ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಪಂಚಗಂಗಾವಳಿ ನದಿ ತೀರದ ಪಂಜರ ಮೀನು ಕೃಷಿ ಪ್ರದೇಶಕ್ಕೆ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು, ವಿಜ್ಞಾನಿಗಳು ಹಾಗೂ ಜಲ ತಜ್ಞರ ತಂಡದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ, ಕಳೆದ ಕೆಲವು ದಿನಗಳಿಂದ ಕುಂದಾಪುರದ ಪಂಚಗಂಗಾವಳಿ ನದಿ ಪ್ರದೇಶದಲ್ಲಿ ನಿಗೂಢವಾಗಿ ಸಾಯುತ್ತಿರುವ ಪಂಜರ ಕೃಷಿಯಲ್ಲಿನ ಮೀನುಗಳ ಕುರಿತು ತಜ್ಞರು ಅಧ್ಯಯನ ನಡೆಸಿ ವರದಿ ನೀಡಲಿದ್ದಾರೆ. ವರದಿ ಬಂದ ಬಳಿಕ ನಿಯಮಾವಳಿಗಳ ಅಡಿಯಲ್ಲಿ ಪರಿಹಾರ ನೀಡಲು ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಈ ಭಾಗದಲ್ಲಿ ಅಂದಾಜು 115 ಪಂಜರಗಳಲ್ಲಿ ಮೀನು ಕೃಷಿ ನಡೆಯುತ್ತಿದೆ. ಇಲ್ಲಿನ ಮೀನುಗಳು ಸಾವನ್ನಪ್ಪುತ್ತಿರುವುದರಿಂದ ಕೃಷಿಕರು ಅಪಾರ ಪ್ರಮಾಣದ ನಷ್ಟವನ್ನು ಅನುಭವಿಸುತ್ತಿದ್ದಾರೆ. ನಿರ್ದಿಷ್ಟ ಕಾರಣ ಪತ್ತೆಯಾಗಿಲ್ಲ. ನೀರಿನಲ್ಲಿನ ಲವಣಾಂಶಗಳ ಏರುಪೇರು. ಪಂಜರದೊಳಗೆ ಉಸಿರಾಟ ಸಮಸ್ಯೆ. ನೀರನ್ನು ಕಲುಷಿತಗೊಳಿಸುತ್ತಿರುವ ಕೊಳಚೆ ನೀರು ಹಾಗೂ ಕಳೆದ ಕೆಲವು ದಿನಗಳಿಂದ ಸಮುದ್ರ ನೀರಿನಲ್ಲಿ ಆಗುತ್ತಿರುವ ಬಣ್ಣ ಬದಲಾವಣೆ ಬಗ್ಗೆ ತಜ್ಞರು ಹಾಗೂ ವಿಜ್ಞಾನಿಗಳು ನೀರಿನ ಮಾದರಿ ಪರೀಕ್ಷೆ ನಡೆಸಿ, ವರದಿ ನೀಡಿದ ಬಳಿಕಪರಿಹಾರ ಕ್ರಮ ಕೈಗೊಳ್ಳಲಾಗುವುದು’ ಎಂದರು.
ಮಂಗಳೂರಿನ ಮೀನುಗಾರಿಕಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಗಿರೀಶ್ ಎಸ್. ಕೆ. ತಮ್ಮ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಮೃತ ಮೀನುಗಳ ಮಾದರಿಯನ್ನು ಸಂಗ್ರಹಿಸಿದ್ದು, ವರದಿ ಬರುವ ನಿರೀಕ್ಷೆ ಇದೆ. 3–4 ತಿಂಗಳ ಬೆಳವಣಿಗೆಯ ಮರಿಗಳಲ್ಲಿ ಮಾತ್ರ ಸಮಸ್ಯೆ ಕಾಣಿಸುತ್ತಿದೆ. ಪ್ರಾಥಮಿಕ ಪರಿಶೀಲನೆಯ ವೇಳೆ ಸಾವಿಗೆ ವೈರಸ್ ಕಾರಣ ಎನ್ನುವ ಸಂಶಯ ವ್ಯಕ್ತವಾಗಿದ್ದರೂ, ಇದು ನಿಖರವಾಗಿಲ್ಲ. ಪ್ರಮಾಣೀಕೃತವಲ್ಲದ ಮೀನು ಮರಿಗಳನ್ನು ಬೆಳೆಸಿದರೂ, ವೈರಸ್ ಬಾಧೆ ತಗುಲುವ ಸಾಧ್ಯತೆಯಿದೆ. ಸತ್ತ ಮೀನುಗಳನ್ನು ನದಿಗೆ ಎಸೆಯುವುದರಿಂದಲೂ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ. ಒಂದೇ ನದಿಯಲ್ಲಿ ಹಲವು ಪಂಜರಗಳಿರುವುದರಿಂದ ಒಂದು ಗೂಡಿನಲ್ಲಿ ಕಾಣಿಸಿಕೊಂಡ ಕಾರಣಗಳೇ ಇನ್ನೂಳಿದ ಪಂಜರಗಳಿಗೂ ವಿಸ್ತರಣೆಯಾಗುವ ಕುರಿತು, ಕಲುಷಿತವಾಗಿರುವ ನೀರು ಹಾಗೂ ಕಳೆದ ಕೆಲವು ದಿನಗಳಿಂದ ಸಮುದ್ರದಲ್ಲಿನ ನೀರು ನೀಲಿ ಹಾಗೂ ಹಸಿರು ಬಣ್ಣದಲ್ಲಿ ಕಾಣಿಸಿದ್ದರಿಂದ ನೀರಿನ ಪರೀಕ್ಷೆಗಾಗಿ ವಿಧಿ ವಿಜ್ಞಾನ ಕೇಂದ್ರದ ಜಲ ತಜ್ಞರು ಮಾದರಿಯನ್ನು ಸಂಗ್ರಹಿಸಿದ್ದು, ವರದಿ ನೀಡಲಿದ್ದಾರೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದರು
ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ತಿಪ್ಪೇಸ್ವಾಮಿ, ಉಪ ನಿರ್ದೇಶಕ ಗಣೇಶ್, ಸಹಾಯಕ ನಿರ್ದೇಶಕಿ ಹೇಮಲತಾ , ಶಿವಕುಮಾರ, ಕುಂದಾಪುರ ಪುರಸಭೆಯ ಉಪಾಧ್ಯಕ್ಷ ಸಂದೀಪ್ ಖಾರ್ವಿ, ಪಂಜರ ಮೀನು ಕೃಷಿ ಸಂಘಟನೆಯ ಪ್ರಮುಖರಾದ ರವಿರಾಜ್ ಖಾರ್ವಿ, ಕುಮಾರ ಖಾರ್ವಿ ಇದ್ದರು.