ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನದಿ ನೀರಿಗೆ ಬಿದ್ದ ಮಗನನ್ನು ರಕ್ಷಿಸಲು ಹೋದ ತಾಯಿಯೂ ನೀರುಪಾಲಾದ ಘಟನೆ ನಾಡ ಗ್ರಾಮದ ಚುಂಗಿಗುಡ್ಡೆಯಲ್ಲಿ ನಡೆದಿದೆ. ಪತ್ರಕರ್ತ ನೋಯೆಲ್ ಚುಂಗಿಗುಡ್ಡೆ ಅವರ ಪತ್ನಿ ರೊಸಾರಿಯಾ (35) ಹಾಗೂ ಮಗ ಶಾನ್ (11) ಸಾವಿಗೀಡಾದ ದುರ್ದೈವಿಗಳು.
ಚುಂಗಿಗುಡ್ಡೆಯ ನದಿ ಪಕ್ಕದಲ್ಲಿ ಶನಿವಾರ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ನಡೆದುಕೊಂಡು ಹೋಗುತ್ತಿದ್ದಾಗ ಬಾಲಕ ನೀರಿಗೆ ಬಿದ್ದಿದ್ದಾನೆ. ಮಗನನ್ನು ರಕ್ಷಿಸಲು ತಾಯಿ ರೊಸಾರಿಯಾ ತಕ್ಷಣವೇ ನದಿಗೆ ಧುಮುಕಿದ್ದಾರೆ. ಆದರೆ ನೀರಿನ ಸೆಳವಿಗೆ ಸಿಕ್ಕ ಇಬ್ಬರೂ ಕೊಚ್ಚಿಕೊಂಡು ಹೋಗಿದ್ದಾರೆ.
ಪ್ರಕರಣ ನಡೆದ ಸ್ಥಳದಲ್ಲೇ ಪುತ್ರ ಶಾನ್ ಮೃತದೇಹ ಸಿಕ್ಕಿದ್ದರೂ, ತಾಯಿಯ ಶವಕ್ಕಾಗಿ ದೋಣಿ ಬಳಸಿ ಜಾಲಾಡಿದ್ದು, ಮರವಂತೆ ಬಳಿ ಮೃತದೇಹ ಪತ್ತೆಯಾಗಿದೆ. ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
