ನೇಪಾಳ ತಂಡದಿಂದ ವಂಡ್ಸೆ, ಮರವಂತೆಯಲ್ಲಿ ತ್ಯಾಜ್ಯ ನಿರ್ವಹಣೆ ಅಧ್ಯಯನ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಭಾರತ ಸರ್ಕಾರದ ಸ್ವಚ್ಛ ಭಾರತ್ ಅಭಿಯಾನದ ಅಧ್ಯಯನ ನಡೆಸಲು ಪ್ರವಾಸ ಕೈಗೊಂಡಿರುವ ನೇಪಾಳ ಸರ್ಕಾರದ ಫೆಡರಲ್ ವ್ಯವಹಾರಗಳ ಸಚಿವಾಲಯದ ತಂಡವು ವಂಡ್ಸೆ ಮತ್ತು ಮರವಂತೆ ಗ್ರಾಮ ಪಂಚಾಯಿತಿಗೆ ಸೋಮವಾರ ಭೇಟಿ ನೀಡಿತು.

ಇಲ್ಲಿನ ಘನ, ದ್ರವ ಸಂಪನ್ಮೂಲ ನಿರ್ವಹಣಾ ಘಟಕಗಳನ್ನು ಪರಿಶೀಲಿಸಿ, ಆ ಮಾದರಿಯನ್ನು ತಮ್ಮ ದೇಶದಲ್ಲಿ ಅಳವಡಿಸಿಕೊಳ್ಳುವ ಸಾಧ್ಯಾಸಾಧ್ಯತೆಯನ್ನು ಅರಿಯುವುದು ಈ ಭೇಟಿಯ ಉದ್ದೇಶವಾಗಿತ್ತು.

ವಂಡ್ಸೆಯಲ್ಲಿ ತಂಡವನ್ನು ಸ್ವಾಗತಿಸಿದ ಪಂಚಾಯಿತಿ ಅಧ್ಯಕ್ಷ ಉದಯಕುಮಾರ ಶೆಟ್ಟಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆ, ಅಂಗಡಿಗಳ ಕಸ ಸಂಗ್ರಹಣೆ, ಗ್ರಾಮ ಸ್ವಚ್ಛತೆ, ತ್ಯಾಜ್ಯದ ವೈಜ್ಞಾನಿಕ ವಿಂಗಡಣೆ, ಮೌಲ್ಯವರ್ಧಿಸಿ ಮಾರಾಟ, ಹಸಿಕಸ ಗೊಬ್ಬರವಾಗಿ ಮಾರ್ಪಾಡು, ಗೋಶಾಲೆಯಲ್ಲಿ ಬಳಕೆ, ದಾಖಲಾತಿ ನಿರ್ವಹಣೆ, ಘಟಕ ನಿರ್ವಹಣೆ, ಲಾಭಾಂಶ ಇತ್ಯಾದಿ ಮಾಹಿತಿ ನೀಡಿದರು.

ಗ್ರಾಮದ ಜತೆಗೆ ಚಿತ್ತೂರು, ಇಡೂರು-ಕುಂಜ್ಞಾಡಿ ಪಂಚಾಯಿತಿಗಳ ತ್ಯಾಜ್ಯವನ್ನೂ ಇಲ್ಲಿ ನಿರ್ವಹಿಸಲಾಗುತ್ತದೆ ಎಂದು ಅವರಿಗೆ ತಿಳಿಸಿದರು.

ಜಿಲ್ಲೆಯಲ್ಲಿ ಈ ಮಾದರಿಯ ಘಟಕಗಳ ಆರಂಭಕ್ಕೆ ಕಾರಣರಾದ ಗ್ರೀನ್ ಇಂಡಿಯಾ ಸರ್ವೀಸ್‌ನ ಯೋಜನಾ ನಿರ್ದೇಶಕ ವೆಲ್ಲೂರು ಶ್ರೀನಿವಾಸನ್ ಯೋಜನೆಯ ಸಮಗ್ರ ಪರಿಚಯ ಮಾಡಿಕೊಟ್ಟರು.

ಉಡುಪಿ ಜಿಲ್ಲಾ ಪಂಚಾಯಿತಿ ಸಹಾಯಕ ಯೋಜನಾಧಿಕಾರಿ ಜೇಮ್ಸ್ ಡಿಸಿಲ್ವಾ, ಕುಂದಾಪುರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ್, ಸಂಯೋಜಕರಾದ ಸೂರಜ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಾರದಾ ರುದ್ರಯ್ಯ ಆಚಾರ್ಯ, ಸದಸ್ಯರಾದ ಉದಯ ಕೆ.ನಾಯ್ಕ್, ಸಿಂಗಾರಿ, ಅಭಿವೃದ್ಧಿ ಅಧಿಕಾರಿಗಳಾದ ರೂಪಾ ಗೋಪಿ, ದಯಾನಂದ, ಮಹೇಶ ಕಾಡೂರು, ಕಾರ್ಯದರ್ಶಿ ಶಂಕರ ಆಚಾರ್ಯ, ಘಟಕ ಮೇಲ್ವಿಚಾರಕಿ ವಿಜಯಲಕ್ಷ್ಮೀ, ಸ್ಥಳೀಯ ಮುಖಂಡರಾದ ಮಹಮ್ಮದ್ ರಫೀಕ್, ದಿವಾಕರ ಸಿಬ್ಬಂದಿ ಇದ್ದರು.

ಅಧ್ಯಯನ ತಂಡ ಗ್ರಾಮ ಪಂಚಾಯಿತಿ ನಡೆಸುತ್ತಿರುವ ಸ್ವಾವಲಂಬನಾ ಕೇಂದ್ರಕ್ಕೂ ಭೇಟಿ ನೀಡಿತು.

ಮರವಂತೆಗೆ ಭೇಟಿ: ಮರವಂತೆಯ ಘಟಕಕ್ಕೆ ಭೇಟಿ ನೀಡಿದ ನೇಪಾಳ ಪ್ರತಿನಿಧಿಗಳನ್ನು ಕೊರಗರ ಸಾಂಪ್ರದಾಯಿಕ ಡೊಳ್ಳು ವಾದನದೊಂದಿಗೆ ಬರಮಾಡಿಕೊಳ್ಳಲಾಯಿತು. ಬೆತ್ತದ ಬುಟ್ಟಿಯಲ್ಲಿ ಹಣ್ಣು, ಕಾಯಿ, ಜೇನುತುಪ್ಪ ನೀಡಿ ಗೌರವಿಸಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ಆರ್.ಕೆ., ಸದಸ್ಯರಾದ ಕೃಷ್ಣ ಮೊಗವೀರ, ನಾಗರಾಜ ಖಾರ್ವಿ, ಆನಂದ ಬಿಲ್ಲವ, ಸುಗುಣಾ, ಅಭಿವೃದ್ಧಿ ಅಧಿಕಾರಿ ರಿಯಾಜ್ ಅಹಮ್ಮದ್, ಕರ ಸಂಗ್ರಾಹಕ ಶೇಖರ ಇದ್ದರು. ತಂಡದ ಸದಸ್ಯರು ಭೇಟಿಯ ನೆನಪಿಗಾಗಿ ಗಿಡಗಳನ್ನು ನೆಟ್ಟರು.

ನೇಪಾಳ ತಂಡದ ಸದಸ್ಯರು
ನೇಪಾಳ ಸರ್ಕಾರದ ಫೆಡರಲ್ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಕೇದಾರ್ ಪ್ರಸಾದ್ ಪನೆರು, ಆಂತರಿಕ ಕಾರ್ಯದರ್ಶಿ ರಿಷಿ ರಾಜ್ ಆಚಾರ್ಯ, ಮಹೇಂದ್ರ ಕುಮಾರ್ ಸಕೋಟ, ಕೈಗಾರಿಕೆ ಮತ್ತು ವಾಣಿಜ್ಯ ವಿಭಾಗದ ಆಂತರಿಕ ಕಾರ್ಯದರ್ಶಿ ಜ್ಞಾನೇಂದ್ರ ಪರಜುಲಿ, ಅರಣ್ಯ ಮತ್ತು ಪರಿಸರ ಸಚಿವಾಲಯದ ಮೆಕ್ಯಾನಿಕಲ್ ಎಂಜಿನಿಯರ್ ತುಳ್ಸಿ ನಾರಾಯಣ್ ಮಹಾರಾಜನ್, ನಗರ ಅಭಿವೃದ್ಧಿ ಸಚಿವಾಲಯದ ಸಿವಿಲ್ ಎಂಜಿನಿಯರ್ ಪ್ರಬಿನ್ ಶ್ರೇಷ್ಠ, ಬಿರೇಂದ್ರನಗರ ಪುರಸಭೆ ಮೇಯರ್ ದೇವ್ ಕುಮಾರ್ ಸುಬೆದಿ, ಅಧಿಕಾರಿ ಯಮ್ಲಾ ಗಿರಿ, ಸೊಲುದುಖುಂದ ಪುರಸಭೆ ಉಪ ಮೇಯರ್ ಕಲ್ಪನಾ ರೈ, ಮುಖ್ಯಾಧಿಕಾರಿ ಐಷಾ ಖಾಟೂನ್, ಯೋಜನಾ ಮ್ಯಾನೇಜರ್ ಸಕಿನಾ ಖಾಟೂನ್ ಅಧ್ಯಯನ ತಂಡದಲ್ಲಿ ಇದ್ದರು.

Leave a Reply

Your email address will not be published. Required fields are marked *

two + 20 =