ಕುಂದಾಪುರ: ಎರಡು ದಿನಗಳಿಂದ ನಾಪತ್ತೆಯಾಗಿದ್ದ ಗುಜ್ಜಾಡಿ ನಿವಾಸಿ ಚಂದ್ರ ದೇವಾಡಿಗ (39) ಶನಿವಾರ ಬೆಳಗ್ಗೆ 10.30ರ ಸುಮಾರಿಗೆ ಮನೆ ಸಮೀಪದ ಅಕೇಶಿಯಾ ಹಾಡಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಘಟನೆಯ ವಿವರ: ಕೃಷಿ ಕೂಲಿಕಾರರಾಗಿರುವ ಚಂದ್ರ ದೇವಾಡಿಗ ಎಂದಿನಂತೆ ತನ್ನಿಬ್ಬರು ಮಕ್ಕಳಾದ ಕಿರಣ್ ಮತ್ತು ಅರುಣ್ ಅವರೊಂದಿಗೆ ಏ. 23ರಂದು ಗೇರುಬೀಜ ಹೆಕ್ಕಲು ಪಕ್ಕದ ಗೇರು ಹಾಡಿಗೆ ಹೋಗಿದ್ದರು. ಮಧ್ಯಾಹ್ನದ ವೇಳೆ ಮಕ್ಕಳನ್ನು ಮನೆಗೆ ಹೋಗುವಂತೆ ತಿಳಿಸಿ ಕೆಲಸ ಮುಂದುವರಿಸಿದ್ದರು. ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಗಾಬರಿಗೊಳಗಾದ ಪತ್ನಿ, ಮಕ್ಕಳು, ಮನೆಯವರು ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಏ.24ರಂದು ಗಂಗೊಳ್ಳಿ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದರು. ಶನಿವಾರ ಗೇರು ಹಾಡಿ ಸಮೀಪದ ಅಕೇಶಿಯಾ ಪ್ಲಾಂಟೇಶನ್‌ನಲ್ಲಿ ದುರ್ವಾ ಸನೆ ಹಬ್ಬಿದ್ದು ಸ್ಥಳೀಯರು ನೋಡುವಾಗ ಚಂದ್ರ ದೇವಾಡಿಗ ಹೆಣವಾಗಿದ್ದರು.
ಬಡಕುಟುಂಬ ಕಂಗಾಲು: ಪತ್ನಿ ಪ್ರೇಮ, ಸಹೋದರಿ ಸರೋಜಾ, ತಾಯಿ ಗಂಗಾ ದೇವಾಡಿಗ, ಮಕ್ಕಳಾದ ಕಿರಣ್ (9ನೇ ತರಗತಿ) ಮತ್ತು ಅರುಣ್ (6ನೇ ತರಗತಿ) ಅವರೊಂದಿಗೆ ಜೀವನ ನಡೆಸಿಕೊಂಡಿದ್ದ ಚಂದ್ರ ದೇವಾಡಿಗ ಅನುಮಾನಾಸ್ಪದವಾಗಿ ಸಾವಿಗೀಡಾಗಿ ರುವುದರಿಂದ ಬಡ ಕುಟುಂಬ ಕಂಗಲಾಗಿದೆ. ಸ್ಥಳೀಯರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಕೊಲೆ ಶಂಕೆ: ಗೇರು ಬೀಜ ಹೆಕ್ಕಲು ಹೋದ ಚಂದ್ರ ದೇವಾಡಿಗ ನಾಪತ್ತೆಯಾ ದಂದಿನಿಂದ ಎಡೆಬಿಡದೆ ಹುಡುಕಾಟ ನಡೆಸಿದ್ದೇವೆ. ಶವ ಪತ್ತೆಯಾದ ಜಾಗದ ಲ್ಲಿಯೂ ಹುಡುಕಾಟ ನಡೆಸಿದ್ದೆವು. ನಿನ್ನೆ ಹುಡುಕಾಡಿದ ಸ್ಥಳದಲ್ಲಿ ಇಲ್ಲದ ಮೃತದೇಹ ಇಂದು ಸಿಕ್ಕಿರುವುದು ಸಂಶಯಕ್ಕೆಡೆಮಾಡಿ ಕೊಟ್ಟಿದೆ. ಇದೊಂದು ವ್ಯವಸ್ಥಿತ ಕೊಲೆ ಆಗಿರುವ ಸಾಧ್ಯತೆ ಇರುವುದರಿಂದ ಪೊಲೀಸ್ ಇಲಾಖೆ ಸಮಗ್ರ ತನಿಖೆ ನಡೆಸಬೇಕು ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತೆ ಗಿರಿಜಾ ಒತ್ತಾಯಿಸಿದ್ದಾರೆ.
ಮರಣೋತ್ತರ ಪರೀಕ್ಷೆ: ಮೃತದೇಹದ ಮರಣೋತ್ತರ ಪರೀಕ್ಷೆ ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ನಡೆಸಲಾಗಿದ್ದು, ಪ್ರಾಥಮಿಕ ವರದಿಯಲ್ಲಿ ಇದೊಂದು ಸಹಜ ಸಾವು ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. 2 ವರ್ಷದ ಹಿಂದೆ ಚಂದ್ರ ದೇವಾಡಿಗ ಅಪಘಾತವೊಂದರಲ್ಲಿ ತಲೆಗೆ ಏಟು ತಿಂದಿದ್ದು, ಇದರಿಂದ ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದರು. ಯಾವಾಗಲೂ ತಲೆಸುತ್ತು ಬರುವುದು ನಡೆಯುತ್ತಿತ್ತು. ಇದೇ ಕಾರಣದಿಂದ ಕುಸಿದು ಬಿದ್ದು ಮೃತಪಟ್ಟಿರಬಹುದು ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ. ವಿಷ ಪದಾರ್ಥ ಸೇವಿಸಿರುವುದು ಅಥವಾ ಹತ್ಯೆಗೆ ಕಾರಣವಾಗಿರುವ ಅಂಶಗಳು ಮೇಲ್ನೋಟಕ್ಕೆ ಕಂಡುಬಂದಿಲ್ಲ. ಆದರೂ ಸಾವಿನ ಬಗ್ಗೆ ಶಂಕೆ ವ್ಯಕ್ತವಾಗಿರುವುದರಿಂದ ಇಲಾಖೆ ಸಮಗ್ರ ತನಿಖೆಗೆ ಮುಂದಾಗಿದೆ ಎಂದು ಕುಂದಾಪುರ ಉಪವಿಭಾಗದ ಹಿರಿಯ ಪೊಲೀಸ್ ಅಕಾರಿಗಳು ತಿಳಿಸಿದ್ದಾರೆ.
ಅಪ್ಪ ಚೆನ್ನಾಗಿಯೇ ಇದ್ದರು: ಅಪ್ಪ ಚೆನ್ನಾಗಿಯೇ ಇದ್ದರು. ಗೇರು ಬೀಜ ಕೊಯ್ಯಲು ನಮ್ಮನ್ನು ಕರೆದುಕೊಂಡು ಹೋದವರು ಮಧ್ಯಾಹ್ನದ ಹೊತ್ತು ನಮ್ಮನ್ನು ಮನೆಗೆ ಕಳುಹಿಸಿ ನಿಧಾನ ಬರುತ್ತಿದ್ದೇನೆ ಎಂದಿದ್ದರು. ಮತ್ತೆ ಮನೆಗೆ ಬರಲೇ ಇಲ್ಲ. ಇಂದು ಶವವಾಗಿದ್ದಾರೆ ಅನ್ನುವುದನ್ನು ನಂಬಲಾಗುತ್ತಿಲ್ಲ ಎಂದು ಮತರ ಪುತ್ರ ಕಿರಣ್ ತಿಳಿಸಿದ್ದಾನೆ.
ಡಿವೈಎಸ್ಪಿ ಭೇಟಿ: ಇಲ್ಲಿನ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಬೈಂದೂರು ಸರ್ಕಲ್ ಇನ್ಸ್‌ಪೆಕ್ಟರ್ ಸುದರ್ಶನ್, ಗಂಗೊಳ್ಳಿ ಪಿಎಸ್‌ಐ ಸುಬ್ಬಣ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಮೃತ ವ್ಯಕ್ತಿ ಗೇರುಬೀಜ ಸಂಗ್ರಹಿಸಿದ ಚೀಲ ಮತ್ತು ಒಂದು ಚಪ್ಪಲಿ ಪತ್ತೆಯಾಗಿದೆ. ಮೃತದೇಹದ ಅಡಿ ಗೇರು ಬೀಜ ಚೀಲ ಹುದುಗಿತ್ತು. ಮತದೇಹದ ಮುಖ, ಕಾಲುಗಳಲ್ಲಿ ಗಾಯದ ಗುರುತು ಗೋಚರಿಸಿದೆ.
ಪ್ರಕರಣದ ಸಮಗ್ರ ತನಿಖೆ: ಪ್ರಕರಣದ ಸಮಗ್ರ ತನಿಖೆ ನಡೆಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕ್ರಮ ತೆಗೆದುಕೊಳ್ಳಲಿದೆ. ಸಹಜ ಸಾವೇ, ಕೊಲೆಯೇ ಬಗ್ಗೆ ತನಿಖೆ ನಡೆಸ ಲಾಗು ವುದು. ಪ್ರಾಥಮಿಕ ವರದಿ ಪ್ರಕಾರ ಸಹಜ ಸಾವು ಎಂದು ತಿಳಿದು ಬಂದಿ ದ್ದರೂ ಕೂಡ ಕೂಲಂಕಷ ತನಿಖೆ ಮುಂದು ವರಿಯಲಿದೆ ಎಂದು ಡಿವೈ ಎಸ್ಪಿ ಮಂಜುನಾಥ್ ಶೆಟ್ಟಿ ತಿಳಿಸಿದ್ದಾರೆ.
ಕೃಪೆ: ವಿಕ