ನುಡಿಸಿರಿಗೆ ಕಲರ್‌ಫುಲ್ ದೀಪಗಳ ಮೆರಗು

ಯಜಾಸ್ ದುದ್ದಿಯಂಡ | ಕುಂದಾಪ್ರ ಡಾಟ್ ಕಾಂ
ಆಳ್ವಾಸ್ ನುಡಿಸಿರಿ ಎಂದರೆ ಸಂಭ್ರಮ, ಸಡಗರ ಅದೊಂದು ಕನ್ನಡ ನಾಡುನುಡಿ ಸಂಸ್ಕೃತಿಯ ವೈಭವದ ಹಬ್ಬ. ವಿದ್ಯಾರ್ಥಿ ಶಕ್ತಿ, ಜಾನಪದದ ತಾಕತ್ತು ಮತ್ತು ಕೃಷಿಯ ಸಮೃದ್ಧಿಯ ಕನಸು ಮೇಳೈಸಿರುವ ಈ ಹಬ್ಬ ಹತ್ತು ಹಲವು ವಿಶೇಷತೆಗಳನ್ನು ಹೊಂದಿದೆ. ನುಡಿಹಬ್ಬದ ಪ್ರಮುಖ ಆಕರ್ಷಣೆ ಎಂದರೆ ವಿದ್ಯುತ್ ದೀಪ ಅಲಂಕಾರ.ಈ ಕನ್ನಡ ನಾಡುನುಡಿಯ ಹಬ್ಬಕ್ಕೆ ಆಳ್ವಾಸ್ ಕಾಲೇಜಿನ ಅವರಣ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಕಾಲೇಜಿನ ಪ್ರತಿ ಕಟ್ಟಡದ ಗೋಡೆಗಳು ಝಗಮಗಿಸುವ ವಿವಿಧ ಬಣ್ಣಗಳ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಈ ಬಣ್ಣದ ದೀಪಗಳು ನುಡಿಸಿರಿಯ ಮೆರಗನ್ನು ಮತಷ್ಟು ಹೆಚ್ಚಿಸಿವೆ.

ನಾನಾ ಬಗೆಯ ಬೆಳಕನ್ನು ಸೂಸುವ ಬಗೆಬಗೆಯ ವಿನ್ಯಾಸದ ಮನಮೋಹಕ ಬೆಳಕಿನ ವೈಭವ ನೋಡುಗರಲ್ಲಿ ಹಬ್ಬದ ಸಡಗರವನ್ನು ಹುಟ್ಟಿಸಿವೆ. ಇಡೀ ಆಳ್ವಾಸ್ ಆವರಣ ಕಣ್ಣು ಕೋರೈಸುವ ವಿದ್ಯುತ್ ದೀಪಗಳಿಂದ ಶೃಂಗಾರಗೊಂಡು ಜನರನ್ನು ಆಕರ್ಷಿಸುತ್ತಿದೆ. ಕಣ್ಣು ಹಾಯಿಸಿದಷ್ಟು ಝಗಮಗಿಸುವ ದೀಪಗಳಿಂದ ಹೂಸ ಬೆಳಕಿನ ಲೋಕದಂತೆ ಅಲಂಕಾರಗೊಂಡಿದೆ. ಲಕ್ಷಾಂತರ ವಿವಿಧ ಬಣ್ಣದ ಸಣ್ಣ ಬಲ್ಬ್, ಟ್ಯೂಬ್ ಲೈಟ್,ಎಲ್‌ಇಡಿ ಬಲ್ಬ್‌ಗಳು ಹೀಗೆ ಹಲವಾರು ಬಗೆಯ ಬಲ್ಬ್‌ಗಳನ್ನು ಕಟ್ಟಡಗಳು ಮಾತ್ರವಲ್ಲದೆ ಬೀದಿ ಉದ್ದಕ್ಕೂ ಅಳವಡಿಸಿದ್ದಾರೆ.ವೃತ್ತಕಾರ,ತ್ರಿಭುಜಕಾರ ಹೀಗೆ ಹಲವು ಆಕಾರಗಳ ಬಣ್ಣಬಣ್ಣದ ವಿದ್ಯುತ್ ದೀಪಗಳನ್ನು ಆಳವಡಿಸಲಾಗಿದೆ. ಕಾಲೇಜಿನ ಉದ್ಯಾನವನಕ್ಕೆ ವಿದ್ಯುತ್ ದೀಪಗಳಿಂದಾಗಿ ರಮಣೀಯವಾದ ಹೊಸ ಕಳೆ ಬಂದಿದೆ. ಉದ್ಯಾನವನ ನಡುವೆ ಇರುವ ಕಾರಂಜಿ ಕಲರ್‌ಫುಲ್ ದೀಪಗಳಿಂದ ವಿವಿಧ ರೀತಿಯಲ್ಲಿ ವಯ್ಯಾರದ ನೃತ್ಯ ಮಾಡುತ್ತ ನೀರು ಚಿಮ್ಮಿಸುತ್ತ ಮನಮೋಹಕವಾಗಿ ನಿಂತಿದೆ. ಹಲವರು ಈ ಬಣ್ಣ ಬಣ್ಣದ ದೀಪಗಳ ಮುಂದೆ ಬಣ್ಣ ಬಣ್ಣದ ಸೆಲ್ಫೀ ಕ್ಲಿಕಿಸುತ್ತಾ ಸಂಭ್ರಮಿಸುತ್ತಿದ್ದಾರೆ.

ಈ ವೈಭವಪೂರಿತ ಹಬ್ಬದಲ್ಲಿ ಅರ್ಥಪೂರ್ಣ ಸಾಹಿತ್ಯಕ್ಕೆ ಕೊಡುಗೆಯಾಗಿರುವ ಹಲವು ಸಂಭಾಗಣಗಳು ನುಡಿಸಿರಿಯ ಪ್ರಮುಖ ಅಂಗವಾಗಿದೆ.ಈ ವೇದಿಕೆಗಳ ಶೃಂಗರಿಸುವ ರೀತಿ ಆಕರ್ಷಣಿಯವಾಗಿದೆ.ಸಂಭಾಗಣದ ವೇದಿಕೆಯಲ್ಲಿ ಕಲರ್‌ಫುಲ್ ಎಲ್‌ಇಡಿ ವಿದ್ಯುತ್ ದೀಪಗಳು ಇದ್ದರೆ ಸಂಭಾಗಣದ ಉದ್ದಕ್ಕೂ ಸಂಪ್ರದಾಯಿಕ ತೂಗುದೀಪಗಳನ್ನು ಅಳವಡಿಸಲಾಗಿದೆ. ಸಾಂಪ್ರದಾಯಿಕವಾಗಿ ಬಟ್ಟೆಗಳಿಂದ ತಯಾರಿಸಿದ ಗೂಡುದೀಪಗಳಿಂದಾಗಿ ಸಭಾಂಗಣಗಳಿಗೆ ಹಬ್ಬದ ಕಳೆ ಬಂದಿದೆ. ಕೇವಲ ಸಭಾಂಗಣ ಮಾತ್ರವಲ್ಲದೇ ಕಾಲೇಜಿನ ಮುಂಭಾಗ, ಬೀದಿಗಳಲ್ಲಿ ಕೂಡ ಗೂಡುದೀಪಗಳನ್ನು ತೂಗಿಬಿಡಲಾಗಿದೆ. ಪಾಶ್ಚಾತ್ಯ ದೀಪಗಳ ಜೊತೆಗೆ ಮೇಳೈಸಿ ನಿಂತಿರುವ ಸಾಂಪ್ರದಾಯಿಕ ಗೂಡುದೀಪಗಳು ನುಡಿಸಿರಿಯ ಸಾಂಸ್ಕೃತಿಕ-ಸಾಂಪ್ರದಾಯಿಕ ಶ್ರೀಮಂತಿಕೆಯನ್ನು ಹೆಚ್ಚಿಸಿವೆ.

Leave a Reply

Your email address will not be published. Required fields are marked *

3 × four =