜದಲ್ಲಿ ಜಾಗೃತಗೊಂಡು ಸಂಘಟಿತರಾಗಿ ಹೋರಾಡಬೇಕಾಗಿದೆ ಎಂದರು.
ತಾಪಂ ಸದಸ್ಯೆ ಗೌರಿ ದೇವಾಡಿಗ ಮಹಿಳೆ ಮತ್ತು ಕುಟುಂಬದ ವಿಷಯವಾಗಿ ಮಾತನಾಡಿದರು. ನಾಗರತ್ನ ಸುರೇಶ್ ದೇವಾಡಿಗ, ಅಕ್ಷತಾ ವೆಂಕಟರಮಣ ದೇವಾಡಿಗ, ಜ್ಯೋತಿ ವೆಂಕಟರಮಣ, ಸಮಿತಿ ಕಾರ್ಯದರ್ಶಿ ಅಂಬಿಕಾ ಶ್ರೀಧರ ದೇವಾಡಿಗ ಉಪಸ್ಥಿತರಿದ್ದರು. ವಿನೋದಾ ಎಂ.ದೇವಾಡಿಗ ಸ್ವಾಗತಿಸಿ, ಮೇನಕಾ ವಂದಿಸಿದರು. ಶ್ರೀಲತಾ ನಿರೂಪಿಸಿದರು. ಕಾರ್ಯಕ್ರಮದ ಮೊದಲು ಹಿಂದೂ ಸಂಪ್ರದಾಯದಂತೆ ಆಗಮಿಸಿದ ಮಹಿಳೆಯರಿಗೆ ಅರಸಿನ-ಕುಂಕುಮ ನೀಡಿ ಸ್ವಾಗತಿಸಲಾಯಿತು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.