ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಅರೆಶಿರೂರು ಮೂಕಾಂಬಿಕಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಅರೆಹೊಳೆ ಶಿವರಾಮ ಮಧ್ಯಸ್ಥ ತಮ್ಮ ಅಧ್ಯಾಪನ ವೃತ್ತಿಯಲ್ಲಿ 25 ವರ್ಷ ಪೂರೈಸಿದ ಘಟ್ಟವನ್ನು ಮತ್ತು ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಹಿರಿಮೆಯನ್ನು ತನ್ನ ಸಾಧನೆಗೆ ಕಾರಣರಾದವರನ್ನು ಸ್ಮರಿಸಿ ಗೌರವಿಸುವ ಮೂಲಕ ವಿಶಿಷ್ಟವಾಗಿ ಆಚರಿಸಿದರು. ಗುರುಗಳು, ಹಿರಿಯರು, ಗೆಳೆಯರು, ಬಂಧುಗಳ ನೆರವಿನಿಂದ ಏರ್ಪಡಿಸಿ ಸಾರ್ಥಕ ಕ್ಷಣ ಅನುಭವಿಸಿದರು. ಎಲ್ಲರ ಹರಕೆ, ಹಾರೈಕೆ ಸ್ವೀಕರಿಸಿದರು.
ನಾವುಂದದ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ರವಿವಾರ ನಡೆದ ಕಾರ್ಯಕ್ರಮದ ಹಿರಿತನ ವಹಿಸಿದವರು ಮಧ್ಯಸ್ಥರನ್ನು ಮುಖ್ಯೋಪಾಧ್ಯಾಯರಾಗಿ ನೇಮಕ ಮಾಡಿದ್ದ ಕೊಲ್ಲೂರು ದೇವಳದ ಅಂದಿನ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆಯವರು.
ಶಿವರಾಮ ಮಧ್ಯಸ್ಥ ಶಿಕ್ಷಕ ತರಬೇತಿಯ ಅವಧಿಯಲ್ಲಿ ಕಾಲೇಜಿನ ಪ್ರಾಂಶುಪಾಲರಾಗಿದ್ದ ಯು. ರಾಘವೇಂದ್ರ ಐತಾಳ್ ಅವರಿಗೆ ಗುರು ನಮನ ಸಲ್ಲಿಸಿದರು. ಅವರ ಪ್ರಾಥಮಿಕ ಶಿಕ್ಷಣದ ಗುರುಗಳಾದ ಮಹಾಲಿಂಗ ಕೊಠಾರಿ, ಎಂ. ಜಿ. ಹೆಗಡೆ, ಗೋಪಾಲ ಶೆಟ್ಟಿ, ಪ್ರೌಢ, ಪದವಿಪೂರ್ವ ಹಂತದಲ್ಲಿ ಬೋಧಿಸಿದ್ದ ಸಿ. ಸೀತಾರಾಮ ಮಧ್ಯಸ್ಥ, ಎಸ್. ಜನಾರ್ದನ ಅವರನ್ನು ವಂದಿಸಿ, ಸ್ಮರಿಸಿದರು. ಕೋಡಿ, ಅರೆಶಿರೂರು, ಹೊಸೂರು, ಬೀಸಿನಪಾರೆಯಲ್ಲಿ ಶಿಕ್ಷಕ ಹುದ್ದೆ ನಿರ್ವಹಿಸುವಾಗ ತಮ್ಮನ್ನು ಬೆಂಬಲಿಸಿದ್ದ ವಂಡಬಳ್ಳಿ ಜಯರಾಮ ಶೆಟ್ಟಿ, ಕೋಡಿ ಮಾಧವ ಪೂಜಾರಿ, ಸೆಳ್ಕೋಡು ಸೂರ್ಯನಾರಾಯಣ ಭಟ್ಟ, ಗೋಳಿಹೊಳೆ ರಾಜು ಪೂಜಾರಿ, ದೇವಲ್ಕುಂದ ಅಶೋಕ ಶೆಟ್ಟಿ, ಶಿಕ್ಷಣಾಧಿಕಾರಿ ಚಂದ್ರನಾಯ್ಕ್, ಸಹಶಿಕ್ಷಕಿ ಗೀತಾ ಎಚ್, ಕಚೇರಿ ಸಹಾಯಕ ಉದಯ ಶೆಟ್ಟಿ, ದೈಹಿಕ ಶಿಕ್ಷಣ ಶಿಕ್ಷಕ ರವಿಶಂಕರ ಹೆಗ್ಡೆ, ಬಂಧುಗಳಾದ ಪಾಂಡೇಶ್ವರ ಮಂಜುನಾಥ ಹೊಳ್ಳ, ನಿಟ್ಟೂರು ರಮಾನಂದ ಕಾರಂತ, ಅರೆಹೊಳೆ ಸೂರ್ಯನಾರಾಯಣ ಮಧ್ಯಸ್ಥ, ಹಳ್ಳಿಹೊಸೂರು ವಿಶ್ವೇಶ್ವರ ಮಯ್ಯ ಅವರಿಗೆ ನೆನಪಿನ ಕಾಣಿಕೆ ನೀಡಿ ಕೃತಜ್ಞತೆ ಸಲ್ಲಿಸಿದರು. ಪತ್ನಿ ಅರುಂಧತಿ ವೇದಿಕೆಯ ಮೇಲಿನ ಎಲ್ಲ ಕೈಂಕರ್ಯಗಳಿಗೆ ಸಹಾನುಕೂಲೆಯಾದರೆ ಸಹೋದರ ಗಣೇಶ ಮಧ್ಯಸ್ಥ, ಸತೀಶ ಮಧ್ಯಸ್ಥ, ವೆಂಕಟೇಶ ಮಧ್ಯಸ್ಥ ಸಹವರ್ತಿಯಾದರು. ಮಾತನಾಡಿದ ಎಲ್ಲ ಹಿರಿಯರು ಶಿವರಾಮ ಮಧ್ಯಸ್ಥರ ಯಶಸ್ಸಿಗೆ ಶ್ರದ್ಧೆ, ಶ್ರಮ, ಪ್ರಾಮಾಣಿಕತೆ ಕಾರಣ ಎಂದು ಹೇಳಿ ಇನ್ನಷ್ಟು ಯಶಸ್ಸು ಲಭಿಸಲೆಂದು ಹರಸಿದರು. ಸ್ನೇಹಿತರು, ಬಂಧುಗಳು ಹಾಡಿನ ಮೂಲಕ ರಂಜಿಸಿದರು. ಬಂದವರೆಲ್ಲ ಸತ್ಕಾರ ಕೂಟದಲ್ಲಿ ಭಾಗಿಗಳಾದರು; ವಿಭಿನ್ನ, ವಿಶಿಷ್ಟ ಕಾರ್ಯಕ್ರಮ ಎಂದು ಉದ್ಗರಿಸಿದರು.