ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಭಾರತದಲ್ಲಿ ಪ್ರತೀ ವರ್ಷ 20 ಲಕ್ಷ ಯೂನಿಟ್ ರಕ್ತದ ಕೊರತೆ ಕಂಡುಬರುತ್ತಿದೆ, ಆದ್ದರಿಂದ ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಬೇಕು ಎಂದು ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ ತಿಳಿಸಿದ್ದಾರೆ.
ಅವರು ಶನಿವಾರ, ಕರ್ನಾಟಕ ರಾಜ್ಯ ಅರಣ್ಯ ರಕ್ಷಕ ಮತ್ತು ವೀಕ್ಷಕರ ಸಂಘ, ಕುಂದಾಪುರ ಪ್ರಾದೇಶಿಕ ಹಾಗೂ ಕುದುರೆಮುಖ ವನ್ಯಜೀವಿ ವಿಭಾಗ, ರಕ್ತನಿಧಿ ಕೇಂದ್ರ, ಜಿಲ್ಲಾ ಸರಕಾರಿ ಆಸ್ಪತ್ರೆ ಉಡುಪಿ ಸಹಯೋಗದಲ್ಲಿ, ಉಡುಪಿಯ ಪುರಭವನದ ಬಳಿ ಗ್ರಂಥಾಲಯ ಕಟ್ಟಡದಲ್ಲಿ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ, ಶಿಬಿರದಲ್ಲಿ ಸ್ವಯಂ ರಕ್ತದಾನ ಮಾಡಿ ಮಾತನಾಡಿದರು.
ದೇಶದಾದ್ಯಂತ ಲಾಕ್‌ಡೌನ್ ಅವಧಿಯಲ್ಲಿ ರಕ್ತದ ಕೊರತೆ ಅಧಿಕವಾಗಿದ್ದು, ಇಂತಹ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಿಗಳು ರಕ್ತದಾನ ಮಾಡುವಂತೆ ತಿಳಿಸಿದ ಡಿಎಫ್‌ಓ ಆಶೀಶ್ ರೆಡ್ಡಿ ಅವರು, ರಕ್ತದಾನದಿಂದ ಮತ್ತೊಬ್ಬರ ಜೀವ ಉಳಿಸುವ ಜೊತೆಗೆ, ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗುತ್ತದೆ, ಸಮಾಜಕ್ಕೆ ಸೇವೆ ಸಲ್ಲಿಸಿದ ಆತ್ಮ ತೃಪ್ತಿ ದೊರೆಯುತ್ತದೆ , ವಿರಳ ರಕ್ತದ ಗುಂಪುಗಳಾಗಿ ಒಂದಾಗಿರುವ ಬಿ ನೆಗೆಟಿವ್ ರಕ್ತ ಹೊಂದಿರುವ ತಾನು, ಈ ಹಿಂದೆ ತುರ್ತು ಚಿಕಿತ್ಸೆಗೆ ಅಗತ್ಯವಿದ್ದ ರೋಗಿಯೊಬ್ಬರಿಗೆ ರಕ್ತ ನೀಡಿದ್ದು, ಇಂದು ಸ್ವಯಂ ಪ್ರೇರಿತವಾಗಿ ನೀಡುತ್ತಿದ್ದೇನೆ ಎಂದ ಅವರು ಸ್ವತಃ ರಕ್ತದಾನ ಮಾಡಿ ಮಾದರಿಯಾದರು.
ಕರ್ನಾಟಕ ರಾಜ್ಯ ಅರಣ್ಯ ರಕ್ಷಕ ಮತ್ತು ವೀಕ್ಷಕರ ಸಂಘ ಉಡುಪಿ ಘಟಕದ ಅಧ್ಯಕ್ಷ ಮುಂಜುನಾಥ ನ್ಯಾಕ್ ಮಾತನಾಡಿ, ಕೋವಿಡ್ ೧೯ ಪ್ರಯುಕ್ತದ ಲಾಕ್‌ಡೌನ್ ನಿಂದ ರಕ್ತದ ಕೊರತೆಯಿರುವುದನ್ನು ಅರಿತು ಸಂಘದ ವತಿಯಿಂದ ತುರ್ತಾಗಿ ರಕ್ತದಾನ ಶಿಬಿರ ಆಯೋಜಿಸಿದ್ದು, ಸಂಘದವತಿಯಿಂದ ರೂ.66,666 ಗಳನ್ನು ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ನೀಡಲಾಗುವುದು ಎಂದು ಹೇಳಿದರು.
ಉಡುಪಿ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್, ಉಡುಪಿ ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೋ, ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಕಿರಣ್ ಹೆಗ್ಡೆ, ಕರ್ನಾಟಕ ರಾಜ್ಯ ಅರಣ್ಯ ರಕ್ಷಕ ಮತ್ತು ವೀಕ್ಷಕರ ಸಂಘ ಉಡುಪಿ ಘಟಕದ ಖಜಾಂಚಿ ಅಭಿಲಾಷ್, ದೇವರಾಜ್ ಪಾಣ ಮತ್ತಿತರರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಕೇಶವ ಪೂಜಾರಿ ನಿರೂಪಿಸಿ, ವಂದಿಸಿದರು.