ದೊಡ್ಡ ರಜೆಯ ನೆನಪಲ್ಲಿ

Click Here

Call us

Call us

ಭರತೇಶ ಅಲಸಂಡೆಮಜಲು. | ಕುಂದಾಪ್ರ ಡಾಟ್ ಕಾಂ ಲೇಖನ
ವಾರ್ಷಿಕ ಪರೀಕ್ಷೆ ಮುಗಿದು ಫಲಿತಾಂಶ ಏಪ್ರಿಲ್ 10ಕ್ಕೆ ಪ್ರಕಟಗೊಂಡರೆ ನಂತರ ಮುಂಗಾರಿನ ಮಳೆಯ ಮೊದಲ ಸಿಂಚನದವರೆಗೂ ಪರ್ವಕಾಲ ದೊಡ್ಡ ರಜೆ, ಮಲ್ಲ ರಜೆ, ಬೇಸಗೆ ರಜೆ. ಮಾರ್ನೆಮಿ ರಜೆಯಲ್ಲಿ ಗಳಿಸದೇ ಉಳಿಸಿದನ್ನು ದೊಡ್ಡ ರಜೆಯಲ್ಲಿ ಸಾಧಿಸುವ ಪ್ರಯತ್ನ. ಮೊದಲ ನೀರ ಹನಿಗೆ ಚಾತಕಪಕ್ಷಿ ಕಾಯುವಂತೆ, ಬೇಸಗೆ ರಜೆಗಾಗಿ ಕಾದು ಮೊದಲ ಅದ್ಯತೆಯೆಂಬಂತೆ ಅಜ್ಜಿಮನೆಗೆ ದಾಳಿಯಿಡುವುದು. ಹೆಚ್ಚಾಗಿ ಅಜ್ಜಿ ಮನೆಯೆಂದರೆ ಅಮ್ಮನ ಮನೆಯೇ ಆಗಿರುತಿದ್ದದ್ದು ಅಲಿಖಿತ ನಿಯಮದಂತೆ.

Call us

Call us

Visit Now

ದಿನಕ್ಕೊಂದು ಪುಟ ಕಾಪಿ ಬರಿಯಿರಿ ಎಂದು ನಮ್ಮ ಸರಕಾರಿ ಶಾಲಾ ಶಿಕ್ಷಕಿ ಶೇಸಮ್ಮ ಟೀಚರ್ ನ ಅಜ್ಞಾಪಾಲಕರಾಗಿ ನಾನು ರಜೆ ದೊರೆತ ಮೊದಲೆರಡು ದಿನಗಳಲ್ಲೇ ತಮ್ಮನಿಗೆ ಪೈಪೋಟಿ ನೀಡುತ್ತಾ, ಪುಟ ಸಂಖ್ಯೆ ನಮೂದಿಸುತ್ತಾ, 50 – 60 ಪುಟ ಬರೆದು ಅಜ್ಜಿ ಮನೆಗೆ ಹೊರಡಲು ಸಿದ್ಧರಾಗುತಿದ್ದೇವು. ಆಗ ನಮಗೆ ಬೇಕಿರುತ್ತಿದ್ದದ್ದು ತಿಂಡಿ ಮತ್ತು ಆಟ. ಅಪ್ಪ , ಅಮ್ಮನ ಪ್ರೀತಿಯ ಬೈಗುಳಗಳ ಹೊಡೆತ ತಪ್ಪಿಸಿಕೊಂಡು ಅಜ್ಜಿ ಮನೆ ಸೇರುವುದೆಂದರೆ ಹಾರಲು ಬಿಟ್ಟ ಹಕ್ಕಿಯಂತೆ, ತಿನ್ನಲು ಬೇಕಾದ ತಿಂಡಿ, ಅತ್ತೆ ಮಾಡುವ ಜಿಗುಜ್ಜೆ ಪೋಡಿ, ಹಲಸಿನ ಉಡ್ಲುಂಗ, ಕಟು ಕುಟು ಕೊಬ್ಬರಿ ಖಾದ್ಯ, ಬಯ್ಯಾತ ಚಾಯಕ್ಕೆ ಉಪ್ಪಡ್ ಪಚ್ಚಿಲ್, ಮರಗೆಣಸಿನ ತಿನಿಸು , ಮತ್ತೆ ಅದನ್ನು ಹಂಚುವ ಬಗೆ ಅದು ಯಾರಿಗೆ ಜಾಸ್ತಿಯಾಯಿತೋ ಅವರಿಗೆ ಅತ್ತೆ – ಅಜ್ಜಿಯ ಪ್ರೀತಿ ಜಾಸ್ತಿಯೆಂದು ಮುಗ್ಧ ಮನಸ್ಸು ಪ್ರೀತಿಯನ್ನು ತಿನಿಸುಗಳ ಮೂಲಕವೂ ಮಾಪನ ಮಾಡುವುದಿತ್ತು.

Click here

Click Here

Call us

Call us

ಆ ದಿನಗಳಲ್ಲಿ ದೂರವಾಣಿಗಳು ಹತ್ತಿರ ಸುಳಿದಿರದಿರುವುದರಿಂದ ಭಾಂದವ್ಯ ಬೆಸೆದ ಎರಡು ಮನೆಗಳ ಮನಸ್ಸುಗಳ ಸಂಬಂಧದ ಸಂಕೇತಗಳೇ ಸಂದೇಶಗಳು, ಕಾತರ ನೀರಿಕ್ಷೆಗಳು, ಸಂಜೆಯ ಬಸ್ಸಿನಲ್ಲಿ ಬರದಿದ್ದರೆ , ನಾಳೆಯ ಬೆಳಗ್ಗಿನ ಬಸ್ಸು… ಬಸ್ಸಿನ ಬರುವಿಕೆಯ ಶಬ್ಧವನ್ನು ಮೈಯೆಲ್ಲ ಕಿವಿಯಾಗಿಸಿ ಕೇಳಿ ಹಾದಿ ಕಾಯುವುದರಲ್ಲೆನೋ ಸುಖ. ಬಸ್ಸು ನಿಂತಿತೆಂದರೆ ಕತ್ತೆತ್ತಿ ನೋಡಿ ಬಂದರು-ಬಂದರು ಎಂಬ ಕಾಗೆ ಸುದ್ಧಿ ಮುಟ್ಟಿಸುವುದು ಮನೆಯ ಪುಟಾಣಿಗಳ ನೌಕರಿ. ಕುಂದಾಪ್ರ ಡಾಟ್ ಕಾಂ ಲೇಖನ

ಅಜ್ಜಿಮನೆಯಲ್ಲಿ ಸೂರ್ಯೊದಯ ಆಗುತಿದ್ದದ್ದೆ 8 ಗಂಟೆಯ ನಂತರ ಕೂಡು ಕುಟುಂಬದ ಹಿರಿಯರೆಲ್ಲ ತಮ್ಮ ನಿತ್ಯಕರ್ಮ ಮುಗಿಸಿ ಹೊರಡುವ ಹೊತ್ತಿಗೆ ನಮ್ಮನೆಲ್ಲ ಮೆಲ್ಲಗೆ ಎಬ್ಬಿಸುತ್ತಿದ್ದರು. ಚಾಪೆ ಹೇಗಿತೋ ಹಾಗೆ ಬಿಡಿಸಿ ಹುಸಿಕೋಪದಿಂದ ತೂರಾಡುತ್ತಾ, ಪುಟ್ಟ ಮುಷ್ಠಿ ಕೈಗಳಿಂದ ಕಣ್ಣುಜ್ಜುತ್ತಾ ತನ್ನ ಸಹ ಸವಾರನ್ನು ಸೇರುವುದು… ಮತ್ತೆ ಹಲ್ಲುಜ್ಜಲೂ ಅರ್ಧ ಗಂಟೆ, ಕೊಕ್ಕರ ಕುಳಿತು ನಿನ್ನೆಯ ವಿಚಾರಗಳಿಗೆ ನೆನೆಪಿನ ಉತ್ಸವ ನೀಡುತ್ತಾ, ಬಾಯಿಯನ್ನು ಬಿಸಿನೀರಿನಲ್ಲಿ ಕುಳು-ಕುಳು ಮಾಡಿ ಅತ್ತೆ ದೋಸೆ ಹೊಯ್ಯುತ್ತಿದ್ದ ದಿಕ್ಕೆಲಿನ ಕಡೆಗೆ ಓಟ… ಅದೋ ಅಪರೂಪಕ್ಕೆ ಬರುವ ರಿಕ್ಷಾದ ಶಬ್ಧ ಕೇಳಿದರೆ ಅದು ಇರುವೆಗಳು ಮಳೆಗಾಲಕ್ಕೆ ಆಹಾರ ಭದ್ರಪಡಿಸಿದಂತೆ ಕಿಂಟ್ವಾಲ್ , ಕಿಂಟ್ವಾಲ್ ಅಕ್ಕಿ ಮನೆಯ ಅಂಗಳಕ್ಕೆ ಬಂತೆಂದೇ ಅರ್ಥ… ಮನೆಯ ಕತ್ತಲು ಕೋಣೆ ತುಂಬಿಸಲು… ನಮಗೆ ಮನದೊಳಗೆ ಖುಷಿಯೋ ಖುಷಿ ಅಕ್ಕಿ ಬಂದದಕ್ಕಲ್ಲ ಮಾವನ ದಪ್ಪ ಜೋಪು , ಸಂಗೀಸು ಚೀಲ ನೋಡಿ , ಅದರೊಳಗೆ ಮಿಸುಕಾಡುವ ತಿಂಡಿಯ ನೋಡಿ, ಅದು ಪೇಪರ್ ಮಿಠಾಯಿ, ಕೋಲು ಮಿಠಾಯಿ, ಅಕ್ರೋಟ್, ಶುಂಠಿ ಮಿಠಾಯಿ, ಬಟಾಣಿ ಕಡ್ಲೆ, ಮಿಕ್ಚರ್, ಖಾರಕಡ್ಡಿ, ಚಕ್ಕುಲಿ, ಇನ್ನೇನೋ ಎಲ್ಲ… ಈಗಿನಂತಹ ಲೇಸ್, ಕುರುಕುರೆ, ಮ್ಯಾಗಿಗಳಿಗಿಂತೆ ವೈವಿಧ್ಯಮಯ ತಿಂಡಿಗಳು …

ಇನ್ನೂ ಅತ್ತೆಯಿಂದಿರ ಕಡೆಯವರೋ, ದೂರದ ಸಂಬಂಧಿಗಳು, ಬಂಧುಗಳು ಒಟ್ಟಾದರೆ ಕೇಳಬೇಕೇ? ಪರಿಚಯ ಅಗುವವರೆಗೆ ಬಾಗಿಲಿನ ಸಂದಿನಿಂದಲೋ, ನೆಲ ನೋಡುತ್ತಾ , ಮೂಲೆಯಿಂದಲೋ ನಗು, ಕೈಸನ್ನೆ ಮಾಡುತ್ತಾ , ಮತ್ತೆ ಒಂದಾದರೆ ಕೇಳಬೇಕೇ ರಜೆಯ ಗಮ್ಮತ್ತು ಬಾನೆತ್ತರದಲ್ಲಿ ಹಾರಾಡುತಿರುತ್ತಿತ್ತು . ತಿನ್ನುವುದಕ್ಕೆ, ಆಡುವುದಕ್ಕೆ ಸಮಯವೇ ಮೋಸ ಮಾಡಿದಂತೆ ದಿನ ಉರುಳುತ್ತಿತ್ತು. ಕೈಯಾಟ , ಚೆಂಡಾಟ, ಕುಟ್ಟಿದೋಣೆ, ಲಗೋರಿ, ಹಾಲೆಯಲ್ಲಿ ಜಾರುವುದು(ಪಾಲೆಟ್ ಒಯಿಪುನಿ ) ,ಗೋಲಿಯಾಟ , ಸೈಕಲ್ ಚಕ್ರ ಓಡಿಸುವುದು , ಬುಗರಿ ತಿರುಗಿಸುವುದು , ಗಂಗೆ ಹಿಡಿಯುವುದು (ತ್ರಿಕೋಣ ಅಕಾರ ದಲ್ಲಿ ಮಣ್ಣನ್ನು ಕೊರೆದು ಮನೆ ಮಾಡುವ ಜೀವಿಯನ್ನು ಹಿಡಿಯೋದು ) ಮನೆ ಕಟ್ಟುವುದು, ಗಿರಿಗಿಟಿ ಬೀಡುವುದು, ಸಣ್ಣ ತೊರೆ ಬದಿ ಹೋಗಿ ಬಟ್ಟೆಯಲ್ಲಿ ಇಟ್ಟಿ(ಪುಟ್ಟ ಸಿಗಡಿ ಜಾತಿಯ ಮೀನು) ಹಿಡಿಯುವುದು, ತೆಂಗಿನ ಒಲಿಯ(ಗರಿ) ಹಾವು, ಕಲಾತ್ಮಕ ಗೂಡು, ಪೇಪರ್ ಕಪ್ಪೆ ಮಾಡುವುದು, ಕಣ್ಣಾಮುಚ್ಚಾಲೆ, ಗುರುಗುಂಞ(ಗುಲಗುಂಜಿ), ಚೆನ್ನೆಕಾಯಿ ಹೆಕ್ಕುವುದು, ಗೇರು ಮರದ ಒಯ್ಯಾಲೆ( ಅಡ್ಡ ರೆಂಬೆಯ ಮೇಲೆ ಕುಳಿತು ಮರ ಒಚ್ಚುವುದು(ಅಲ್ಲಾಡಿಸುವುದು) ), ಕೋರಿ ಕಟ್ಟ( ಕೋಳಿ ತಲೆಯಂತೆ ಇರುವ ನೀರಿರುವ ಕಡೆ ಬೆಳೆಯುವ ಸೂಜಿಯಾಕರದ ), ಉರಿ ಮೂಡೆಗೆ ಕೋಲು ಹಾಕುವುದು(ಚಿಗಳಿ ), ಉಪ್ಪು ಮಾರುವುದು ಹೀಗೆ ನಮ್ಮ ತುಳುನಾಡಿನ ಗೊಬ್ಬುಗಳು ಆಧುನಿಕ ವೀಡಿಯೋ ಗೇಮ್ , ಮೊಬೈಲ್ , ಕಂಪ್ಯೂಟರ್ ಆಟಗಳಿಂದ ಹೊರತಾದ ಪಂಚಭೂತಗಳ ಓಡನಾಟದಲ್ಲಿ ಪ್ರಕೃತಿಯ ಕೊಂಡಾಟದ ಜಕ್ಕೆಲಿನಲ್ಲಿ ಕೂಸುಗಳಾಗಿ ಮೈಮರೆಯುವ ಆಟಗಳಾವು.

ಮತ್ತೆ ಹಟ್ಟಿಯಿಂದ ದನಗಳನ್ನು ಬಿಟ್ಟು ಕೋಲು ಹಿಡಿದು ಹಿಂದಿನಿಂದ ಓಡಿಸುವುದು, ಅಜ್ಜಿ ಗೌರಿ ದನ ಕೋಪದಿಂದ ತಿರುಗುವುದು, ಗೇರು ಹಣ್ಣು ಕೀಳಿ , ಬೀಜವನ್ನು ಕುಂಟಾಗೆಗೆ ಹಾಕಿ ಹಣ್ಣನ್ನು ಬೆನ್ನಿಗೆ ಬಿಸಾಡುವುದು, ಕುಂಟಾಲ ಹಣ್ಣಿಗೆ ಕಲ್ಲು ಬಿಸಾಡುವುದು ಹೀಗೆ ಇವುಗಳೇ ಪ್ರತಿದಿನದ ದಿನಚರಿ… ತೋಟದಲ್ಲಿ ಅತ್ತಿಂದಿತ್ತ ಆಡ್ಡಾಡಿದರೆ ಸಾಕು ಹೊಟ್ಟೆಗೆ ಏನಾದರೊಂದು ಬೀಳುತ್ತಿತ್ತು, ಅದಕ್ಕೆ ಹುಳಿಯಾವುದು- ಸಿಹಿಯಾವುದೆಂದು ಗೊತ್ತಾಗದ ರೀತಿಯಲ್ಲಿ ಚವೀಕಾಯಿ, ಕುಂಟಲ ಹಣ್ಣು, ಕೇಪುಲ ಹಣ್ಣು , ಚೂರಿಕಾಯಿ, ಪೇರಳೆ, ಕೊಟ್ಟೆತ ಪರ್ ಂದ್, (ಕೊಟ್ಟೆ ಹಣ್ಣು) ಪುರ್ನಪುಳಿ, ಕಾರೇಕಾಯಿ, ಮಾವು, ಸರೋಳಿ ಕಾಯಿ, ಹೀಗೆ, ಹೀಗೆ ಏನೆಲ್ಲ ತಿನ್ನಬಹುದೆನೋ ಅದೆಲ್ಲ ಹೊಟ್ಟೆರಾಯನಿಗೆ ಕಪ್ಪ ಕಾಣಿಗೆಯಾಗುತಿತ್ತು. ಕೆಲವು ದಿನಗಳು ಹಪ್ಪಳ ಸಂಡಿಗೆಗೆ ಮೀಸಲು ಹಿಂದಿನ ದಿನ ಕತ್ತಲು ಕವಿಯುತಿದ್ದಂತೆ ಬಡ್ಡ ಸೀಮೆಎಣ್ಣೆ ದೀಪವನ್ನು ಮಧ್ಯದಲ್ಲಿ ಇಟ್ಟು ಸುತ್ತಲೂ ಕುಳಿತು ರಚ್ಚೆಯಿಂದ ಹಲಸಿನ ತೊಳೆಗಳನ್ನು ಬಿಡಿಸುವುದು… ಕೈಗೆ ತೆಂಗಿನ ಎಣ್ಣೆಯ ಲೇಪ ಹಾಕಿ ಅಂಗಿ ಚಡ್ಡಿಯಲ್ಲೆಲ್ಲ ಅಂಟು ಅಂಟಿಸಿಕೊಂಡು, ಬಾಯಿಗೂ ಕೆಲಸ ಕೊಡುತ್ತಾ ಕೈಗೂ ಕೆಲಸ ಕೊಡತ್ತಾ ಪ್ರಾಥಮಿಕ ತಯಾರಿ ಮುಗಿಸಿ ಆಯಾಸದಿಂದ ಗಡ್ಡದಾಗಿ ನಿದ್ದೆ ಮಾಡಿದರೆ ಮರುದಿನ ಬೆಳಗ್ಗೆ ಘಮಘಮ ಹಲಸಿನ ಪರಿಮಳ, ಕಡೆಯುವ ಕಲ್ಲಿನ ಗುಡು ಗುಡು ಸದ್ದು ನಮ್ಮನ್ನು ಎಬ್ಬಿಸುತಿತ್ತು. ಒಲಿಯ ಚಾಪೆನ್ನು ನೀರಲ್ಲಿ ನೆನೆಸಿ, ಬಿಡಿಸಿ, ಮಣೆಗಳನ್ನು ಇಟ್ಟು ತಯಾರಾಗುವುದರೊಳಗೆ ಅಜ್ಜಿಯ ಕೈಯಲ್ಲಿ ನಿಂಬೆ ಗಾತ್ರದ ಉಂಡೆಗಳು ಸಿದ್ಧ… ಮತ್ತೆ ಉಂಡೆ ಒತ್ತುವ ಕೆಲಸ ಮಕ್ಕಳಲ್ಲಿ ಹಿರಿಯವನಿಗೆ ಅದರಲ್ಲೂ ಕೆಲವೊಮ್ಮೆ ಪೆಟ್ಟು-ಗುಟ್ಟು ನಡೆಯುತ್ತಿತ್ತು. ಪುಟಾಣಿಗಳಿಗೆ ಮಾಡಿಕೊಟ್ಟ ಅಮೀಬಾ-ಚಂದ್ರನನ್ನು ನಾಜೂಕಾಗಿ ಚಾಪೆಯಲ್ಲಿ ಹರಡುವ ಕೆಲಸ, ಮತ್ತೆ ಪ್ಲಾಸ್ಟಿಕ್ ನಲೋ, ಮಣೆಯಲ್ಲೋ ಅಪ್ಪಚ್ಚಿಯಾದ ಹಸಿ ಹಪ್ಪಲದ ತುಣುಕು ತಿಂದು ರುಚಿ ನೋಡುವ ಕೆಲಸ ಮೇಲಿಂದ ಮೇಲೆ ನಡೆಯುತ್ತಾ ಇರುತಿತ್ತು… ಮುಂದಿನದು ಹಿರಿಯರ ಕೆಲಸ ಹೆಂಚಿನ ಮಾಡಿನ ಮೇಲೆ ನಾಯಿ, ಕೋಳಿ ಸಿಗದ ಜಾಗದಲ್ಲಿ ಇಟ್ಟು , ಹಳೆಯ ಮೀನಿನ ಬಲೆ ಸಿಕ್ಕಿಸಿ ಕನ್ನಡಿ ಇಟ್ಟು ಕಾಗೆಯಿಂದಲೂ ರಕ್ಷಿಸುವುದು. ಇಷ್ಟು ಆಗುವಾಗ ಮಧ್ಯಾಹ್ನದ ಕೋಳಿ ನಿದ್ದೆ ಮುಗಿಸಿ ಸಂಜೆಯಾಗುತಿತ್ತು.

Click Here

ಮತ್ತೆ ನಮ್ಮೊಳಗೆಯೇ ಒಪ್ಪಂದವಾಗಿ ಹತ್ತಿರದ ಮನೆಗಳಿಗೆ ದಾಳಿಯಿಡುವುದು ಇರುತ್ತಿತ್ತು. ಅಲ್ಲಿಯೂ ತಿಂಡಿಗಳದ್ದೇ ಕಾರುಬಾರು…. ಸಂಜೆ ಸೂರ್ಯ ಇಳಿಯುವಾಗ ನಮ್ಮ ಹೊಟ್ಟೆಗೂ , ಮನಸ್ಸಿಗೂ ಖುಷಿ.

ಆಗಾಗ ಅಜ್ಜೆರ್ ನ ಅಂಗಡಿಗೆ ಹೋಗಿ, ಬಾಲಮಂಗಳ , ತುಂತುರು, ಚಂಪಕ ಮತ್ತು ಅತ್ತೆಯ ಮಂಗಳ ಗಳ ಜೊತೆಗೆ ಚಾಕಲೇಟು ತಂದು ಹಂಚಿ ಮೊದಲು ಡಿಂಗನ ಕತೆ, ಮತ್ತೆ ಲಂಬೋದರನ ಶಕ್ತಿಯ ಪರಿಚಯವಾದ ನಂತರ ಉಳಿದ ಕತೆಗಳತ್ತಾ ಕಣ್ಣು ಹಾಯಿಸೊದು… ಸಂಜೆ ಚಾಯಕ್ಕೆ ಅವಲಕ್ಕಿ ಮಾಡಿದರೆ ಅತ್ತೆಯ ಅರ್ಥವಾಗದ ಮಂಗಳದ ಧಾರವಾಹಿಗಳ ಪುಟಗಳನ್ನು ಪೊಟ್ಟಣ ಮಾಡಿ ಹಂಚುವುದು ನಡೆಯುತ್ತಿತ್ತು.

ಇನ್ನೂ ಬೇಸಗೆ ಅಂದರೆ ಕೇಳಬೇಕೇ ನಮ್ಮ ತುಳುನಾಡಿನಲ್ಲಿ ದಿನಾಲೂ ಎಂಬಂತೆ ಜಾತ್ರೆ, ಮದುವೆ, ನೇಮ, ಒತ್ತೆಕೋಲ, ಕಂಬುಲ, ಪೂಜೆ, ಆಟಾ, ಹುಡುಗಿ ನೋಡಲು ಹೋಗುವುದು, ಸೀಮಂತ ಹೀಗೆ… ಮನೆಯವರೊಂದಿಗೆ ಪುಟ್ಟ ಪಿಕಲಾಟದ ಕಪಿಸೈನ್ಯವೂ ರಕ್ಷಣೆಗೂ ಆಗುತ್ತದೆ, ಭಕ್ಷಣೆಗೂ ಆಗುತ್ತದೆ ಎಂದು ಹೊರಡುತ್ತಿತ್ತು.ನನಗೆ ಇಷ್ಡವಾಗುತ್ತಿದ್ದ ಕಾರ್ಯಕ್ರಮವೆಂದರೆ ಬೊಜ್ಜ ಮತ್ತು ಸೀಮಂತ ಇವೆರಡು ಸಾವು ಹುಟ್ಟುಗಳ ಬಂಧವಾದ್ರು ಇವೆರಡರಲ್ಲಿಯು ತಿಂಡಿಯ ಪೊಟ್ಟಣ ಸಿಗುತ್ತದೆಯೆಂದೂ ನಾನು ತಪ್ಪದೇ ಹೋಗುತ್ತಿದ್ದೆ.

ದಿನ ಬಿಟ್ಟು ದಿನ ಬರುವ ನೆಂಟರಿಷ್ಟರು, ಸ್ನೇಹಿತರು, ಪೊಸ ಮಾದಿಮಯೇ-ಮಾದಿಮಾಲ್ ಗಳಿಗೆ ಸಮ್ಮಾನ ಮತ್ತೆ ಆ ತಿಂಡಿ, ತಿಂಡಿ ಪೊಟ್ಟಣ ಆಗಾಗ ಕಾಡುತ್ತದೆ. ಒಂದು ಬೇಸಗೆ ರಜೆಯಲ್ಲಿ 23 ಊರ ಕೋಳಿ ತಿಂದ ದಾಖಲೆಯೂ ಇದೆ ಎಂದರೆ ಇಂದು ನನಗೂ ಅಶ್ಚರ್ಯವಾಗುತ್ತಿದೆ. ಈ ಬಾಲ್ಯದ ಜೀವನ ನೆನಪಿಸಿದರೆ ಅದೆನೋ ಖುಷಿ.

ಇಂದಿನ ಪುಟಾಣಿಗಳಿಗೆ ದೊಡ್ಡರಜೆ ಸಜೆಯಂತೆ ಭಾಸವಾಗುತ್ತಿದೆಯೋ ಏನೋ… ಬಿಸಿಲಿಗೆ ಹೋದರೆ ಕಪ್ಪಾಗುತ್ತಿ.. ಮಣ್ಣಿನಲ್ಲಿ ಆಡಿದರೆ ರೋಗ ಬರುತ್ತದೆ ಎಂದು ನನ್ನ ಸೋದರ ಸೋದರಿಯರು ತಾವಾಡಿದ , ತಿಂದ ತಿನಿಸುಗಳ ಮರೆವಿನ ಮರೆಯಿಂದ ತಮ್ಮ ಮಕ್ಕಳಿಗೆ ಉಪದೇಶ ನೀಡುತ್ತಾರೆ… ಇಂದು ದೊಡ್ಡ ರಜೆ ಹೆಸರಿಗೆ ಮಾತ್ರ ಆ ಕೋಚಿಂಗ್, ಈ ಕ್ಲಾಸ್ಸು , ಬೇಸಗೆ ಶಿಬಿರ , ಇನ್ನೊಂದು , ಮಗದೊಂದು ಮಣ್ಣಂಗಟ್ಟಿ ಅದು ಇದು ಎಂದು ಮಕ್ಕಳನ್ನು ಮಕ್ಕಳಾಗಿಸದೇ ಪ್ರಬುದ್ಧರಾನ್ನಾಗಿಸಲು ಹೊರಟಂತಿದೆ. ಆ ಅಜ್ಜಿ ಮನೆ, ಗೇರು ತೋಪು, ತೆಂಗಿನ ಗೆರಿ, ಕುಂಟಲಾ ಹಣ್ಣು ಎಲ್ಲವೂ ಈಗಲೂ ಇದೆ. ಅದರೆ ಒಂದಷ್ಟು ಅಂಕೆ ಸಂಖ್ಯೆಗಳಲ್ಲಿ ಇಳಿದಿರಬಹುದು, ಸುಣ್ಣ ಬಣ್ಣ ಬಳಿದ ಅಜ್ಜಿ ಮನೆ ಸುಂದರವಾಗಿರಬಹುದಷ್ಟೇ, ಬಾಲ್ಯವೆಂಬುವುದು ವ್ಯಕ್ತಿಯ ಜೀವನದಲ್ಲಿ ಒಮ್ಮೆ ಮಾತ್ರ ಬರುವುದು ಮತ್ತೆಂದು ಅವಕಾಶ ನೀಡದು, ಖಂಡಿತ ವ್ಯವಸ್ಥೆಗೆ ಹೊಂದಿಕೊಳ್ಳಬೇಕು, ಅದರೆ ಅವ್ಯವಸ್ಥೆಯನ್ನೇ ವ್ಯವಸ್ಥೆಯೆಂದು ತಿಳಿದು ರೂಢಿ ಮಾಡಿದರೆ ಯಾಕೋ ತಪ್ಪೆನಿಸುತ್ತದೆ. ಇದರ ಬಗೆಗೆನೇ ಯೆಮಾನಿನ ಕವಿ ಖಲೀಲ್ ಜಿಬ್ರನ್ ಹೀಗೆ ಹೇಳುತ್ತಾನೆ

“ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ ,
ಅವರು ನಿಮ್ಮೊಂದಿಗೆ ಬಂದಿರಬಹುದು, ಆದರೆ ನಿಮ್ಮಿಂದ ಅಲ್ಲ
ಅವರು ನಿಮ್ಮ ಜೊತೆಗಿರಬಹುದು , ಆದರೆ ಅವರು ನಿಮ್ಮ ಸ್ವತ್ತಲ್ಲ ,
ಅವರಿಗೆ ನಿಮ್ಮ ಪ್ರೀತಿ ನೀಡಬಹುದು , ಅದರೆ ವಿಚಾರಗಳನ್ನಲ್ಲ ,
ನೀವು ಅವರ ದೇಹಕ್ಕೆ ಆಶ್ರಯ ನೀಡಿರಬಹುದು , ಅವರ ಅತ್ಮಕಲ್ಲ,
ಅವರಂತಾಗಲು ನೀವು ಪ್ರಯತ್ನಿಸಬಹುದು , ಆದರೆ ಅವರು ನಿಮ್ಮಂತಿರಲು ಬಯಸುವುದು ಬೇಡ ,
ಏಕೆಂದರೆ ಜೀವನ ಹಿಂದಕ್ಕೆ ಚಲಿಸದು , ನಿನ್ನೆಯಲ್ಲಿ ಬದುಕದು ,
ನೀವು ಬಿಲ್ಲಿನಂತೆ, ಅವರು ನಿಮ್ಮಿಂದ ಚಿಮ್ಮಿದ ಜೀವಂತ ಬಾಣಗಳು. “

ಬಾಲ್ಯದಲ್ಲಿ ಬಾಲರು ಬಾಲರಾಗಿಯೇ ಇರಲಿ , ಅವರು ಪ್ರಬುದ್ಧರಾಗುವುದೂ ಅವರಿಗೂ ಶ್ಷೋಭೆಯು ಅಲ್ಲ. ನಿಮ್ಮ ಮುದ್ದು ಕೂಸುಗಳಿಗೆ ಬಾಲ್ಯ ಕೊಡಿ, ದೊಡ್ಡ ರಜೆ ಅನುಭವಿಸಲು ಬಿಡಿ, ಮುಂದೆಂದದಾರೂ ನನ್ನಂತೆ ಅವರನ್ನೂ ಬೇಸಗೆ ರಜೆ ನೆನಪಿಸಬಹುದು.

download

images maxresdefault

Leave a Reply

Your email address will not be published. Required fields are marked *

9 − 8 =