ನಮ್ಮಭೂಮಿಯಲ್ಲಿ ಸ್ವಉದ್ಯೋಗ ಮಾಹಿತಿ ಕಾರ್ಯಾಗಾರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸೆಲ್ಕೋ ಎನರ್ಜಿ, ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆ ಮಣಿಪಾಲ, ತೋಟಗಾರಿಕೆ ಇಲಾಖೆ ಕುಂದಾಪುರ, ಪಶು ವೈದ್ಯಾಧಿಕಾರಿಗಳು ಕುಂದಾಪುರ ಮತ್ತು ವರ್ಕಿಂಗ್ ಚಿಲ್ಡ್ರನ್(ಸಿಡಬ್ಲ್ಯೂಸಿ) ಸಂಸ್ಥೆಯ ಜಂಟಿ ಸಹಭಾಗಿತ್ವದಲ್ಲಿ ಸ್ಥಳೀಯ ಸಮುದಾಯಕ್ಕೆ ಸ್ವ ಉದ್ಯೋಗದ ಮಾಹಿತಿ ಕಾರ್ಯಾಗಾರ ನಮ್ಮಭೂಮಿಯಲ್ಲಿ ನಡೆಯಿತು.

ಸೆಲ್ಕೋ ಎನರ್ಜಿ ಸಂಸ್ಥೆಯ ಗುರುಪ್ರಕಾಶ ಶೆಟಿ, ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆಯ ಉಪನ್ಯಾಸಕಿ ನವ್ಯ, ಸಿಡಬ್ಲ್ಯೂಸಿ ಸಂಸ್ಥೆಯ ನಿರ್ದೇಶಕರಾದ ಶಿವಮೂರ್ತಿ ಭಂಡಾರ್ಕರ್ ಮತ್ತು ನಮ್ಮ ಭೂಮಿಯ ಮಕ್ಕಳ ಪಂಚಾಯತ್‌ನ ಅಧ್ಯಕ್ಷರಾದ ಪ್ರೀತಮ್ ಸೇರಿ ಗಿಡಕ್ಕೆ ಗೊಬ್ಬರ ಮತ್ತು ನೀರು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸೇಲ್ಕೋ ಎನರ್ಜಿಯ ಗುರುಪ್ರಕಾಶ ಶೆಟ್ಟಿ ಮಾತನಾಡಿ, ಹಳ್ಳಿಯಲ್ಲಿ ದಿನನಿತ್ಯದ ಬಳಕೆಯ ವಸ್ತುಗಳನ್ನು ಪಟ್ಟಿ ಮಾಡಿ ಅದರಲ್ಲಿ ಹೆಚ್ಚು ಹೆಚ್ಚು ವಸ್ತುಗಳು ಹಳ್ಳಿಯಲ್ಲಿಯೇ ಉತ್ಪಾದಿಸುವಂತಾದರೆ ಹಳ್ಳಿಯ ಜನ ವಲಸೆ ಹೊಗುವುದನ್ನು ತಪ್ಪಿಸಬಹುದು ಮತ್ತು ಹಳ್ಳಿಯಲ್ಲಿಯೇ ಸ್ವಾವಲಂಬಿ ಜೀವನ ನಡೆಸಬಹುದು ಎಂದರು.

ಮಣಿಪಾಲ ಮಣಿಪಾಲ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆಯ ಉಪನ್ಯಾಸಕರಾದ ನವ್ಯ ಮಾತನಾಡಿ, ಸ್ವಉದ್ಯೋಗದ ಬಗ್ಗೆ ಇರುವ ಹಿಂಜರಿಕೆ ಮತ್ತು ಕೀಳರಿಮೆ ಭಾವನೆಗಳನ್ನು ತೆಗೆದು ಹಾಕಿ ಆತ್ಮವಿಶ್ವಾಸದಿಂದ ಸ್ವಉದ್ಯೋಗವನ್ನು ಪ್ರಾರಂಭಿಸಿ ಎಂದು ಹೇಳುತ್ತಾ ಇಂದಿನ ದಿನಗಳಲ್ಲಿ ಸ್ವ ಉದ್ಯೋಗ ಅನಿವಾರ್ಯವಾಗಿದೆ ಎಂದು ತಿಳಿಸಿ ಮನೆಯಲ್ಲಿಯೇ ಕುಳಿತು ಮಾಡುವ ಉದ್ಯೋಗಗಳ ಮಾಹಿತಿಯನ್ನು ನೀಡಿದರು.

ಕುಂದಾಪುರ ಪಶು ವೈದ್ಯಾಧಿಕಾರಿ ಡಾ. ಸಂತೋಷ ಮಾತನಾಡಿ, ಹೈನುಗಾರಿಕೆ ಮತ್ತು ಕೋಳಿ ಸಾಕಾಣಿಕೆಯಲ್ಲಿ ಸ್ವಚ್ಛತೆ ಮತ್ತು ಪೌಷ್ಠಿಕ ಆಹಾರ ನೀಡುವುದು ಹಾಗೂ ಈ ಉದ್ಯೋಗದಿಂದ ಆಗುವ ಲಾಭದ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.

ಕುಂದಾಪುರ ತೋಟಗಾರಿಕೆ ಇಲಾಖೆಯ ಕಿರಿಯ ಸಹಾಯಕ ನಿದೇರ್ಶಕರಾದ ಸಂಜೀವ ನಾಯ್ಕ್ ಮಾತನಾಡಿ, ಕೃಷಿ ಪೂರಕ ಉದ್ಯೋಗಗಳು ಹಾಗೂ ಸರಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ ನೀವು ಮಾಡುವ ಕೆಲಸದಲ್ಲಿ ಸಂತೋಷವನ್ನು ಕಾಣಬೇಕು ಆಗ ಮನಸ್ಸಿಗೆ ತೃಪ್ತಿ ಸಿಗುತ್ತದೆ ಎಂದು ಸಲಹೆ ಇತ್ತರು.

ಸಮುದಾಯದವರು ಸ್ವ ಉದ್ಯೋಗದಲ್ಲಿ ಶಿಕ್ಷಣದ ಅವಶ್ಯಕತೆ, ಸರಕಾರದ ಸವಲತ್ತುಗಳು ಹಾಗೂ ಹೈನುಗಾರಿಕೆಯಲ್ಲಿ ಮತ್ತು ಕೋಳಿ ಸಾಕಾಣಿಕೆಯಲ್ಲಿ ಆಹಾರ ಪದ್ದತಿ ಮತ್ತು ಲಾಭಾಂಶದ ಕುರಿತು ಪ್ರಶ್ನೋತ್ತರ ಚಟುವಟಿಕೆ ನಡೆಯಿತು.

ಈ ಕಾರ್ಯಕ್ರಮದಲ್ಲಿ ಸ್ಥಳೀಯ ಸಮುದಾಯದ ಮಹಿಳೆಯರು, ಪುರುಷರು ಮತ್ತು, ನಮ್ಮಭೂಮಿಯ ತರಬೇತಿ ಮಕ್ಕಳು, ಸಂಸ್ಥೆಯ ಕಾರ್ಯಕರ್ತರು ಸೇರಿ ಒಟ್ಟೂ70ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

12 + 17 =