ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಯಕ್ಷಗಾನ ಕಲೆಯಲ್ಲಿನ ಭಾಷಾ ಪ್ರಯೋಗ, ಕನ್ನಡ ಭಾಷೆಯ ಸತ್ವವನ್ನು ಜೀವಂತವಾಗಿರಿಸಿದೆ. ಕರಾವಳಿ ಜಿಲ್ಲೆಗಳು ಯಕ್ಷಗಾನದ ನೂರಾರು ಕಲಾವಿದರಿದ್ದು, ಕಲೆಯನ್ನೇ ಉಸಿರಾಗಿಸಿಕೊಂಡವರಾಗಿದ್ದಾರೆ. ಆಧುನಿಕ ಜಗತ್ತಿನ ಮಿತಿಗಳ ನಡುವೆಯೂ ಯಕ್ಷರಂಗ ಶ್ರೀಮಂತವಾಗಿರಲು ಕಲಾರಾಧಕರ ಪ್ರೋತ್ಸಾಹವೇ ಕಾರಣವಾಗಿದೆ ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.
ಅವರು ನಾಗೂರು ಒಡೆಯರ ಮಠ ಶ್ರೀ ಗೋಪಾಲಕೃಷ್ಣ ಸಭಾಭವನದಲ್ಲಿ ಭಾನುವಾರ ಶ್ರೀ ಕೃಪಾಪೋಷಿತ ಯಕ್ಷಗಾನ ಮಂಡಳಿ ಹಟ್ಟಿಯಂಗಡಿ ಹಾಗೂ ಕುಂದಾಪ್ರ ಡಾಟ್ ಕಾಂ ಆಯೋಜಿಸಿದ 2 ದಿನಗಳ ಯಕ್ಷೋತ್ಸವ 2023 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಯಕ್ಷಗಾನ ಮನೊರಂಜನೆಗಷ್ಟೇ ಸೀಮಿತವಾಗಿರದೇ ದೇವರ ಸೇವೆಯೂ ಆಗಿರುವುದರಿಂದ ಆಸಕ್ತರ ನೇತೃತ್ವದಲ್ಲಿ ಮುನ್ನಡೆಯುತ್ತದೆ. ಈ ಕಲೆಗೆ ಅಳಿವೆಂಬುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಕಿರಿಮಂಜೇಶ್ವರ ಗ್ರಾಪಂ ಅಧ್ಯಕ್ಷರಾದ ಶೇಖರ ಖಾರ್ವಿ, ನಾವುಂದ ಗ್ರಾಪಂ ಅಧ್ಯಕ್ಷರಾದ ನರಸಿಂಹ ದೇವಾಡಿಗ, ಸಭಾಭವನ ಮಾಲಿಕರಾದ ಮಂಜುನಾಥ ಉಡುಪ ಮುಖ್ಯ ಅತಿಥಿಗಳಾಗಿದ್ದರು.
ಹಟ್ಟಿಯಂಗಡಿ ಮೇಳದ ಸಂಚಾಲಕರಾದ ರಂಜಿತ್ ಕುಮಾರ್ ಶೆಟ್ಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕುಂದಾಪ್ರ ಡಾಟ್ ಕಾಂ ಸಂಪಾದಕ ಸುನಿಲ್ ಹೆಚ್.ಜಿ. ವಂದಿಸಿದರು.