ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯವರ ಕಲ್ಪನೆಯ ಜನಪ್ರಿಯ ಯೋಜನೆಯಾದ ಮದ್ಯವರ್ಜನ ಶಿಬಿರದಿಂದ ಸಮಾಜದ ಹಲವು ಮದ್ಯ ವ್ಯಸನಿಗಳನ್ನು ಪಾನಮುಕ್ತಗೊಳಿಸಿ ಅವರಿಗೆ ನವಜೀವನ ನಿರ್ಮಾಣಮಾಡಿದೆ ಎಂದು 929ನೇ ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.
ನಾಗೂರು ಶಾಂತೇರಿ ಕಾಮಾಕ್ಷಿ ಸಭಾಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ-ಕುಂದಾಪುರ ಹಾಗೂ ವಿವಿಧ ಸಹಕಾರಿ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ 929ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಶಿಬಿರದ ಯಶಸ್ಸಿಗೆ ಆರ್ಥಿಕವಾಗಿ ಸಹಕರಿಸಿದ ಪರಿಸರದ ಸಹಕಾರಿ ಸಂಘಗಳಿಗೆ, ಅರ್ಪಣಾ ಭಾವದಿಂದ ಶ್ರಮವಹಿಸಿ ನಿಸ್ವಾರ್ಥದಿಂದ ದುಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಬಸ್ರೂರು ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭ ಜನಜಾಗೃತಿ ವೇದಿಕೆ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಮತ್ತು ಯೋಗಗುರು ಸುಬ್ಬಯ್ಯ ದೇವಾಡಿಗ ಇವರನ್ನು ಸನ್ಮಾನಿಸಲಾಯಿತು. ಜಿಪಂ ಸದಸ್ಯೆ ಗೌರಿ ದೇವಾಡಿಗ, ತಾಪಂ ಸದಸ್ಯರಾದ ಮಹೇಂದ್ರ ಪೂಜಾರಿ, ಜಗದೀಶ ಪೂಜಾರಿ, ಧಗ್ರಾಯೋ ತಾಲೂಕು ಯೋಜನಾಧಿಕಾರಿ ಅಮರಪ್ರಸಾದ್ ಶೆಟ್ಟಿ, ಪ್ರಬಸ್ವ-ಸಹಾಯ ಸಂಘ ಒಕ್ಕೂಟ ಕೇಂದ್ರ ಸಮಿತಿ ಅಧ್ಯಕ್ಷ ಚಂದ್ರಶೇಖರ್, ಆರೋಗ್ಯ ಸಹಾಯಕಿ ಫಿಲೋಮಿನಾ ಡಿಸೋಜಾ, ಶಿಬಿರಾಧಿಕಾರಿ ರಾಘವೇಂದ್ರ ಉಪಸ್ಥಿತರಿದ್ದರು.
ಕಿರಿಮಂಜೇಶ್ವರ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಸತೀಶ್ ಎಂ. ನಾಯಕ್ ಸ್ವಾಗತಿಸಿ, ಮಹಾಬಲೇಶ್ವರ ಆಚಾರ್ ವಂದಿಸಿದರು. ಮೇಲ್ವಿಚಾರಕ ಪ್ರಕಾಶ್ ನಿರೂಪಿಸಿದರು. ಒಂದು ವಾರಗಳ ಕಾಲ ಶಿಬಿರದಲ್ಲಿದ್ದ ೧೦೩ ಶಿಬಿರಾರ್ಥಿಗಳು ನವಜೀವನದ ಕನಸಿನ ಹೊಸ ಹುರುಪಿನಲ್ಲಿ ತಮ್ಮ ಕುಟುಂಬಿಗರ ಜೊತೆಗೆ ಮನೆಯ ದಿಕ್ಕಿಗೆ ಹೆಜ್ಜೆ ಹಾಕಿದರು.