ಮೊಬೈಲ್ ಗ್ರಾಹಕರ ಬಹುದಿನದ ಬೇಡಿಕೆಯಾಗಿದ್ದ ದೇಶವ್ಯಾಪಿ ಮೊಬೈಲ್ ನಂಬರ್ ಪೋರ್ಟಬಲಿಟಿ ಯೋಜನೆ ಜುಲೈ 3ರ ಶುಕ್ರವಾರದಿಂದ ಜಾರಿಗೆ ಬರಲಿದೆ. ಹೀಗಾಗಿ ಇನ್ನು ಮೊಬೈಲ್ ಬಳಕೆದಾರರು, ತಾವು ದೇಶದ ಯಾವುದೇ ಭಾಗಕ್ಕೆ ತೆರಳಿದರೂ ಹಳೆಯ ಮೊಬೈಲ್ ನಂಬರ್ ಅನ್ನೇ ಉಳಿಸಿಕೊಳ್ಳಬಹುದಾಗಿದೆ. ಹೀಗಾಗಿ ಪದೇ ಪದೇ ವಾಸ ಸ್ಥಳ ಇಲ್ಲವೇ ಕರ್ತವ್ಯದ ಸ್ಥಳ ಬದಲಾಯಿಸುವವರು, ಪದೇ ಪದೇ ಮೊಬೈಲ್ ನಂಬರ್ ಬದಲಾಯಿಸುವ ಕಿರಿಕಿರಿಯಿಂದ ಪಾರಾಗಲಿದ್ದಾರೆ.
ಇದುವರೆಗೆ ಒಂದೇ ಟೆಲಿಕಾಂ ವಲಯದ ವ್ಯಾಪ್ತಿಯೊಳಗೆ ಮಾತ್ರ ಮೊಬೈಲ್ ನಂಬರ್ ಪೋರ್ಟಬಲಿಟಿ ಲಭ್ಯವಿತ್ತು. ಅಂದರೆ ಒಂದು ಕಂಪನಿಯ ಸೇವೆ ಗ್ರಾಹಕನಿಗೆ ಬೇಡವೆಂದಾದಲ್ಲಿ ಆತ ಬೇರೆ ಕಂಪನಿಗೆ ವರ್ಗಾವಣೆಗೊಳ್ಳಬಹುದಾಗಿತ್ತು. ಹೀಗೆ ಕಂಪನಿ ಬದಲಾಯಿಸಿದರೂ, ಹಳೆಯ ನಂಬರ್ ಅನ್ನೇ ಉಳಿಸಿಕೊಳ್ಳಬಹುದಿತ್ತು. ಆದರೆ ಒಂದು ಟೆಲಿಕಾಂ ವಲಯದಿಂದ ಮತ್ತೂಂದು ಟೆಲಿಕಾಂ ವಲಯ ಗ್ರಾಹಕ ತೆರಳಿದಾಗ ಈ ಸೇವೆ ಲಭ್ಯವಿರಲಿಲ್ಲ. ಹೀಗಾಗಿ ಇಂಥದ್ದೊಂದು ಸೇವೆಯ ಬೇಡಿಕೆ ಬಹುದಿನಗಳಿಂದ ಇತ್ತು. ಇಂಥ ಸೇವೆ ನೀಡುವಂತೆ ಈ ಹಿಂದೆಯೇ ಟ್ರಾಯ್, ಮೊಬೈಲ್ ಸೇವಾದಾರ ಕಂಪನಿಗಳಿಗೆ ಸೂಚಿಸಿತ್ತು. ಅದರನ್ವಯ ಕಳೆದ ಮೇ 3ರ ಗಡುವು ನೀಡಲಾಗಿತ್ತು. ಆದರೆ ಸೇವೆ ಜಾರಿಗೆ ಇನ್ನಷ್ಟು ಸಮಯ ನೀಡುವಂತೆ ಮೊಬೈಲ್ ಕಂಪನಿಗಳು ಟ್ರಾಯ್‌ಗೆ ಮನವಿ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಅವಧಿಯನ್ನು ವಿಸ್ತರಿಸಲಾಗಿತ್ತು.