ನಾಗೂರು: ರಸ್ತೆ ದುರಸ್ತಿಗೆ ಆಗ್ರಹಿಸಿ ನಡೆಸಿದ ಪ್ರತಿಭಟನೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನನೆಗುದಿಗೆ ಬಿದ್ದಿರುವ ನಾಗೂರು-ಹೇರೂರು ರಸ್ತೆಯ ದುರಸ್ತಿ ಕಾರ್ಯವನ್ನು ತಕ್ಷಣ ಕೈಗೆತ್ತಿಕೊಳ್ಳುವಂತೆ ಆಗ್ರಹಿಸಿ ಸುತ್ತಲಿನ ಗ್ರಾಮಸ್ಥರು ಬುಧವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಜನರ ಬೇಡಿಕೆ ಬಗ್ಗೆ ಪತ್ರಕರ್ತರಿಗೆ ವಿವರ ನೀಡಿದ ಹೇರೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಶೋಕಕುಮಾರ ಶೆಟ್ಟಿ ೫ ಕಿಲೋಮೀಟರು ಉದ್ದದ ಈ ರಸ್ತೆಯಲ್ಲಿ ನಡದಾಡಲು ಅಆಧ್ಯವಾಗುವ ರೀತಿಯಲ್ಲಿ ಹಂಡಗುಂಡಿಗಳು ಉಂಟಾಗಿವೆ. ಇದರ ದುರ‍್ಸತಿಗೆ ಎರಡು ವರ್ಷಗಳಿಂದ ಜನ ಆಗ್ರಹಿಸುತ್ತಲೇ ಬಂದಿದ್ದಾರೆ. ಇಲ್ಲಿ ಅನುಮತಿ ಪಡೆದು ಓಡಾಡುತ್ತಿದ್ದ ಎರಡು ಬಸ್‌ಗಳು ಇದೇ ಕಾರಣಕ್ಕೆ ಓಡಾಟ ನಿಲ್ಲಿಸಿವೆ. ಸಂಜೆಯ ಬಳಿಕ ಇಲ್ಲಿ ಆಟೊ ಓಡಿಸುವುದಿಲ್ಲ. ಇಡೀ ರಸ್ತೆಯಲ್ಲಿ ಧೂಳು ಏಳುತ್ತಿದೆ. ಯಡಕಂಟ, ಉಪ್ರಳ್ಳಿ, ಮೇಕೋಡು, ಹೇರೂರು, ನೂಜಾಡಿ, ತಂಕಬೆಟ್ಟು, ಹಳಗೇರಿಯ ೪೦೦೦ ಕುಟುಂಬಗಳು, ರಸ್ತೆಯ ಅಕ್ಕಪಕ್ಕ ಇರುವ ೩ ಹಿರಿಯ ಪ್ರಾಥಮಿಕ, ೨ ಕಿರಿಯ ಪ್ರಾಥಮಿಕ ಶಾಲೆಗಳ, ೪ ಅಂಗನವಾಡಿಗಳ ಸುಮಾರು ೩೦೦ ಮಕ್ಕಳು ಈ ರಸ್ತೆಯನ್ನು ಪ್ರತಿದಿನ ಬಳಸಬೇಕಾಗಿದೆ. ಇವುಗಳ ಜತೆಗೆ ರಸ್ತೆ ಬದಿಯ ಮನೆ, ಅಂಗಡಿಗಳು ಧೂಳಿನ ಸ್ನಾನ ಮಾಡುತ್ತಿವೆ. ಓಡಾಡುವವರು ಮುಖಕ್ಕೆ ಬಟ್ಟೆ ಕಟ್ಟಿಕೊಳ್ಳಬೇಕಾಗಿದೆ. ರಸ್ತೆಯ ಸ್ಥಿತಿ ಸಹಿಸಲು ಅಸಾಧ್ಯ ಎನ್ನುವ ಮಟ್ಟ ತಲಪಿದೆ ಎಂದು ಹೇಳಿದರು.

Call us

Call us

Visit Now

ವಿಧಾನಸಭಾ ಚುನಾವಣೆಯ ಮುನ್ನ ಅಂದಿನ ಶಾಸಕ ಕೆ. ಗೋಪಾಲ ಪೂಜಾರಿ ಈ ರಸ್ತೆಗೆ ೩ ಕೋಟಿ ವಿಶೇಷ ಅನುದಾನ ಮಂಜೂರು ಮಾಡಿಸಿದರು. ಚುನಾವಣೆಯಲ್ಲಿ ಅವರು ಸೋತು, ಬಿ. ಎಂ. ಸುಕುಮಾರ ಶೆಟ್ಟಿ ಶಾಸಕರಾದರು. ಸರ್ಕಾರವೂ ಬದಲಾಯಿತು. ರಸ್ತೆಯನ್ನು ಎರಡು ಭಾಗಗಳಲ್ಲಿ ದುರಸ್ತಿ ಮಾಡಲು ಒಟ್ಟು ರೂ ೨. ೪ ಕೋಟಿ ಮೊತ್ತದ ಅಂದಾಜು ತಯಾರಿಸಿ, ಟೆಂಡರು ಕರೆಯಲಾಯಿತು. ಆದರೆ ಯಾವುದೋ ಕಾರಣದಿಂದ ಟೆಂಡರು ಇನ್ನೂ ಅಂತಿಮಗೊಂಡಿಲ್ಲ ಎನ್ನಲಾಗುತ್ತಿದೆ. ದುರಸ್ತಿ ಕಾರ್ಯ ತಕ್ಷಣ ಆರಂಭವಾಗದೆ ಲೋಕಸಭಾ ಚುನಾವಣೆಯ ನೀತಿಸಂಹಿತೆ ಜಾರಿಯಾದರೆ ದುರಸ್ತಿ ಕಾರ್ಯ ಮಳೆಗಾಲದ ಬಳಿಕ ಆರಂಭವಾಗಬೇಕಾಗುತ್ತದೆ. ಅಲ್ಲಿಯ ತನಕ ತಡೆದುಕೊಳ್ಳುವ ತಾಳ್ಮೆ ಜನರಿಗಿಲ್ಲ. ಅದಕ್ಕಾಗಿ ಈ ಹೋರಾಟ ಎಂದು ಅವರು ತಿಳಿಸಿದರು. ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಈ ರಸ್ತೆಯ ದುರಸ್ತಿಗೆ ತಾವು ಪಟ್ಟ ಶ್ರಮವನ್ನು ವಿವರಿಸಿ ಇಲಾಖೆ ಅನುಸರಿಸಬೇಕಾದ ಪ್ರಕ್ರಿಯೆಗಳ ಕಾರಣಗಳಿಂದ ಕಾಮಗಾರಿ ಆರಂಭ ತಡವಾಗಿದೆ. ಇನ್ನು ಒಂದೆರಡು ದಿನಗಳಲ್ಲಿ ಆರಂಭವಾಗಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಕಿರಿಮಂಜೇಶ್ವರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ, ಹೇರೂರು ಗ್ರಾಮ ಪಂಚಾಯಿತಿ ಸದಸ್ಯ ಯು. ಮಂಜುನಾಥ ಭಟ್, ಜಿಲ್ಲಾ ಪಂಚಾಯಿತಿ ಸದಸ್ಯೆ ಗೌರಿ ದೇವಾಡಿಗ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದರು. ಒಂದು ಹಂತದಲ್ಲಿ ನೀತಿಸಂಹಿತೆ ಜಾರಿ ಆಗುವುದರೊಳಗೆ ದುರಸ್ತಿ ಕಾರ್ಯ ಆರಂಭವಾಗದಿದ್ದರೆ ಲೋಸಭಾ ಚುನಾವಣೆ ಬಹಿಷ್ಕರಿಸುವುದಾಗಿ ಪ್ರತಿಭಟನಾ ನಿರತರು ಘೋಷಿಸಿದರು. ಮಧ್ಯಾಹ್ನದ ಹೊತ್ತಿಗೆ ಸ್ಥಳಕ್ಕೆ ಬಂದ ಇಂಜಿನಿಯರ್ ಮಂಜುನಾಥ ಮತ್ತು ದುರ್ಗಾದಾಸ್ ಇನ್ನು ೭ ದಿನಗಳೊಳಗೆ ಟೆಂಡರು ಪ್ರಕ್ರಿಯೆ ಮುಗಿಸಿ, ಕಾಮಗಾರಿ ಆರಂಭಿಸುವ ಭರವಸೆ ನೀಡಿದರು. ಶಾಸಕರ ಪರವಾಗಿ ಬಂದಿದ್ದ ದೀಪಕ್‌ಕುಮಾರ ಶೆಟ್ಟಿ ಶಾಸಕರು ಶುಕ್ರವಾರ ಬಂದು ಕಾಮಗಾರಿ ಆರಂಭಕ್ಕೆ ಚಾಲನೆ ನೀಡುವರು ಎಂದು ತಿಳಿಸಿದರು. ಆ ಬಳಿಕ ಪ್ರತಿಭಟನೆ ಹಿಂತೆಗದುಕೊಳ್ಳಲಾಯಿತು.

Click here

Call us

Call us

????????????????????????????????????

Leave a Reply

Your email address will not be published. Required fields are marked *

twelve + fourteen =