ಪಡುಕೋಣೆ: ನಾರಾಯಣ ಶ್ರಮಶಕ್ತಿ ಪ್ರಶಸ್ತಿ ಪ್ರದಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು : ದಿ. ನಾರಾಯಣ ಪಡುಕೋಣೆ ಅವರ ಎರಡನೆಯ ಪುಣ್ಯತಿಥಿಯಂದು ಅವರ ’ಹಕ್ಕಿಗೂಡು’ ಮನೆಯಲ್ಲಿ ಮಂಗಳವಾರ ನಡೆದ ’ನಾರಾಯಣ ಶ್ರಮಶಕ್ತಿ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ ಜರುಗಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ಉಪನ್ಯಾಸಕ, ಹಿರಿಯ ಪತ್ರಕರ್ತ ಎಸ್. ಜನಾರ್ದನ ಮರವಂತೆ ಮಾತನಾಡಿ ಶ್ರಮಜೀವಿಯಾಗಿ ಸಾರ್ಥಕ ಬದುಕು ರೂಪಿಸಿಕೊಂಡು ಕುಟುಂಬವನ್ನು ಉನ್ನತಿಗೆ ಒಯ್ದಿದ್ದ ಪಡುಕೋಣೆ ನಾರಾಯಣ ಗಾಣಿಗ ಅವರ ಪುಣ್ಯತಿಥಿಯಂದು ಅವರಂತೆ ಬದುಕಿದ್ದ ಒಬ್ಬರನ್ನು ಗುರುತಿಸಿ ಅವರಿಗೆ ಶ್ರಮಶಕ್ತಿ ಪ್ರಶಸ್ತಿ ನೀಡುತ್ತಿರುವುದು ಒಂದು ಅಪೂರ್ವದ ಮತ್ತು ಶ್ಲಾಘನೀಯ ಉಪಕ್ರಮ ಎಂದು ನಿ ಹೇಳಿದರು.

ನಾರಾಯಣ ಗಾಣಿಗರು ವರ್ಷದ ಎಲ್ಲ ಕಾಲಗಳಲ್ಲೂ ಕಾಯಕವನ್ನು ಧಾರ್ಮಿಕ ಶ್ರದ್ಧೆಯಂತೆ ನಡೆಸಿದವರು. ತಮ್ಮ ಕೊನೆಗಾಲದ ವರೆಗೂ ಆರೋಗ್ಯಯುತ ಜೀವನ ನಡೆಸಿ ಕುಟುಂಬದ ಕಿರಿಯರಿಗೆ ಮೌಲ್ಯಾಧರಿತ ಜೀವನಪಥವನ್ನು ತೋರಿದವರು. ಅವರ ವಾರ್ಷಿಕ ಸ್ಮರಣೆಯನ್ನು ಕಳೆದ ವರ್ಷದಂತೆ ಈ ವರ್ಷವೂ ’ಶ್ರಮಶಕ್ತಿ ಪ್ರಶಸ್ತಿ’ ಪ್ರದಾನದ ಮೂಲಕ ನಡೆಸುತ್ತಿರುವುದರ ಹಿಂದೆ ಅವರು ತಮ್ಮ ಮುಂದಿನ ಪೀಳಿಗೆಗೆ ವರ್ಗಾಯಿಸಿದ ಆದರ್ಶದ ಬದುಕು, ಪರಿಶುದ್ಧ ಪರಂಪರೆ ಕೆಲಸ ಮಾಡಿದೆ. ಸುಮಾರು ೪ ದಶಕಗಳುದ್ದಕ್ಕೆ ಕಟ್ಟಿಗೆ ಒಡೆಯುವ ಅತ್ಯಂತ ಕಠಿಣ ಕಾಯಕ ನಡೆಸಿ, ಅದರದೇ ದುಡಿಮೆಯಿಂದ ಸುಶಿಕ್ಷಿತ ಕುಟುಂಬವನ್ನು ರೂಪಿಸಿದ ಪಡುಕೋಣೆ ಭಂಡಾರಮನೆ ನಾಣು ಯಾನೆ ನಾರಾಯಣ ನಾಯ್ಕರಿಗೆ ಈ ಪ್ರಶಸ್ತಿ ನೀಡುತ್ತಿರುವುದು ನಾರಾಯಣ ಗಾಣಿಗರಿಗೆ ಅವರ ಕುಟುಂಬ ಸಲ್ಲಿಸಿದ ಅರ್ಥಪೂರ್ಣ ಗೌರವ ಮತ್ತು ಸಂಸ್ಮರಣೆ ಎಂದು ಅವರು ಹೇಳಿದರು.

ಗೋಪಾಲಕೃಷ್ಣ ವಿವಿಧೋದ್ದೇಶ ಸೇವಾ ಸಹಕಾರಿ ಸಂಘದ ಅಧ್ಯಕ್ಷ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಕೆ. ರಮೇಶ ಗಾಣಿಗ, ಸಂಘದ ನಿರ್ದೇಶಕಿ ಶಶಿಕಲಾ ನಾರಾಯಣ, ಕಾರ್ಮಿಕ ಮುಖಂಡ ಸುರೇಶ ಕಲ್ಲಾಗರ ಹಿರಿಯರ ಪುಣ್ಯತಿಥಿಯನ್ನು ವಿಭಿನ್ನವಾಗಿ ನಡೆಸಿದ ನಾರಾಯಣ ಗಾಣಿಗ ಕುಟುಂಬದ ಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು. ಉಪಸ್ಥಿತರಿದ್ದ ಅತಿಥಿಗಳು ಶ್ರಮಜೀವಿ ನಾಣು ಯಾನೆ ನಾರಾಯಣ ನಾಯ್ಕ್ ಅವರಿಗೆ ಈ ಸಾಲಿನ ನಾರಾಯಣ ಶ್ರಮಶಕ್ತಿ ಪ್ರಶಸ್ತಿ ಪ್ರದಾನ ಮಾಡಿದರು.

ಆಯ್ಕೆ ಸಮಿತಿಯ ರಾಜೀವ ಪಡುಕೋಣೆ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಾರಾಯಣ ಗಾಣಿಗ ಅವರ ಪುತ್ರ, ’ಜನಪ್ರತಿನಿಧಿ’ ವಾರಪತ್ರಿಕೆಯ ಸಂಪಾದಕ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮದ ಆಶಯವನ್ನು ವಿವರಿಸಿದರು. ರಾಜಗುರು ವಂದಿಸಿದರು. ಪಿ. ಎನ್. ಶ್ರೀಧರ ಪಡುಕೋಣೆ, ಶ್ರೀನಿವಾಸ, ನಾರಾಯಣ ಗಾಣಿಗರ ಬಂಧುಗಳು, ಅಭಿಮಾನಿಗಳು ಇದ್ದರು. ಎಲ್ಲರೂ ಭೋಜನಕೂಟದಲ್ಲಿ ಪಾಲ್ಗೊಂಡರು.

Leave a Reply

Your email address will not be published. Required fields are marked *

eighteen − 15 =