ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಾವಲಂಬಿ ಜೀವನ ನಡೆಸಲು ಅನುಕೂಲ ಮಾಡಿಕೊಟ್ಟಿದೆ. ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಬೇಕೆನ್ನುವ ಉದ್ದೇಶದಿಂದ ಸಂಘದ ಸದಸ್ಯರ ಮಕ್ಕಳ ಉನ್ನತ ಶಿಕ್ಷಣಕ್ಕೆ ಸುಜ್ಞಾನ ನಿಧಿ ಮೂಲಕ ಸಹಾಯ ಮಾಡಲಾಗುತ್ತಿದೆ. ಈ ಯೋಜನೆಯ ಸದುಪಯೋಗ ಪಡೆದುಕೊಂಡು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕಾದ ಜವಾಬ್ದಾರಿ ಸ್ವಸಹಾಯ ಸಂಘದ ಸದಸ್ಯರದ್ದಾಗಿದೆ ಎಂದು ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಸತೀಶ ಎಂ.ನಾಯಕ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಾಡ-ಸೇನಾಪುರ ಒಕ್ಕೂಟದ ಆಶ್ರಯದಲ್ಲಿ ನಾಡ-ಗುಡ್ಡೆ ಅಂಗಡಿಯ ಶ್ರೀ ಸೀತಾರಾಮ ಕಲ್ಯಾಣ ಮಂಟಪದಲ್ಲಿ ಭಾನುವಾರ ಜರಗಿದ ಸುಜ್ಞಾನ ನಿಧಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಾಡ ಒಕ್ಕೂಟದ ಅಧ್ಯಕ್ಷೆ ವೀಣಾ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯೋಜನೆಯ ಬೈಂದೂರು ತಾಲೂಕು ಯೋಜನಾಧಿಕಾರಿ ಶಶಿರೇಖಾ ಪಿ. ಶುಭ ಹಾರೈಸಿದರು. ಒಕ್ಕೂಟದ ಎಂಟು ಮಂದಿ ಸದಸ್ಯರಿಗೆ ಸುಜ್ಞಾನ ನಿಧಿ ವಿತರಿಸಲಾಯಿತು ಹಾಗೂ ಒಕ್ಕೂಟದ ಸದಸ್ಯರಿಗೆ ವಿಮಾ ಪಾಲಿಸಿಯನ್ನು ವಿತರಿಸಲಾಯಿತು. ವಲಯ ಮೇಲ್ವಿಚಾರಕಿ ರುಕ್ಮಿಣಿ, ಸೇವಾ ಪ್ರತಿನಿಧಿ ಸವಿತಾ ಹಾಗೂ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು. ಸರೋಜ ಸ್ವಾಗತಿಸಿದರು. ಕುಸುಮ ವಂದಿಸಿದರು.